Homeಕರ್ನಾಟಕಕೆಎಚ್ಐಆರ್‌ಸಿಟಿ ಯೋಜನೆ | ಸಚಿವ ಎಂ ಬಿ ಪಾಟೀಲ್‌ರಿಂದ ಪಾತ್ಯಕ್ಷಿಕೆ ವೀಕ್ಷಣೆ, ಸಾವಿರ ಎಕರೆಯಲ್ಲಿ ಸಿಟಿ...

ಕೆಎಚ್ಐಆರ್‌ಸಿಟಿ ಯೋಜನೆ | ಸಚಿವ ಎಂ ಬಿ ಪಾಟೀಲ್‌ರಿಂದ ಪಾತ್ಯಕ್ಷಿಕೆ ವೀಕ್ಷಣೆ, ಸಾವಿರ ಎಕರೆಯಲ್ಲಿ ಸಿಟಿ ನಿರ್ಮಾಣ

ಬೆಂಗಳೂರು ನಗರದ ಸಮೀಪ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಕೆಎಚ್ಐಆರ್ (KHIR – Knowledge, Health, Innovation and Research) ಸಿಟಿಯ ವಿನ್ಯಾಸ ಮತ್ತು ರೂಪುರೇಷೆ ಕುರಿತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಬೋಸ್ಟನ್‌ ಕನ್ಸಲ್ಟೆನ್ಸಿ ಗ್ರೂಪ್ (ಬಿಸಿಜಿ) ಸಿದ್ಧಪಡಿಸಿರುವ ಪ್ರಾತ್ಯಕ್ಷಿಕೆಯನ್ನು ಗುರುವಾರ ವೀಕ್ಷಿಸಿದರು.

ಜೊತೆಗೆ, ಅಧಿಕಾರಿಗಳು ಮತ್ತು ಪರಿಣತರೊಂದಿಗೆ ಯೋಜನೆಯ ಸಂಬಂಧ ಮೊದಲ ಹಂತದ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಉದ್ದೇಶಿತ ಕೆಎಚ್ಐಆರ್ ಸಿಟಿಯಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಮೂಲ ಮಾದರಿಗಳ ಅಭಿವೃದ್ಧಿಗೆ (ಪ್ರೋಟೋಟೈಪ್ಸ್) ಒತ್ತು ಕೊಡಲಾಗುವುದು” ಎಂದರು.

“ಇಲ್ಲಿ ತಯಾರಿಕಾ ಚಟುವಟಿಕೆಗಳು ನಡೆಯುವುದಿಲ್ಲ. ಮೊದಲ ಹಂತದಲ್ಲಿ ಒಟ್ಟು 1,000 ಎಕರೆಯಲ್ಲಿ ಈ ಸಿಟಿ ಬರಲಿದ್ದು, ತಲಾ 200-300 ಎಕರೆಗಳಂತೆ ಹಂತಹಂತವಾಗಿ ಅಭಿವೃದ್ಧಿಪಡಿಸಬೇಕು ಎಂಬ ಸಲಹೆಯನ್ನು ತಜ್ಞರು ನೀಡಿದ್ದಾರೆ” ಎಂದು ಹೇಳಿದರು.

“ಕೆಎಚ್ಐಆರ್ ಸಿಟಿ ಸಂಪೂರ್ಣವಾಗಿ ಖಾಸಗಿ ಉದ್ದಿಮೆಗಳ ಹೂಡಿಕೆಯಿಂದ ಆಗಲಿದೆ. ಸರಕಾರವು ಇದಕ್ಕೆ ಭೂಮಿಯನ್ನು ಒದಗಿಸಲಿದೆ. ಈ ಸಂಬಂಧ ಜಗತ್ತಿನ ಬೇರೆಬೇರೆ ದೇಶಗಳಲ್ಲಿ ಇರುವ ಇಂತಹ ಸಿಟಿಗಳ ಅಧ್ಯಯನ ಮಾಡಲಾಗಿದೆ” ಎಂದು ವಿವರಿಸಿದರು.

“ಉದ್ದೇಶಿತ ಸಿಟಿಯು ರಸ್ತೆ, ಮೆಟ್ರೋ, ಸಬರ್ಬನ್ ರೈಲಿನ ತರಹದ ಅತ್ಯುತ್ತಮ ಸಂಪರ್ಕ ಜಾಲ ಹೊಂದಿರಬೇಕಾಗುತ್ತದೆ. ಜೊತೆಗೆ ನಗರದಿಂದ ಒಂದು ಗಂಟೆ ಕಾಲದ ಪ್ರಯಾಣದಲ್ಲಿ ಈ ಸಿಟಿಯನ್ನು ತಲುಪುವಂತೆ ಇರಬೇಕು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ” ಎಂದು ತಿಳಿಸಿದರು.

“ಈ ಸಿಟಿಯ ಶೇ 15ರಷ್ಟು ಜಾಗದಲ್ಲಿ ಸಂಶೋಧನಾ ವಿ.ವಿ.ಗಳು, ಶೈಕ್ಷಣಿಕ ಸಂಸ್ಥೆಗಳು, ಶೇ.15ರಷ್ಟು ಪ್ರದೇಶದಲ್ಲಿ ಆರೋಗ್ಯಸೇವಾ ಉದ್ದಿಮೆಗಳು, ಶೇ.20ರಷ್ಟು ಜಾಗದಲ್ಲಿ ನಾನಾ ಉದ್ಯಮಗಳ ಆರ್ & ಡಿ ಕೇಂದ್ರಗಳು ಮತ್ತು ಕಾರ್ಪೊರೇಟ್ ಕಚೇರಿಗಳು ಮತ್ತು ಶೇ.10ರಷ್ಟು ಜಾಗದಲ್ಲಿ ಸ್ಟಾರ್ಟಪ್ಸ್, ಶೇ.20ರಷ್ಟು ಜಾಗದಲ್ಲಿ ವಸತಿ ಸಮುಚ್ಚಯಗಳು, ಶೇ.15ರಷ್ಟು ಪ್ರದೇಶದಲ್ಲಿ ವಾಣಿಜ್ಯ ಅಂಗಡಿ ಮುಂಗಟ್ಟುಗಳು ಮತ್ತು ಶೇ.5ರಷ್ಟು ಜಾಗದಲ್ಲಿ ಸರಕಾರಿ ಕಚೇರಿಗಳು ಹಾಗೂ ನಾಗರಿಕ ಸೇವಾಕೇಂದ್ರಗಳು ತಲೆ ಎತ್ತಲಿವೆ” ಎಂದು ಅವರು ಮಾಹಿತಿ ನೀಡಿದರು.

“ಮೊದಲ ಹಂತದ ಸಾವಿರ ಎಕರೆಯಲ್ಲಿ ಶೇ.35ರಷ್ಟು ಪ್ರದೇಶವು ಹಸಿರು ಹೊದಿಕೆಗೆ ಮೀಸಲಿಡಬೇಕು ಎಂದು ಸಲಹೆ ಬಂದಿದೆ. ಅಲ್ಲದೆ ತಲಾ ಶೇ.5ರಷ್ಟು ಜಾಗವನ್ನು ರಸ್ತೆಗಳಿಗೆ ಮತ್ತು ಸಾಮಾನ್ಯ ನಾಗರಿಕ ಸೇವೆಗಳಿಗೆ ಇಡಬೇಕು. ಶೇ.55ರಷ್ಟು ಜಾಗವನ್ನು ಕೆಎಚ್ಐಆರ್ ಸಿಟಿಗಾಗಿ ಬಳಸಿಕೊಳ್ಳಬೇಕು ಎಂದು ಪರಿಣತರು ಹೇಳಿದ್ದಾರೆ” ಎಂದು ಪಾಟೀಲ್ ಹೇಳಿದರು.

“ಉದ್ದೇಶಿತ ಸಿಟಿಯ ನಿರ್ಮಾಣಕ್ಕಾಗಿ ಸರಕಾರ ಮತ್ತು ಮಾಸ್ಟರ್ ಡೆವಲಪರ್ ನಡುವೆ ಸಮನ್ವಯತೆ ಇರುವಂತೆ ನೋಡಿಕೊಳ್ಳಲು ವಿಶೇಷ ಸಂಸ್ಥೆಯೊಂದನ್ನು (ಎಸ್ಪಿವಿ) ಸ್ಥಾಪಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜತೆಗೆ ಹೂಡಿಕೆ ಪ್ರೋತ್ಸಾಹಿಸಲು ಆರು ಬಗೆಯ ಪ್ರೋತ್ಸಾಹಕ ಕ್ರಮಗಳ ಬಗ್ಗೆ ಪರಿಶೀಲನೆ ನಡೆದಿದೆ” ಎಂದು ತಿಳಿಸಿದರು.

ಬೋಸ್ಟನ್‌ ಕನ್ಸಲ್ಟನ್ಸಿ ಗ್ರೂಪ್ ನ ಹಿರಿಯ ಸಲಹೆಗಾರ ರಾಂಚ್ ಕಿಮ್ಬಾಲ್, ಕಂಪನಿಯ ಮೂಲಸೌಕರ್ಯ ವಿಭಾಗದ ಮುಖ್ಯಸ್ಥ ಸುರೇಶ್ ಸುಬುಧಿ ಮತ್ತು ಅಭಿವೃದ್ಧಿ ತಜ್ಞ ಅದಿಲ್ ಇಕ್ರಂ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments