“ನೋಟಕ್ಕೆ ಹೃದಯವಂತಿಕೆಯ ಸ್ಪರ್ಷ ಸಿಕ್ಕಾಗ ಅದ್ಭುತ ಫೋಟೋ ಜರ್ನಲಿಸ್ಟ್ ಹುಟ್ಟುತ್ತಾನೆ. ಆತ ಆ ಕ್ಷಣದಲ್ಲಿ ತೆಗೆದ ಚಿತ್ರ ಚರಿತ್ರೆಯಾಗುತ್ತದೆ” ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ಬೆಂಗಳೂರು ಫೋಟೋ ಜರ್ನಲಿಸ್ಟ್ ಸಂಘ ಆಯೋಜಿಸಿದ್ದ “ವಿಶ್ವ ಛಾಯಾಗ್ರಾಹಕ ದಿನ”ವನ್ನು ಉದ್ಘಾಟಿಸಿ ಮಾತನಾಡಿದರು.
“ಮಗು ಮಾತಾಡುವುದಕ್ಕಿಂತ ಮೊದಲು ನೋಟದಿಂದಲೇ ಜಗತ್ತನ್ನು ಗ್ರಹಿಸುತ್ತದೆ. ನೋಟಕ್ಕೆ ಭಾಷೆಯ, ಪದಗಳ, ವಾಕ್ಯಗಳ ಹಂಗಿಲ್ಲ. ಪ್ರೀತಿ, ಪ್ರೇಮದ ಅಂಕುರ ಆಗೋದು ನೋಟದಿಂದಲೇ ಹೊರತು, ಮಾತಿನಿಂದಲ್ಲ. ಅದಕ್ಕೇ “Love at First Sight” ಎಂದು ಹೇಳೋದು. ಹೀಗಾಗಿ ಫೋಟೋ ಜರ್ನಲಿಸ್ಟ್ ಗಳಿಗೆ ನೋಟ, ಒಳನೋಟ ಬಹಳ ಮುಖ್ಯ” ಎಂದರು.
“ಫೋಟೋ ಜರ್ನಲಿಸ್ಟ್ ಗಳೇ ಸಂಘಟಿಸಿರುವ ಇವತ್ತಿನ ಕಾರ್ಯಕ್ರಮದಲ್ಲಿ ನನಗೆ ಕೆವಿನ್ ಕಾರ್ಟರ್ ಮತ್ತು ಸಂಗೊಳ್ಳಿಯ ಸಂಗವ್ವ ಇಬ್ಬರೂ “ಫೋಟೋ ಜರ್ನಲಿಸಂನ ದೃಶ್ಯ ಪಠ್ಯಗಳು” ಎಂದು ಹೇಳಲು ಇಚ್ಚಿಸುತ್ತೇನೆ. ಆಫ್ರಿಕಾದ ಫೋಟೋ ಜರ್ನಲಿಸ್ಟ್ ತೆಗೆದ ಒಂದು ಫೋಟೋ ಇವತ್ತಿಗೂ ತೀವ್ರ ಚರ್ಚೆಯ ಸಂಗತಿಯಾಗಿಯೇ ಉಳಿದಿದೆ” ಎಂದು ಹೇಳಿದರು.
“ಯುದ್ಧ ಸಂತ್ರಸ್ಥ ಸುಡಾನ್ ದೇಶದಲ್ಲಿ ತೆಗೆದ ಫೋಟೋ ಅದು. ಗಂಜಿ ಕೇಂದ್ರಕ್ಕೆ ತೆವಳುತ್ತಿದ್ದ ಒಂದು ಮಗು ಹಸಿವಿನಿಂದ ನೆಲಕ್ಕೇ ತಲೆಕೊಟ್ಟು ನಿತ್ರಾಣಗೊಂಡಿದೆ. ಅಲ್ಲೇ ಒಂದು ರಣಹದ್ದು ಮಗುವನ್ನೇ ತಿನ್ನಲು ಹೊಂಚು ಹಾಕಿ ಕುಳಿತಿದೆ. ಈ ಫೋಟೋಗೆ 1994 ರಲ್ಲಿ ವಿಶ್ವಶ್ರೇಷ್ಠ ಪುಲಿಟ್ಜರ್ ಪ್ರಶಸ್ತಿ ಬಂತು. ಆದರೆ ಪ್ರಶಸ್ತಿ ಪಡೆದ ಕೆವಿನ್ ಕಾರ್ಟರ್ ಮೂರು ತಿಂಗಳಲ್ಲಿ ಅಳುಕಿನಿಂದ ಆತ್ಮಹತ್ಯೆ ಮಾಡಿಕೊಂಡರು. ಇದು ಪತ್ರಿಕಾ ವೃತ್ತಿಯ ಚರಿತ್ರೆಯಲ್ಲಿ ಅಳಿಸಲಾಗದ ಒಂದು ಪಠ್ಯ” ಎಂದರು.
“ಕೆವಿನ್ ತೆಗೆದ ಒಂದು ಫೋಟೋ ಹುಟ್ಟಿಸಿದ ಪ್ರಶ್ನೆಗಳು ಆತನನ್ನು ಆತ್ಮಹತ್ಯೆಗೆ ದೂಡಿದರೆ, ಅದೊಂದು ಫೋಟೋದ ಮೇಲೆ ನೂರಾರು ಭಾಷೆಗಳಲ್ಲಿ ಕೋಟಿಗಟ್ಟಲೆ ಪದಗಳು, ವಾಕ್ಯಗಳಲ್ಲಿ ಚರ್ಚೆ ನಡೆಯಿತು. ಹೀಗಾಗಿ ನೋಟವೇ ಒಂದು ಭಾಷೆ. ಇದು ವಿಶ್ವ ಭಾಷೆಯಾಗಿದೆ. ಹಾಗೆಯೇ ಒಂದೂ ಮಾತು, ಒಂದೇ ಒಂದು ಪದದ ಸಹವಾಸವಿಲ್ಲದೆ ಸಂಗೊಳ್ಳಿಯ ಸಂಗವ್ವ ವಿಶ್ವಕ್ಕೇ ಪರಿಚಯವಾದರು. ಸರ್ಕಾರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಘೋಷಿಸಿದಾಗ ಕುಹಕ, ಅಣಕ, ಟೀಕೆ, ವಿಮರ್ಷೆಗಳ ಮಹಾಪೂರವೇ ಹರಿಯುತ್ತಿತ್ತು. ಆದರೆ, ಉಚಿತ ಬಸ್ ಹತ್ತುವಾಗ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಸರ್ಕಾರಿ ಬಸ್ ನ ಮೆಟ್ಟಿಲುಗಳಿಗೆ ನಮಸ್ಕರಿಸಿದ ಒಂದು ಫೋಟೋ ಎಲ್ಲಾ ಕುಹಕ, ಅಣಕಗಳನ್ನು ಅಳಿಸಿಹಾಕಿತು. 24 ಗಂಟೆಯಲ್ಲಿ ಸಂಗವ್ವ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿಬಿಟ್ಟರು. ಹೀಗಾಗಿ ಕೆವಿನ್ ಕಾರ್ಟರ್ ಮತ್ತು ಸಂಗೊಳ್ಳಿಯ ಸಂಗವ್ವ ಫೋಟೋ ಜರ್ನಲಿಸಂನ ಎರಡು ಪಠ್ಯಗಳು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
“ವರದಿಗಳು, ಮಾತುಗಳು, ಪದಗಳು ಸುಳ್ಳು ಹೇಳಬಹುದು ಅಥವಾ ಸತ್ಯವನ್ನು ತಿರುಚಬಹುದು. ಆದರೆ, ಫೋಟೋಗಳು, ನೋಟಗಳು ಸುಳ್ಳು ಹೇಳುವುದಿಲ್ಲ. ನಾವು ಬರೆಯುವ ಸುದ್ದಿಗಳಿಗೆ ಸತ್ಯದ ಮೊಹರೆ ಒತ್ತುವುದು ಫೋಟೋಗಳು. ಫೋಟೋಗ್ರಫಿ ಪತ್ರಿಕೋದ್ಯಮದ ಅವಿಭಾಜ್ಯ ಅಂಗ. ಫೋಟೋಗಳು ಘಟನೆಯ ನೈಜ ಚಿತ್ರಣವನ್ನು ಓದುಗರ ಗ್ರಹಿಕೆಗೆ ಒದಗಿಸುತ್ತವೆ” ಎಂದು ತಿಳಿಸಿದರು.
“ಒಂದು ವರದಿಯನ್ನು ಸಂಪಾದಕರು ತೆಗೆದು ಪಕ್ಕಕ್ಕಿಡಬಹುದು. ಆದರೆ ಉತ್ತಮವಾದ ಒಂದು ಫೋಟೋವನ್ನು ಯಾರೂ ಪಕ್ಕಕ್ಕಿಡುವುದಿಲ್ಲ. ಆದ್ದರಿಂದ ಪತ್ರಿಕೆಗಳಲ್ಲಿ ಲಭ್ಯವಿರುವ ಸ್ಪೇಸ್ ಅನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳಿ” ಎಂದು ಕೆವಿಪಿ ಕರೆ ನೀಡಿದರು.
ಡೆಕ್ಕನ್ ಹರಾಲ್ಡ್ ಸಂಸ್ಥೆಯ ಮುಖ್ಯಸ್ಥರಾದ ಕೆ.ಎನ್.ಶಾಂತಕುಮಾರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಹಿರಿಯ ಫೋಟೋ ಜರ್ನಲಿಸ್ಟ್ ಭಾಗ್ಯಪ್ರಕಾಶ್, ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷರಾದ ಮೋಹನ್, ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅವರು ಉಪಸ್ಥಿತರಿದ್ದರು.