ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೊಂದು ಅತ್ಯಂತ ಘೋರ ದುರಂತ, ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.
ಎಕ್ಸ್ ತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, “ಮೃತಪಟ್ಟ ಕನ್ನಡಿಗರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.
“ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಬುಧವಾರ ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗಿದೆ” ಎಂದು ಹೇಳಿದ್ದಾರೆ.
“ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ನಮ್ಮ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆ” ಎಂದು ಹೇಳಿದ್ದಾರೆ.