Homeಅಭಿಮನ್ಯುಕೆಬಿಜೆಎನ್‌ಎಲ್ ಎಂಡಿ ಶಿವಕುಮಾರ್ ಅಮಾನತು

ಕೆಬಿಜೆಎನ್‌ಎಲ್ ಎಂಡಿ ಶಿವಕುಮಾರ್ ಅಮಾನತು

ರಾಜ್ಯ ಜಲಸಂಪನ್ಮೂಲ ಇಲಾಖೆಯ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಎಸ್. ಶಿವಕುಮಾರ್ ಅವರನ್ನು ಸರ್ಕಾರ ಸೇವೆಯಿಂದ ಅಮಾನತುಗೊಳಿಸಿದೆ. ಇವರು ತಮ್ಮ ಅವಧಿಯಲ್ಲಿ ನಡೆಸಿರುವ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಇನ್ನು ಇವರು ಮುಖ್ಯ ಇಂಜಿನಿಯರ್ ಹುದ್ದೆಗೂ ಅರ್ಹರಲ್ಲದವರು! ಸೇವಾ ಜ್ಯೇಷ್ಠತೆ ಹೊಂದಿದ ಹಲವು ಇಂಜಿನಿಯರುಗಳಿದ್ದರೂ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೇವಾ ಜ್ಯೇಷ್ಠತೆ ಹೊಂದಿರದ ಇವರನ್ನು ಈ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಾಡಿದ್ದೇ ಒಂದು ದೊಡ್ಡ ಪವಾಡ. ಇಂತಹವರಿಂದ ಸರ್ಕಾರ ಏನನ್ನು ನಿರೀಕ್ಷಿಸಲು ಸಾಧ್ಯ? ಅದರಲ್ಲೂ ತಮ್ಮ ಸೇವಾವಧಿಯ ಉದ್ದಕ್ಕೂ ಹಲವಾರು ಆರೋಪಗಳಿಗೆ ಗುರಿಯಾಗುತ್ತ ಬಂದ ಇವರು ಒಂದು ದೊಡ್ಡ ಹುದ್ದೆ ದಕ್ಕಿದ ನಂತರವಾದರೂ ಬದಲಾಗಬೇಕಿತ್ತು. ಆದರೆ, ಬದಲಾಗಲಿಲ್ಲ. ಅದೇ ಇಂದು ಅವರ ಅಮಾನತ್ತಿಗೆ ಪ್ರಮುಖ ಕಾರಣವಾಗಿದೆ.


ಕೃಷ್ಣಾ ಭಾಗ್ಯ ಜಲನಿಗಮವು ಅತಿ ಮುಖ್ಯ ಯೋಜನೆಯಾದ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯ ೦.೦೦ ಕಿಮೀನಿಂದ ೯೫ನೇ ಕಿಮೀವರೆಗೆ ಆಧುನೀಕರಣ ಕಾಮಗಾರಿ ಕೈಗೊಂಡಿದೆ. ಇದನ್ನು ಪ್ಯಾಕೇಜ್ ಕಾಮಗಾರಿ ಮೂಲಕ ಕೈಗೊಳ್ಳಲಾಗಿದೆ. ಈ ನಡುವೆ ಈ ಮುಖ್ಯ ಕಾಲುವೆಗೆ ಅಡ್ಡಲಾಗಿ ೦೧ರಿಂದ ೧೮ರವರೆಗಿನ ಉಪ ಮತ್ತು ಸೀಳು ಕಾಲುವೆಗಳ ರಚನೆ, ವಿಸ್ತರಣೆ ಮತ್ತು ನವೀಕರಣವನ್ನು ಕೈಗೊಳ್ಳಲಾಗಿದೆ. ಆದರೂ, ಆ ಭಾಗದ ರೈತರ ಜಮೀನುಗಳಿಗೆ ನೀರು ಒದಗಿಸಲು ನಿಗಮದಿಂದ ಸಾಧ್ಯವಾಗಿಲ್ಲ.
ಹೀಗಾಗಿ ಈ ಆಧುನೀಕರಣ ಪ್ಯಾಕೇಜ್ ಕಾಮಗಾರಿಗಳನ್ನು ವಿಧಾನಸಭೆಯ ಅಂದಾಜುಗಳ ಸಮಿತಿಯು ಪರಿಶೀಲಿಸಿದಾಗ ಹಲವು ಲೋಪದೋಷಗಳು ಕಂಡುಬಂದಿವೆ. ಈ ವೇಳೆ ಯೋಜನೆಯ ಕಾಮಗಾರಿ, ದರಪಟ್ಟಿ ಸಿದ್ಧಪಡಿಸಿರುವುದು, ಮಾಪನ ಪುಸ್ತಕಗಳನ್ನು ಬರೆದಿರುವುದು, ಮುರಮ್ ಸಾಗಾಣಿಕೆ, ಏರಿ ನಿರ್ಮಾಣ ಮುಂತಾದ ಕಾಮಗಾರಿಗಳಲ್ಲಿ ಹಲವು ಲೋಪದೋಷಗಳು ಪತ್ತೆಯಾಗಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗಿದೆ ಎಂಬುದು ಸಮತಿಯ ಗಮನಕ್ಕೆ ಬಂದಿದೆ. ಇನ್ನು ಇದನ್ನು ಪ್ರಮಾಣೀಕರಿಸುವ ಸಲುವಾಗಿ ಸರ್ಕಾರ ತಾಂತ್ರಿಕ ತಜ್ಞರ ಸಮಿತಿಯೊಂದನ್ನು ರಚಿಸಿದೆ. ಅದರ ವರದಿಗಾಗಿಯೂ ಸರ್ಕಾರ ನಿರೀಕ್ಷೆಯಲ್ಲಿದೆ.


ತಾಂತ್ರಿಕ ತಜ್ಞರ ಸಮಿತಿಯ ಜೊತೆಗೆ ಸಮನ್ವಯ ಸಾಧಿಸುವಲ್ಲಿ ಬಿ.ಎಸ್. ಶಿವಕುಮಾರ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ವಿಫಲರಾಗಿದ್ದಾರೆ. ತಮ್ಮ ಕರ್ತವ್ಯ ನಿರ್ವಹಣೆ, ಮೇಲಸ್ತುವಾರಿ, ಅನುಷ್ಠಾನ, ಪರಿವೀಕ್ಷಣೆ ಇತ್ಯಾದಿ ಪ್ರಕ್ರಿಯೆಗಳಲ್ಲೂ ಅವ್ಯವಹಾರ ನಡೆಸಿರುವುದು ಮತ್ತು ಗಂಭೀರ ಕರ್ತವ್ಯ ಲೋಪ ಎಸಗಿರುವುದು ವಿಧಾನಸಭೆ ಅಂದಾಜುಗಳ ಸಮಿತಿ ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲ, ತಾಂತ್ರಿಕ ತಜ್ಞರ ಸಮಿತಿಯು ವರದಿ ನೀಡುವ ಮುನ್ನವೇ ಗುತ್ತಿಗೆದಾರರಿಗೆ ಹಣ ಪಾವತಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಬಿ.ಎಸ್. ಶಿವಕುಮಾರ್ ವಿರುದ್ಧ ಈ ಎಲ್ಲಾ ಅಂಶಗಳ ಕುರಿತು ಕೂಲಂಕುಶವಾಗಿ ಇಲಾಖೆ ವಿಚಾರಣೆ ನಡೆಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಬಿ.ಎಸ್. ಶಿವಕುಮಾರ್ ವಿರುದ್ಧದ ವಿಚಾರಣೆ ಬಾಕಿ ಇರಿಸಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments