2025ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳ ಪಟ್ಟಿಯನ್ನು ಬುಧವಾರ(ಮಾ.25) ಪ್ರಕಟಿಸಿದೆ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಹಿರಿಯ ಸಾಹಿತಿಗಳಿಗೆ ನೀಡಲಾಗುವ 2025ನೇ ಸಾಲಿನ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ವರ್ಷದ ಗೌರವ ಪ್ರಶಸ್ತಿ’ಗೆ ಪ್ರೊ.ಶಿವರಾಮಯ್ಯ, ಚಂದ್ರಶೇಖರ ತಾಳ್ಯ, ಡಾ. ಚಂದ್ರಶೇಖರ ಪೋಕಳೆ, ಡಾ. ವಸುಂಧರಾ ಭೂಪತಿ ಹಾಗೂ ಡಾ.ಎಸ್. ತುಕಾರಾಂ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 50 ಸಾವಿರ ನಗದು ಒಳಗೊಂಡಿದೆ.
50ರಿಂದ 60 ವರ್ಷ ವಯೋಮಾನದ ಸಾಹಿತಿಗಳಿಗೆ ನೀಡಲಾಗುವ ‘ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಬಿ.ಎಂ. ಬಷೀರ್, ಕಂಕನಾಡಿ ನಾರಾಯಣ ಸೇರಿದಂತೆ 10 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 25 ಸಾವಿರ ನಗದು ಒಳಗೊಂಡಿದೆ.
2024ರಲ್ಲಿ ಪ್ರಕಟಗೊಂಡಿರುವ 17 ವಿವಿಧ ಸಾಹಿತ್ಯ ಪ್ರಕಾರದ ಕೃತಿಗಳು ‘2024ನೇ ಸಾಲಿನ ವರ್ಷದ ಪುಸ್ತಕ ಬಹುಮಾನ’ಕ್ಕೆ ಆಯ್ಕೆಯಾಗಿವೆ. ಈ ಪ್ರಶಸ್ತಿಯು 25 ಸಾವಿರ ನಗದು ಒಳಗೊಂಡಿದೆ. ಇದೇ ವೇಳೆ 11 ದತ್ತಿ ಸಾಹಿತ್ಯ ಪ್ರಕಾರಗಳಿಗೆ ನೀಡಲಾಗುವ 2024ನೇ ಸಾಲಿನ ಅಕಾಡಮಿ ದತ್ತಿ ಬಹುಮಾನ ಪುರಸ್ಕೃತರ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.



