ಸರ್ಕಾರದ ಸ್ಪಷ್ಟ ನೀತಿಗಳು, ಸುಗಮ ಅನುಮತಿಗಳು, ಕೌಶಲ್ಯ, ಮೂಲಸೌಕರ್ಯ ಹಾಗೂ ಪೂರಕ ವಾತಾವರಣಗಳು, ಕರ್ನಾಟಕವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಸಾಫ್ಟ್ ವೇರ್ ಟೆಕ್ನಾಲಜೀ ಪಾರ್ಕ್ಸ್ ಆಫ್ ಇಂಡಿಯಾ, ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ ‘ಬೆಂಗಳೂರು ಟೆಕ್ ಸಮ್ಮಿಟ್’ 28 ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಮುಖ ನೀತಿಗಳ ರಚನೆ-ಐತಿಹಾಸಿಕ ಹೆಜ್ಜೆ
“ಈ ಶೃಂಗಸಭೆಯಲ್ಲಿ, ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025–2030, ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030, ಮತ್ತು ಸ್ಟಾರ್ಟ್ಅಪ್ ನೀತಿ 2025-2030 ಗಳಂತಹ ಮೂರು ಪ್ರಮುಖ ನೀತಿಗಳನ್ನು ರಚಿಸುವ ಮೂಲಕ ಐತಿಹಾಸಿಕ ಹೆಜ್ಜೆಯನ್ನು ಇಡಲಾಗಿದೆ. ದತ್ತಾಂಶ ಚಾಲಿತ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾದ ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿಯಿಂದ, ರಾಜ್ಯವನ್ನು ನಾವೀನ್ಯತೆ ಮತ್ತು ಡೀಪ್ ಟೆಕ್ ಗಳಿಗೆ ಜಾಗತಿಕ ತಾಣವಾಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. 2034 ರ ವೇಳೆಗೆ ಕರ್ನಾಟಕವನ್ನು ಭಾರತದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವಾಗಿ ಪರಿವರ್ತಿಸುವ ನಮ್ಮ ಗುರಿಗೆ ಬಾಹ್ಯಾಕಾಶ ತಂತ್ರಜ್ಞಾ ನೀತಿ 2025-30 ಸಹಕಾರಿಯಾಗಲಿದೆ. ಹೊಸ ಸ್ಟಾರ್ಟ್ಅಪ್ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ ಬಂಡವಾಳ ನೆರವು, ಮಾರುಕಟ್ಟೆ ಅವಕಾಶ, ಮೂಲಸೌಲಭ್ಯ, ಕೌಶಲ್ಯಾಭಿವೃದ್ಧಿಯಂತಹ ಕ್ರಮಗಳ ಮೂಲಕ 25,000 ಸ್ಟಾರ್ಟ್ಅಪ್ಗಳ ಸ್ಥಾಪನೆಗೆ ನೆರವಾಗುವ ಗುರಿಯನ್ನು ಸರ್ಕಾರ ಹೊಂದಿದೆ” ಎಂದರು.
“ಕಳೆದ ಮೂರು ದಶಕಗಳಿಂದ ಬೆಂಗಳೂರಿನಲ್ಲಿ ಸಮಾವೇಶಗೊಳ್ಳುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಅಂತರರಾಷ್ಟ್ರೀಯ ಸಹಭಾಗಿತ್ವದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳನ್ನು ಸಂಶೋಧಿಸಿ, ಸೃಷ್ಟಿಸಿ ಹೊಸ ದಿಕ್ಕಿನಲ್ಲಿ ಹೆಜ್ಜೆಗಳನ್ನಿಟ್ಟು ವಿಶ್ವದ ಗಮನವನ್ನು ಕರ್ನಾಟಕದತ್ತ ಸೆಳೆಯುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ” ಎಂದು ತಿಳಿಸಿದರು .
“ಈ ಸಮಾವೇಶದಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ಪರಿಣತರು ತಮ್ಮ ಜ್ಞಾನ, ಕೌಶಲ್ಯಗಳನ್ನು ಈ ವೇದಿಕೆಯಲ್ಲಿ ಹಂಚಿಕೊಂಡು ರಾಜ್ಯದ ಭವಿಷ್ಯವನ್ನು ರೂಪಿಸುವಲ್ಲಿ ಪರಿವರ್ತನೆಯ ಹರಿಕಾರರಾಗುತ್ತಾರೆ. ಪರಿವರ್ತನೆಯ ಮನ್ವಂತರಕ್ಕೆ ವೇದಿಕೆ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಒಂದು ಸಮಾವೇಶಕ್ಕಿಂತಲೂ ಹೆಚ್ಚಾಗಿ ಹೊಸ ಹೊಸ ವಿಚಾರಗಳು, ಸಂವಾದಗಳು, ಬಂಡವಾಳ ಹೂಡಿಕೆ ಆವಿಷ್ಕಾರ ಮತ್ತು ಪರಿವರ್ತನೆಯ ಮನ್ವಂತರಕ್ಕೆ ವೇದಿಕೆಯಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನ ಹಲವು ಉತ್ತಮ ಅವಕಾಶಗಳಿಗೆ ಜಾಗತಿಕ ವೇದಿಕೆಯಾಗಿ ಹೊಸ ಮುನ್ನುಡಿ ಬರೆಯಲಿ ಎಂದು ಹಾರೈಸುತ್ತೇನೆ” ಎಂದರು.


