Homeಕರ್ನಾಟಕವಾಣಿಜ್ಯ ಮಳಿಗೆಗಳ ಮೇಲೆ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಕರವೇ ಪ್ರತಿಭಟನೆ ಯಶಸ್ವಿ

ವಾಣಿಜ್ಯ ಮಳಿಗೆಗಳ ಮೇಲೆ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಕರವೇ ಪ್ರತಿಭಟನೆ ಯಶಸ್ವಿ

ಬೆಂಗಳೂರು: ನಗರದ ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಇರಲೇಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ವಿಮಾನ ನಿಲ್ದಾಣ ರಸ್ತೆ ಸಾದಹಳ್ಳಿ ಟೋಲ್‌ ಗೇಟ್‌ನಿಂದ ಕಬ್ಬನ್‌ ಪಾರ್ಕ್‌ವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಬೇರೆ ಭಾಷೆಗಳಲ್ಲಿದ್ದ ನಾಮಫಲಕ, ಜಾಹೀರಾತುಗಳು, ಬ್ಯಾನರ್ ಗಳು,ಕಟೌಟ್ ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸಾದಹಳ್ಳಿಯ ಬ್ಲೂಮ್ ಹೋಟೆಲ್ ಬಳಿ ದ್ವಂಸ ‌ಲೈಟಿಂಗ್ ಬೋರ್ಡ್ ಒಡೆದು ಹಾಕಿ ಕನ್ನಡ ನಾಮಫಲಕ ಇರಲೇಬೇಕು ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮೆರವಣಿಗೆ ನಡುವೆ ಕನ್ನಡ ನಾಮಫಲಕಗಳನ್ನು ಹಾಕದ ಅಂಗಡಿ ಮುಂಗಟ್ಟುಗಳಿಗೆ ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡುವ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು.

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡ ಅವರ ನೇತೃತ್ವದಲ್ಲಿ ನಡೆಯುವ ಮೆರವಣಿಗೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಸಾದಹಳ್ಳಿ ಟೋಲ್‌ ಗೇಟ್‌ನಿಂದ ಆರಂಭಗೊಂಡ ಮೆರವಣಿಗೆ ಯಲಹಂಕ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಎಸ್ ಪಿ ರಸ್ತೆ, ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಚಿಕ್ಕ ಪೇಟೆ, ಸಿಟಿ ಮಾರ್ಕೆಟ್, ಅವೆನ್ಯೂ ರಸ್ತೆ ಮುಖಾಂತರ ಕಬ್ಬನ್ ಪಾರ್ಕ್ ವರೆಗೆ ನಡೆಯಿತು.

ಕನ್ನಡ ಕಡೆಗಣಿಸಿದ ಮಾಲ್, ಅಂಗಡಿ ಮಾಲೀಕರಿಗೆ ಎಚ್ಚರಿಕೆ ಕೊಟ್ಟಿರುವ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು, ನಾಮಫಲಕಗಳಲ್ಲಿ ಶೇ. 60 ಕನ್ನಡ ಬಳಕೆ ಮಾಡಬೇಕು. ಕನ್ನಡ ಬಳಕೆ ಮಾಡದ ಮಾಲ್, ಅಂಗಡಿ, ಇತರೆ ವಾಣಿಜ್ಯ ಮಳಿಗೆಗಳ ಇಂಗ್ಲಿಷ್ ಹಿಂದಿ ನಾಮಫಲಕ ತೆರವು ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.

ಮೆರವಣಿಗೆಗೆ ಮುನ್ನ ಜತೆ ಮಾತನಾಡಿದ ಅಧ್ಯಕ್ಷ ನಾರಾಯಣ ಗೌಡ ಅವರು, “ವರನಟ ರಾಜ್ ಕುಮಾರ್ ಅವರ ಗೋಕಾಕ್ ಚಳುವಳಿ ಮಾದರಿಯಲ್ಲೇ ಈ ಹೋರಾಟ ನಡೆಸುತ್ತಿದ್ದೇವೆ. ರಾಜಧಾನಿ ಬೆಂಗಳೂರು ಕನ್ನಡಿಗರ ಕೈತಪ್ಪಿ ಹೋಗುವ ಸ್ಥಿತಿಯಲ್ಲಿದೆ. ಬೇರೆ ರಾಜ್ಯಗಳಿಂದ ಬಂದ್ ಹಿಂದಿ ಭಾಷಿಕರು ಕನ್ನಡ ಬಳಸದೆ ಧಿಮಾಕು ಪ್ರದರ್ಶನ ಮಾಡುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಎಚ್ಚರಿಕೆ ನೀಡುವುದಕ್ಕಾಗಿ ಈ ಮೆರವಣಿಗೆ” ಎಂದು ಹೇಳಿದರು.

“ಪೊಲೀಸ್ ಇಲಾಖೆ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕರವೇ ಕಾರ್ಯಕರ್ತರು ಇಡೀ ಬೆಂಗಳೂರಿಗೆ ಏನು ಮಾಡುತ್ತಾರೋ ಎಂಬ ಭಯ ಸರ್ಕಾರ ಹಾಗೂ ಪೊಲೀಸರಿಗೆ ಕಾಡುತ್ತಿದೆ. ಪೊಲೀಸರು ಮತ್ತು ಜನರು ಜಾಗೃತಿ ರ‍್ಯಾಲಿ ಮಾಡಲು ಅವಕಾಶ ಕೊಟ್ಟರೆ ಬೆಂಗಳೂರು ಸುರಕ್ಷಿತವಾಗಿ ಇರುತ್ತದೆ. ನಮ್ಮನ್ನು ಕೆಣಕುವುದು, ಕೆರಳಿಸುವುದು ಮಾಡಿದರೆ ಹೋರಾಟದ ರೂಪ ಬದಲಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

“ನಾನು ನಮ್ಮ ಕಾರ್ಯಕರ್ತರಿಗೆ ಒಂದು ಸಂದೇಶ ಕೊಡುತ್ತಿದ್ದೇನೆ. ನಾನು ಬಂಧನಕ್ಕೆ ಒಳಗಾದರೂ ನೀವು ಯಾರು ಹೋರಾಟದಿಂದ ಹಿಂದೆ ಸರಿಯಬೇಡಿ. ರಾಜ್ಯ ಸರ್ಕಾರ ಫೆ.28ರೊಳಗೆ ನಾಮಫಲಕಗಳನ್ನು ಕನ್ನಡೀಕರಿಸಲು ಆದೇಶಿಸಿದೆ. ಹೀಗಾಗಿ ನಾವು ಫೆ.28ರವರೆಗೆ ಕಾಯುತ್ತೇವೆ. ಆಗಲೂ ಈ ನೆಲದ ಕಾನೂನಿಗೆ, ಈ ನೆಲದ ಭಾಷೆಗೆ ಗೌರವ ನೀಡದವರ ವಿರುದ್ಧ ನಾವು ಇನ್ನೂ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದರು.

ಮೆರವಣಿಗೆ ವೇಳೆ ಯಲಹಂಕದ ಬ್ಯಾಟರಾಯನಪುರದಲ್ಲಿರುವ ಮಾಲ್‌ ಆಫ್‌ ಏಷ್ಯಾ ಬಳಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಮಾಲ್‌ನ ಮುಖ್ಯ ಗೇಟ್ ಬಳಿ ಪೊಲೀಸ್ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ದೊಡ್ಡ ಸಂಖ್ಯೆಯ ಪೊಲೀಸ್ ಸಿಬ್ಬಂದಿ ನಿಂತಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.

ಸಿದ್ದರಾಮಯ್ಯ ಕೂಡ ಮನವಿ

ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60 ಕನ್ನಡ ಅಕ್ಷರಗಳ ಬಳಕೆ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಫೆಬ್ರುವರಿ 28 ಕಡೆಯ ದಿನವಾಗಿದ್ದು, ಕನ್ನಡವನ್ನು ಉಳಿಸಿ, ಕನ್ನಡತನವನ್ನು ಬೆಳೆಸುವ ಸಲುವಾಗಿ ಈ ನಿಯಮ ತರಲಾಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಇತ್ತೀಚೆಗೆ ಪೋಸ್ಟ್‌ ಮಾಡಿ ಮನವಿ ಮಾಡಿರುವ ಅವರು, “ಕನ್ನಡ ನೆಲದಲ್ಲಿ ಕನ್ನಡಕ್ಕೇ ಮೊದಲ ಪ್ರಾಶಸ್ತ್ಯ, ಅನ್ನ ಕೊಡುವ ಈ ನೆಲದ ನಿಯಮ ಪಾಲನೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ ಕೂಡ” ಎಂದಿದ್ದಾರೆ.

“ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವರನ್ನು ನಾವು “ಕನ್ನಡಿಗ”ರೇ ಎಂದು ಭಾವಿಸಿದ್ದೇವೆ. ನಾಮಫಲಕದಲ್ಲಿ ಶೇ.60 ಕನ್ನಡ ಅಕ್ಷರಗಳ ಬಳಕೆ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಫೆಬ್ರವರಿ 28 ಕಡೆಯ ದಿನವಾಗಿದ್ದು, ನಿಯಮ ಪಾಲನೆ ಮಾಡಿ “ಹೆಮ್ಮೆಯ ಕನ್ನಡಿಗ”ರಾಗಿ” ಎಂದು ಕರೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments