Homeಕರ್ನಾಟಕಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯ, ಸರ್ಕಾರ ಸುತ್ತೋಲೆ

ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯ, ಸರ್ಕಾರ ಸುತ್ತೋಲೆ

ರಾಜ್ಯದಲ್ಲಿ ಮಾರಾಟವಾಗುವ ಖಾಸಗಿ, ರಾಜ್ಯ ಸರ್ಕಾರಿ ಹಾಗೂ ಕೇಂದ್ರ ಸರ್ಕಾರದ ಉತ್ಪನ್ನಗಳ ಮೇಲಿನ ಗುರುತನ್ನು ಕನ್ನಡದಲ್ಲೇ ಮುದ್ರಿಸಲು ರಾಜ್ಯದಲ್ಲಿ ಕಡ್ಡಾಯ ಮಾಡಿ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಮುಖ್ಯಮಂತ್ರಿಗಳ ಕಚೇರಿ ಶುಕ್ರವಾರ ರಾತ್ರಿ ಮಾಧ್ಯಮಗಳಿಗೆ ಸುತ್ತೋಲೆ ಪ್ರತಿಯನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಕನ್ನಡ ಭಾಷೆಗೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡಿದೆ.

“ರಾಜ್ಯದಲ್ಲಿ ಮಾರಾಟವಾಗುವ ಖಾಸಗಿ, ರಾಜ್ಯ ಸರ್ಕಾರಿ ಹಾಗೂ ಕೇಂದ್ರ ಸರ್ಕಾರದ ಉತ್ಪನ್ನಗಳ ಮೇಲಿನ ಗುರುತನ್ನು ಕನ್ನಡದಲ್ಲೇ ಮುದ್ರಿಸಲು ರಾಜ್ಯದಲ್ಲಿ ಕಡ್ಡಾಯ ಮಾಡಿ ಆದೇಶ ಹೊರಡಿಸುತ್ತೇವೆ” ಎಂದು ಸಿಎಂ ಸಿದ್ದರಾಮಯ್ಯ ಅವರು ಕಳೆದ ರಾಜ್ಯೋತ್ಸವದಂದು ಘೋಷಣೆ ಮಾಡಿದ್ದರು.

ನುಡಿದಂತೆ ನಡೆದುಕೊಂಡಿರುವ ಸರ್ಕಾರ, ‘ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಉತ್ಪಾದಿಸಲಾಗುವ ಉತ್ಪನ್ನಗಳ ಮೇಲೆ ಕನ್ನಡದ ಹೆಸರನ್ನ ಕಡ್ಡಾಯ ಎಂದು ಹೇಳಿದೆ. ಯಾವುದೇ ಉತ್ಪನ್ನಗಳಿರಲಿ ಕನ್ನಡದಲ್ಲಿ ಹೆಸರು ಇರಲೇಬೇಕು’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆಯಲ್ಲಿ ಏನಿದೆ?

ಭಾಷೆಯು ನೆಲದ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಒಂದು ಭಾಷೆ ಬೆಳವಣಿಗೆಯಾಗಬೇಕಾದರೆ ಆ ನೆಲದಲ್ಲಿನ ಉತ್ಪಾದನೆ, ಮಾರುಕಟ್ಟೆ, ವ್ಯವಹಾರಗಳು ಸ್ಥಳೀಯ ಭಾಷೆಯಲ್ಲಿರಬೇಕು. ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022ನ್ನು ದಿನಾಂಕ: 12.03.2024 ರಿಂದ ಜಾರಿಗೆ ತಂದಿರುತ್ತದೆ. ಸದರಿ ಅಧಿನಿಯಮದ ಕಲಂ 17 (7)ರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದೊಳಗೆ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲಾ ಕೈಗಾರಿಕಾ ಮತ್ತು ಇತರೆ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳು ಯಾವುದಾದರೂ ಇದ್ದಲ್ಲಿ ಯಾವುದೇ ಇತರ ಭಾಷೆಯ ಜೊತೆಗೆ ಕನ್ನಡದಲ್ಲಿ ಇರತಕ್ಕದ್ದೆಂದು ತಿಳಿಸಲಾಗಿದೆ.

ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ತಯಾರಾಗುವ ಎಲ್ಲಾ ಕೈಗಾರಿಕೆ ಮತ್ತು ಗ್ರಾಹಕ ಉತ್ಪನ್ನಗಳ ಮೇಲೆ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳನ್ನು ಇತರ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ಕಡ್ಡಾಯವಾಗಿ ಮುದ್ರಿಸುವಂತೆ ಈ ಮೂಲಕ ಸೂಚಿಸಲಾಗಿದೆ ಹಾಗೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022ರ ಕಲಂ 9ರಡಿ ಗೊತ್ತುಪಡಿಸಿದ ಜಾರಿ ಪ್ರಾಧಿಕಾರಗಳು ಈ ಸೂಚನೆಗಳನ್ನು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಎಲ್ಲಾ ಕೈಗಾರಿಕಾ ಮತ್ತು ಗ್ರಾಹಕ ವಸ್ತುಗಳ ಉತ್ಪನ್ನದಾರರು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸುವ ಬಗ್ಗೆ ಮೇಲ್ವಿಚಾರಣೆಯನ್ನು ಮಾಡುವಂತೆ ಸೂಚಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments