HomeSportಶಿಕ್ಷಣ, ಕ್ರೀಡೆಗೆ ಕಳಿಂಗಾ ಸಂಸ್ಥೆ ಕೊಡುಗೆ ಅಪಾರ: ಕೆ ಎನ್‌ ಶಾಂತಕುಮಾರ್‌

ಶಿಕ್ಷಣ, ಕ್ರೀಡೆಗೆ ಕಳಿಂಗಾ ಸಂಸ್ಥೆ ಕೊಡುಗೆ ಅಪಾರ: ಕೆ ಎನ್‌ ಶಾಂತಕುಮಾರ್‌

ಶಿಕ್ಷಣ ಮತ್ತು ಕ್ರೀಡಾಕ್ಷೇತ್ರಕ್ಕೆ ಕಳಿಂಗಾ ಇನ್‌ಸ್ಟಿಟ್ಯೂಟ್‌ ನೀಡಿರುವ ಕೊಡುಗೆ ಅಪಾರವಾದುದು. ಯಶಸ್ಸು ಎಂದರೆ ಏನು ಎಂಬುದನ್ನು ಇಡೀ ದೇಶಕ್ಕೆ ಮತ್ತು ಸಮಾಜಕ್ಕೆ ಈ ಸಂಸ್ಥೆ ಪುನರ್‌ ವ್ಯಾಖ್ಯಾನ ಮಾಡಿದೆ ಎಂದು ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿ. ನಿರ್ದೇಶಕರು ಹಾಗೂ ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾದ ಮಾಜಿ ಅಧ್ಯಕ್ಷರಾದ ಕೆ ಎನ್‌ ಶಾಂತಕುಮಾರ್‌ ಹೇಳಿದರು.

ಒಡಿಶಾದ ಭುವನೇಶ್ವರದ ಕಳಿಂಗಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಕೆಐಐಟಿ) 22 ನೇ ಸಂಸ್ಥಾಪನಾ ದಿನದಂದು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜೀವಮಾನ ಸಾಧನೆ ಗೌರವ ಸ್ವೀಕರಿಸಿ ವಿಶೇಷ ಉಪನ್ಯಾಸ ನೀಡಿದರು.

ಒಬ್ಬ ವ್ಯಕ್ತಿಯ ಜೀವನವನ್ನು ಬದಲಾಯಿಸುವ ಶಕ್ತಿ ಹೊಂದಿರುವ ಶಿಕ್ಷಣದ ಬಗ್ಗೆ ನನಗೆ ಅಪಾರವಾದ ನಂಬಿಕೆ ಇದೆ. ಈ ಸಂಸ್ಥೆ ಕಳೆದ ನಾಲ್ಕು ದಶಕಕ್ಕೂ ಹೆಚ್ಚು ಅವಧಿ ಮಾಡಿರುವ ಸಾಧನೆ, ನಡೆದು ಬಂದ ದಾರಿ ನೋಡಿದರೆ ಅಚ್ಚರಿಯಾಗುತ್ತದೆ. ಇದು ಕೇವಲ ಒಂದು ಶಿಕ್ಷಣ ಸಂಸ್ಥೆಯ ಕಥೆಯಲ್ಲ, ಬದಲಿಗೆ ʼಸ್ಟೋರಿ ಆಫ್‌ ವಿಷನ್‌ʼ. ಶಿಕ್ಷಣ ಎಂದರೆ ಕೇವಲ ಡಿಗ್ರಿ ಅಲ್ಲ ಎಂಬುದನ್ನು ಕಳಿಂಗ ಸಂಸ್ಥೆ ತೋರಿಸಿದೆ. ಬದಲಿಗೆ ಘನತೆ, ಅವಕಾಶ ಹಾಗೂ ಬದಲಾವಣೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.

ಕೇವಲ ಮೂಲಸೌಕರ್ಯಗಳನ್ನು ಇಟ್ಟುಕೊಂಡು ಸಂಸ್ಥೆಗಳನ್ನು ನಡೆಸುವುದು ಸುಲಭ. ಬದಲಿಗೆ ಒಂದು ಉತ್ತಮ ಉದ್ದೇಶವಿಟ್ಟುಕೊಂಡು ಮುನ್ನಡೆಸುವುದು ಕಷ್ಟ. ಕಳಿಂಗದಲ್ಲಿ ಒಳಗೊಳ್ಳುವಿಕೆಯಲ್ಲಿ ಬದ್ಧತೆ ಇದೆ. ಯಶಸ್ಸು ಎಂದರೆ ಏನು ಎಂಬುದನ್ನು ಇಡೀ ದೇಶಕ್ಕೆ ಮತ್ತು ಸಮಾಜಕ್ಕೆ ಪುನರ್‌ ವ್ಯಾಖ್ಯಾನ ಮಾಡಿದೆ. ಮುಖ್ಯವಾಹಿನಿಂದ ದೂರ ಉಳಿದ, ತಳಮಟ್ಟದ ಜನರನ್ನು ಈ ಸಂಸ್ಥೆ ತಲುಪಿರುವುದು ಇದರ ಹೆಗ್ಗುರುತು. ಈ ಎಲ್ಲ ಸಾಕಾರದ ರೂವಾರಿಯಾದ ಸಮಂತಾ ಅವರಿಗೆ ಅಭಿನಂದನೆಗಳು ಎಂದು ಪ್ರಶಂಸಿಸಿದರು.

ಕ್ರೀಡೆಗೂ ಕಳಿಂಗಾ ಸಂಸ್ಥೆ ಪ್ರೋತ್ಸಾಹ

ಶಿಕ್ಷಣದ ಜೊತೆಗೆ ಕಳಿಂಗ ಸಂಸ್ಥೆಯು ಕ್ರೀಡೆಗೂ ಪ್ರೋತ್ಸಾಹ ನೀಡುತ್ತಿದೆ. ಕ್ರೀಡೆಯ ಬದಲಾವಣೆಯಲ್ಲಿ ಗಮನಾರ್ಹವಾದ ಕೊಡುಗೆ ನೀಡುತ್ತಿದೆ. ಮೂಲಸೌಕರ್ಯ ಮತ್ತು ತರಬೇತಿಯ ಅತ್ಯುತ್ತಮ ಸಂಸ್ಥೆಯಾಗಿದೆ. ಇಲ್ಲಿ ತರಬೇತಿ ಪಡೆದವರು ಒಲಂಪಿಯನ್‌ ಗಳಾಗಿದ್ದಾರೆ ಎಂಬುದೇ ಹೆಮ್ಮೆ ಎಂದರು.

ಇಲ್ಲಿನ ಯುವಜನರನ್ನು ನೋಡಿದರೆ ಭಾರತದ ಭವಿಷ್ಯ ಕಾಣುತ್ತದೆ. ನಿಮ್ಮಲ್ಲಿ ಕುತೂಹಲ ಮತ್ತು ಮಹತ್ವಾಕಾಂಕ್ಷೆ ಇರಲಿ. ಪತ್ರಕರ್ತ, ಕ್ರೀಡಾಪಟು, ಎಂಜಿನಿಯರ್‌, ಉದ್ಯಮಿ ಏನೇ ಆಗಿ. ಅದರ ಬಗ್ಗೆ ಕುತೂಹಲ ಇರಲಿ. ಕುತೂಹಲವೇ ನಿಮ್ಮನ್ನು ಜೀವಂತವಾಗಿರಿಸುತ್ತದೆ. ಅಧ್ಯಯನ ನಿರಂತರವಾಗಿಸುತ್ತದೆ. ಯಶಸ್ಸಿನ ಗೆರೆ ಎಂದೂ ನೇರವಾಗಿರುವುದಿಲ್ಲ. ಅಲ್ಲಿ ಸೋಲಿರುತ್ತದೆ, ಸವಾಲಿರುತ್ತದೆ. ಆದ್ದರಿಂದ ಸತತ ಪರಿಶ್ರಮ ಅಗತ್ಯ ಎಂದರು.

ಒಳ್ಳೆಯ ದೃಷ್ಟಿ (Vision) ಜೊತೆಗೆ ನಿರ್ಣಯ ಇದ್ದರೆ ಇಡೀ ಸಮುದಾಯವನ್ನೇ ಬದಲಾವಣೆ ಮಾಡಬಹುದು ಎಂಬುದನ್ನು ಕಳಿಂಗ ತೋರಿಸಿದೆ. ಧೈರ್ಯ, ಸಮಗ್ರತೆ ಮತ್ತು ಸಹಾನುಭೂತಿಯ ಮೂಲಕ ಸುಂದರ ಭವಿಷ್ಯ ನಿರ್ಮಿಸಿ ಎಂದು ವಿದ್ಯಾರ್ಥಿಗಳಿಗೆ ಶಾಂತಕುಮಾರ್‌ ಅವರು ಕರೆ ನೀಡಿದರು.

ಅಮೆರಿಕದ ಕೊಲಂಬಿಯಾದ ಹಾಸ್ಪಿಟಲಿಟಿ ಅಧ್ಯಕ್ಷರಾದ ಜಾನ್‌ ಎಫ್‌ ಒಪ್ಪೆನ್‌ಹೇಮರ್‌ ಅವರು ಮಾತನಾಡಿ, ವಿದ್ಯಾರ್ಥಿಗಳೇ ನಿಮಗೆ ನಿಮ್ಮ ಸಮುದಾಯ, ಕುಟುಂಬ ಮತ್ತು ದೇಶಕ್ಕೆ ಕೊಡುಗೆ ನೀಡುವ ಅವಕಾಶ ಸಿಕ್ಕಿದೆ ಎಂದು ಹೇಳಿದರು.

ಶ್ರೀಲಂಕಾದ ಹರಿತ ಮಾಧ್ಯಮ ನೆಟ್‌ವರ್ಕ್‌ನ ಸ್ಥಾಪಕರು ಹಾಗೂ ಶ್ರೀ ಜಿನರಥನ ಭಿಕ್ಕು ಶಿಕ್ಷಣ ಮಂಡಳಿಯ ಕುಲಪತಿ ಡಾ. ಕಿರಿಂದೆ ಅಸ್ಸಾಜಿ ನಾಯಕ ಥೆರೋ ಅವರು ಮಾತನಾಡಿ, ನಾನು ಸಾಕಷ್ಟು ದೇಶಗಳಿಗೆ ಭೇಟಿ ನೀಡಿದ್ದೇನೆ. ಹಲವು ಸಂಸ್ಥೆ ನೋಡಿದ್ದೇನೆ. ಆದರೆ ಕರುಣೆ, ಶಿಸ್ತು, ಮಾನವೀಯತೆ ಮತ್ತು ದೃಷ್ಟಿಕೋನಗಳನ್ನು ಒಂದೇ ಕಡೆ ಸೇರಿಸುವ ಇಂತಹ ಸಂಸ್ಥೆಯನ್ನು ಅಪರೂಪಕ್ಕೆ ಮಾತ್ರ ನೋಡಿದ್ದೇನೆ ಎಂದರು.

ಸ್ವಿಟ್ಜರ್‌ಲೆಂಡ್‌ನ ರಿಪಾ ಇಂಟರ್‌ನ್ಯಾಷನಲ್‌ ಸೆಂಟರ್‌ನ ಧಾರ್ಮಿಕ ನಿರ್ದೇಶಕರಾದ ಗೆಟ್ರುಯೆಲ್‌ ಜಿಗ್ಮೆ ರಿನ್‌ಪೋಚೆ ಹಾಗೂ ಅಮೆರಿಕದ ಗ್ಲೋಬರ್‌ ಬ್ಯುಸಿನೆಸ್‌ ಲೀಡರ್‌ ಡಿಯನ್ನಾ ವಾಟ್ಸನ್‌ ಒಪ್ಪೆನ್‌ಹೇಮರ್‌ ಉಪಸ್ಥಿತರಿದ್ದು ಮಾತನಾಡಿದರು.

ಪ್ರಸ್ತಾವಿಕ ಭಾಷಣ ಮಾಡಿದ ಕೆಐಐಟಿ ಮತ್ತು ಕೆಐಎಸ್ಎಸ್ ಸಂಸ್ಥಾಪಕ ಡಾ. ಅಚ್ಯುತ ಸಮಂತ ಅವರು, ಶಾಂತವಾದ ದೃಢನಿಶ್ಚಯ ಮತ್ತು ಕನಸಿನೊಂದಿಗೆ ಈ ಸಂಸ್ಥೆಯನ್ನು ಪ್ರಾರಂಭ ಮಾಡಿದೆ. ನಾವು ಸಾಧಿಸಿದ್ದೆಲ್ಲವೂ ಕೆಐಐಟಿ, ಕೆಐಎಸ್ಎಸ್ ಮತ್ತು ಕೆಐಎಂಎಸ್‌ನ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಸೇರಿದ್ದು. ಇದು ಅವರದೇ ಯಶಸ್ಸು” ಎಂದು ಹೇಳಿದರು.

ಕಿಸ್‌ ಸಂಸ್ಥೆಗೆ ಭೇಟಿ

ಕೆಐಐಟಿನ ಸಹೋದರ ಸಂಸ್ಥೆಯಾದ ಕಳಿಂಗಾ ಇನ್‌ಸ್ಟಿಟ್ಯೂಟ್‌ನ ಆಫ್‌ ಸೋಶಿಯಲ್‌ ಸೈನ್ಸ್‌ (ಕೆಐಎಸ್‌ಎಸ್‌) ಗೆ ಅತಿಥಿಗಳು ಭೇಟಿ ನೀಡಿದ್ದರು.

ವಿದ್ಯಾರ್ಥಿಗಳೊಂದಿಗೆ ಒಂದಷ್ಟು ಸಮಯ ಕಳೆದ ಅತಿಥಿಗಳು, ಅಂತರ್ಗತ ಕಲಿಕೆ, ಶೈಕ್ಷಣಿಕ ಬೆಳವಣಿಗೆ, ಅಲ್ಲಿನ ಪರಿಸರ ಮತ್ತಿತರರ ವಿಷಯಗಳ ಕುರಿತು ತಿಳಿದು ಪ್ರಶಂಸೆ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments