Homeಕರ್ನಾಟಕಕಲಬುರಗಿ: 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆ ನಾಳೆ ಲೋಕಾರ್ಪಣೆ

ಕಲಬುರಗಿ: 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆ ನಾಳೆ ಲೋಕಾರ್ಪಣೆ

ಕಲ್ಯಾಣ ಕರ್ನಾಟಕದ ಕೇಂದ್ರ ಕಲಬುರಗಿಯಲ್ಲಿ ಕೆ.ಕೆ.ಆರ್.ಡಿ.ಬಿ.ಯ 302 ಕೋಟಿ ರೂ. ಸೇರಿ ಒಟ್ಟಾರೆ 327.17 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಕಲಬುರಗಿ ಶಾಖಾ ಆಸ್ಪತ್ರೆ ಲೋಕಾರ್ಪಣೆ ನಾಳೆ ಮುಖ್ಯಮಂತ್ರಿಗಳಿಂದ ನೆರವೇರಲಿದೆ.

ಖಾಸಗಿ ಕಾರ್ಪೊರೇಟ್ ಆಸ್ಪತ್ರೆ ಮೀರಿಸುವ ಗುಣಮಟ್ಟದ ಸೇವೆ ಇಲ್ಲಿ ಸಾರ್ವಜನಿಕರಿಗೆ ಲಭ್ಯವಿದ್ದು, ನೂತನ ಆಸ್ಪತ್ರೆಯ ಸಾಮರ್ಥ್ಯಕ್ಕೆ ತಕ್ಕಂತೆ ಈಗಿರುವ 10 ಹೃದ್ರೋಗ ವೈದ್ಯರ ಜೊತೆಗೆ ಹೆಚ್ಚುವರಿಯಾಗಿ 21 ವೈದ್ಯರು, 120 ಸ್ಟಾಫ್ ನರ್ಸ್ ಸೇರಿದಂತೆ ಇತರೆ ಸಿಬ್ಬಂದಿ ನೇಮಕಾತಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಅದರಂತೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ನೂತನ ಜಯದೇವ ಆಸ್ಪತ್ರೆಯಲ್ಲಿ 3 ಕ್ಯಾತಲ್ಯಾಬ್, ಮೂರು ಅಪರೇಷನ್ ಥಿಯೇಟರ್, ಒಂದು ಹೈಬ್ರಿಡ್ ಓ.ಟಿ. ಇರಲಿದೆ. ಎಕ್ಸ್ರೇ, ಇ.ಎಂ.ಆರ್.ಐ., ಬ್ಲಡ್ ಬ್ಯಾಂಕ್ ಸೇವೆ ಲಭ್ಯವಿರಲಿದೆ. 105 ಐ.ಸಿ.ಯು ಬೆಡ್, 120 ಜನರಲ್ ಬೆಡ್ ಸೇರಿದಂತೆ ಒಟ್ಟಾರೆ 371 ಹಾಸಿಗೆ ಸಾಮರ್ಥ್ಯ ಇದ್ದು, ಅತ್ಯಾಧುನಿಕ ಸೌಲಭ್ಯದೊಂದಿಗೆ ಬಿ.ಪಿ.ಎಲ್ ರೋಗಿಗಳಿಗೆ ಉಚಿತ ಮತ್ತು ಎ.ಪಿ.ಎಲ್. ರೋಗಿಗಳಿಗೆ ಶೇ.30ರ ರಿಯಾಯಿತಿ ದರದೊಂದಿಗೆ ಚಿಕಿತ್ಸೆ ಇಲ್ಲಿ ಸಿಗಲಿದೆ.

ಬೆಂಗಳೂರು, ಮೈಸೂರು ಬಿಟ್ಟರೆ ರಾಜ್ಯದಲ್ಲಿ ಮೂರನೇ ಸ್ವಂತ ಕಟ್ಟಡವನ್ನು ಕಲಬುರಗಿಯಲ್ಲಿ ಆಸ್ಪತ್ರೆ ಹೊಂದಲಿದ್ದು, ಬೆಂಗಳೂರು ಬಿಟ್ಟರೆ ಕಲಬುರಗಿ ಶಾಖಾ ಆಸ್ಪತ್ರೆಯಲ್ಲಿ ವಸ್ಕುಲರ್ ಸರ್ಜರಿ ಸೇವೆ ಸಹ ನೀಡಲು ಉದ್ದೇಶಿಸಲಾಗಿದೆ. ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿಯೆ ಮೊದಲನೇಯದು ಎನ್ನುವ ಹೆಗ್ಗಳಿಕೆ.‌ ನೂತನ ಆಸ್ಪತ್ರೆಯಲ್ಲಿ ನೀರಿನ ಕೊರತೆ ಎದುರಾಗದಂತೆ 7 ಲಕ್ಷ ಲೀ. ನೀರು ಸಾಮರ್ಥ್ಯ ಟ್ಯಾಂಕ್ ಸ್ಥಾಪಿಸಿದ್ದು, 11ಕೆ.ವಿ. ವಿದ್ಯುತ್ ಕೇಂದ್ರವನ್ನು 33 ಕೆ.ವಿ.ಗೆ ಮೇಲ್ದರ್ಜೇಗೇರಿಸಲಾಗಿದೆ.

3 ತಿಂಗಳಲ್ಲಿ ಸೂಪರ್ ಸ್ಪೆಷಾಲಿಟ್ಟಿ ಆಸ್ಪತ್ರೆ ಲಭ್ಯ

ಜಯದೇವ ಆಸ್ಪತ್ರೆ ಉದ್ಘಾಟನೆ ನಂತರ ಮುಂದಿನ ಮೂರು ತಿಂಗಳಲ್ಲಿ ಜಿಮ್ಸ್ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಗಾಟಿಸಿ ಸಾರ್ವಜನಿಕರ ಸೇವೆಗೆ ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡುವರು.

ಹಳೇ ಜಿಲ್ಲಾ ಆಸ್ಪತ್ರೆ ಕಡೆವಿ ಅಲ್ಲಿ 100 ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುವುದು. ಜಿಮ್ಸ್ ಆವರಣದಲ್ಲಿಯೇ 50 ಹಾಸಿಗೆಯ ಕ್ರಿಟಿಕಲ್ ಕೇರ್ ಯೂನಿಟ್, ಸುಟ್ಟು ಗಾಯಗಳ ಘಟಕ ಸ್ಥಾಪಿಸಲಾಗುತ್ತಿದೆ. ಇದಲ್ಲದೆ ಗುಲಬರ್ಗಾ ವಿ.ವಿ.ಯಲ್ಲಿ 10 ಎಕರೆ ಜಮೀನಿನಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತದೆ.

ಜಯದೇವ ಆಸ್ಪತ್ರೆಯಿಂದ 5.75 ಲಕ್ಷ ಓ.ಪಿ.ಡಿ. ಸೇವೆ

2016ರಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದ ಅವಧಿಯಲ್ಲಿಯೇ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆ ತಾತ್ಕಲಿಕ ಆರಂಭಿಸಲಾಗಿತ್ತು. ಕಳೆದ 8 ವರ್ಷಗಳ ಅವಧಿಯಲ್ಲಿ ಈ ಆಸ್ಪತ್ರೆಯಿಂದ 5.75 ಲಕ್ಷ ಜನ ಮತ್ತು 18,550 ಮಕ್ಕಳು ಓ.ಪಿ.ಡಿ. ಸೇವೆ ಪಡೆದಿದ್ದಾರೆ. 47,500 ಜನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದು, 39,462 ಜನ ಕ್ಯಾತ್‌ಲ್ಯಾಬ್ ಸೇವೆಗೆ ಒಳಗಾಗಿದ್ದಾರೆ.

25,000 ಮಂದಿ ಎನ್ಜಿಯೋಗ್ರಾಮ್ ಮಾಡಿಸಿದ್ದು, 13,000 ಎನ್ಜಿಯೋಪ್ಲಾಸ್ಟಿಸ್, 300 ಜನ ಪೇಸ್ ಮೇಕರ್ ಹಾಕಿಕೊಂಡಿದ್ದು, 1,300 ಜನ ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದಾರೆ. 3.92 ಲಕ್ಷ ಜನ ಇ.ಸಿ.ಜಿ, 2.14 ಲಕ್ಷ ಜನ ಎಕೊ ಟೆಸ್ಟ್ ಮಾಡಿಸಿದ್ದು, 53,399 ಜನ ಎಕ್ಸ್ರೇ ಮಾಡಿಸಿಕೊಂಡಿದ್ದಾರೆ. ಆಸ್ಪತ್ರೆ ಸ್ಥಾಪನೆಯಿಂದ ಇಲ್ಲಿನ ಜನರು ದೂರದ ಬೆಂಗಳೂರು, ಸೋಲಾಪೂರ ಹೋಗುವುದು ತಪ್ಪಿದೆ.

ಜಯದೇವ ಕಲಬುರಗಿ ನೂತನ ಶಾಖೆಯ ವಿಶೇಷತೆಗಳು

❖ 371 ಹಾಸಿಗೆ ಸಾಮರ್ಥ್ಯದ ಕಟ್ಟಡ
❖ 3 ಕ್ಯಾಥ್‌ಲ್ಯಾಬ್‌ಗಳು
❖ 3 ಆಪರೇಷನ್ ಥಿಯೇಟರ್‌ಗಳು
❖ 1 ಹೈಬ್ರಿಡ್ OT
❖ 105 ICCU ಹಾಸಿಗೆಗಳು
❖ 120 ಸಾಮಾನ್ಯ ವಾರ್ಡ್ ಬೆಡ್‌
❖ ಅರೆ-ವಿಶೇಷ, ವಿಶೇಷ ಮತ್ತು ಡೀಲಕ್ಸ್ ವಾರ್ಡ್ ಹಾಸಿಗೆಗಳು, 12 ರಿಕವರಿ ಮತ್ತು 12 ಪೋಸ್ಟ್ ಆಪರೇಟಿವ್ ಹಾಸಿಗೆಗಳು
❖ ಕಾರ್ಡಿಯಾಲಜಿ, ಕಾರ್ಡಿಯೋಥೊರಾಸಿಕ್ ಸರ್ಜರಿ, ವ್ಯಾಸ್ಕುಲಾರ್‌ಶಸ್ತ್ರಚಿಕಿತ್ಸೆ, ಪೀಡಿಯಾಟ್ರಿಕ್ ಕಾರ್ಡಿಯಾಲಜಿ, ರೇಡಿಯಾಲಜಿ, 128 ಸ್ಲೈಸ್ CT ಸ್ಕ್ಯಾನ್, 1.5T MRI, ಅಲ್ಟ್ರಾಸೋನೋಗ್ರಫಿ, ಹೈಟೆಕ್ಪ್ಯಾಥಾಲಜಿ ಮತ್ತು ರಕ್ತ ಬ್ಯಾಂಕ್ ಸೇವೆ ಒದಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments