Homeಕರ್ನಾಟಕಕಲಬುರಗಿ | ಸಚಿನ್ ಆತ್ಮಹತ್ಯೆ ಖಂಡಿಸಿ, ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಕಲಬುರಗಿ | ಸಚಿನ್ ಆತ್ಮಹತ್ಯೆ ಖಂಡಿಸಿ, ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಬೀದರ್‌ನ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಖಂಡಿಸಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ನಾಯಕರು ಶನಿವಾರ ಕಲಬುರಗಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಖರ್ಗೆ ನಿವಾಸಕ್ಕೆ ಮುತ್ತಿಗೆ ಹೋರಾಟ ಹಮ್ಮಿಕೊಂಡರು.

ಕಲಬುರಗಿಯ ಜಗತ್ ಸರ್ಕಲ್ ಬಳಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್‌ ಅಶೋಕ್‌, “ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.

“ಸಚಿನ್ ಆತ್ಮಹತ್ಯೆಗೆ ಕಾರಣನಾದ ರಾಜು ಕಪನೂರ್ ಒಬ್ಬ ಗೂಂಡಾ. ಅವನನ್ನು ಕಾಂಗ್ರೆಸ್ಸಿಗರು ಗೂಂಡಾ ಕಾಯಿದೆಯಿಂದ ತೆಗೆಸಿದ್ದಾರೆ. ಈಗ ನಮ್ಮವನಲ್ಲ; ನಮ್ಮವನಲ್ಲ ಎನ್ನುತ್ತಿದ್ದಾರೆ. ಆರೋಪಿಗಳಲ್ಲಿ ಮೊದಲ ಮೂವರು ಕಾಂಗ್ರೆಸ್ಸಿಗರು. ಈ ಭ್ರಷ್ಟ, ಆತ್ಮಹತ್ಯೆಗಳಿಗೆ ಕಾರಣವಾಗುವ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ಕೊಡಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲ” ಎಂದು ಎಚ್ಚರಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, “ಪ್ರಿಯಾಂಕ್ ಖರ್ಗೆಯವರು ಸಚಿವರಾಗಲು ಮೆರಿಟ್ ಕೋಟಾ ಇತ್ತೇ ಅಥವಾ ಪೇಮೆಂಟ್ ಕೋಟಾ ಇತ್ತೇ? ಬಾಬಾಸಾಹೇಬ ಅಂಬೇಡ್ಕರರು ನಮಗೆ ಕೊಟ್ಟ ಸಾಂವಿಧಾನಿಕ ಹಕ್ಕಿನ ದುರುಪಯೋಗ. ಬೇರೆ ದಲಿತರನ್ನು ತುಳಿದು ಸಮಾಧಿ ಮಾಡಿದ್ದಾರೆ” ಎಂದು ಟೀಕಿಸಿದರು.

“ನಿಮ್ಮ ಆಸ್ತಿ ತೆಗೆದುಕೊಂಡು ಹೋಗಲು ನಾವು ಬಂದಿಲ್ಲ; ನಿಮ್ಮ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ಕಲ್ಯಾಣ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯವರು ಯಾಕೆ ಮೇಲಕ್ಕೆ ಬಂದಿಲ್ಲ ಎಂಬುದಕ್ಕೆ ಪ್ರಿಯಾಂಕ್ ಉತ್ತರಿಸಬೇಕು” ಎಂದು ಸವಾಲು ಹಾಕಿದರು.

ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಮಾತನಾಡಿ, “ರಜಾಕರನ್ನು ಸದೆಬಡಿದಿದ್ದೇವೆ; ನಿಜಾಮನನ್ನು ಪಾಕಿಸ್ತಾನಕ್ಕೆ ಓಡಿಸಿದ್ದೇವೆ. ನಿಮ್ಮನ್ನೂ ಜನರು ಮನೆಗೆ ಕಳಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ” ಎಂದರು.

ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, “ರಾಜ್ಯದಲ್ಲಿ ಸುಪಾರಿ ರಾಜಕಾರಣ ನಡೆಯಲು ಸಾಧ್ಯವಿಲ್ಲ; ಇಲ್ಲಿ ಸಂವಿಧಾನಬದ್ಧ ರಾಜಕಾರಣ ಮಾತ್ರ ನಡೆಯಬೇಕು ಎಂದು ಆಗ್ರಹಿಸಿದರು. ಸುಪಾರಿ ರಾಜಕಾರಣ ಮಾಡುವವರಿಗೆ ಕಲಬುರ್ಗಿಯ ಜನತೆ ಅವಕಾಶ ಕೊಡುವುದಿಲ್ಲ” ಎಂದು ಎಚ್ಚರಿಸಿದರು.

ಖರ್ಗೆಯಿಂದ ತಂಪು ಪಾನೀಯ ವ್ಯವಸ್ಥೆ

ಸಚಿನ್‌ ಪಾಂಚಾಳ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ, ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಶನಿವಾರ ಪ್ರಿಯಾಂಕ್ ಖರ್ಗೆ ಅವರ ಮನಗೆ ಮುತ್ತಿಗೆ ಹಾಕಲು ಬರುವ ಬಿಜೆಪಿಯ ಮುಖಂಡರಿಗೆ ಎಳನೀರು, ಮಜ್ಜಿಗೆ, ನೀರು ವಿತರಣೆ ವ್ಯವಸ್ಥೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ.

ಕಾಂಗ್ರೆಸ್ ನಾಯಕರು ತಂಪು ಪಾನೀಯ ವ್ಯವಸ್ಥೆ ‌ಮಾಡುವ ಮೂಲಕ ಪ್ರತಿಭಟನೆ ಆಧಾರ ರಹಿತವಾಗಿದೆ ಎಂದು ತಿರುಗೇಟು ನೀಡಿದ್ದಾರೆ. ‘ಬಿಜೆಪಿ ಗುಂಡಾಗಿರಿಗೆ ನಮ್ಮ ಗಾಂಧಿಗಿರಿ’ ಹೆಸರಿನಲ್ಲಿ ಮುತ್ತಿಗೆ ಹಾಕಲು ಹೊರಟ ಬಿಜೆಪಿ ನಾಯಕರಿಗೆ ಕೈ ಮುಖಂಡರು, ಎಳನೀರು, ಶುಗರ್ ಲೆಸ್ ಕಾಫಿ ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

“ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹಸ್ತಕ್ಷೇಪ ಇಲ್ಲದಿದ್ದರೂ ಸಹ ಬಿಜೆಪಿ ನಾಯಕರು ರಾಜಕಾರಣ ಮಾಡುವ ನಿಟ್ಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನ ಟಾರ್ಗೆಟ್ ಮಾಡಿಕೊಂಡು ಹೋರಾಟ ಮಾಡುತ್ತಿದ್ದಾರೆ. ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ, ಹೋರಾಟ ಮಾಡುವುದಾದರೆ ಉಸ್ತುವಾರಿ ಸಚಿವರ ಕಚೇರಿಗೆ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಬೇಕು, ಅದನ್ನು ಬಿಟ್ಟು ಮನೆಗೆ ಮುತ್ತಿಗೆ ಹಾಕಲು ಹೊರಟಿರುವುದು ಖಂಡನಾರ್ಹ. ಬಿಜೆಪಿ ಅವರದ್ದು ಗುಂಡಾಗಿರಿ, ನಮ್ಮದು ಗಾಂಧಿಗಿರಿ” ಎಂದು ಕಿಡಿಕಾರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments