ಕಾಗಿನೆಲೆ ಪೀಠ ಯಾವತ್ತೂ ಒಂದು ಜಾತಿಯ ನೆಲೆ ಆಗಬಾರದು. ಇದು ಎಲ್ಲ ಶೋಷಿತ ಸಮುದಾಯಗಳ ನೆಲೆ ಆಗಬೇಕು. ಕನಕ ಜಯಂತಿ ಪ್ರಯುಕ್ತ ಭಾವೈಕ್ಯತಾ ಸಮಾವೇಷ ಏರ್ಪಿಡಿಸಿರುವ ಮಠದ ಗುರುಗಳಿಗೆ ಹೃದಯಪೂರ್ವಕವಾಗಿ ವಂದಿಸುತ್ತೇನೆ. ಇದು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಎಂದು ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು.
ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದಲ್ಲಿ ಬುಧವಾರ ಆಯೋಜಿಸಿದ್ದ 536ನೇ ಕನಕ ಜಯಂತ್ಯೋತ್ಸವ ಮತ್ತು ಭಾವೈಕ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
“ಹಿಂದಿನ ಜನ್ಮ-ಮುಂದಿನ ಜನ್ಮ ಎನ್ನುವುದೇ ಇಲ್ಲ. ಈ ಜನ್ಮದಲ್ಲಿ ನಾವು ಮಾಡುವ ಕೆಲಸಗಳೇ ಮುಖ್ಯ. ಈ ಕಾರಣಕ್ಕೆ ಬಸವಾದಿ ಶರಣರು ಮತ್ತು ಕನಕದಾಸರು ಕರ್ಮ ಸಿದ್ಧಾಂತ ಮತ್ತು ಜನ್ಮದ ಮೌಡ್ಯವನ್ನು ಸಾರಾಸಗಟಾಗಿ ತಿರಸ್ಕರಿಸಿದರು” ಎಂದು ಹೇಳಿದರು.
“ನಾವ್ಯಾರೂ ಅರ್ಜಿ ಹಾಕೊಂಡು ಜಾತಿ-ಧರ್ಮ ಆರಿಸಿಕೊಂಡು ಹುಟ್ಟಿಲ್ಲ. ಮೊದಲು ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕು. ಜಾತಿ-ಧರ್ಮ ರಹಿತ ಮನುಷ್ಯ ಪ್ರೇಮವನ್ನೇ ಕನಕದಾಸರು ಜಗತ್ತಿಗೆ ನೀಡಿದರು” ಎಂದು ವಿವರಿಸಿದರು.
“ಕನಕಗುರು ಪೀಠ ಸ್ಥಾಪಿಸುವಾಗ ಇದನ್ನು ಕುರುಬರ ಮಠ ಆಗಬೇಕು ಎಂದು ಇಚ್ಚಿಸಲೇ ಇಲ್ಲ. ಎಲ್ಲಾ ಶೋಷಿತ ಧರ್ಮಗಳ ಮಠ ಆಗಬೇಕು ಎನ್ನುವುದು ನಮ್ಮಗಳ ಉದ್ದೇಶ ಆಗಿತ್ತು” ಎಂದು ನೆನಪು ಮಾಡಿಕೊಂಡರು.
“ಧರ್ಮ ಇರುವುದು ನಮಗಾಗಿ. ನಾವು ಧರ್ಮಕ್ಕಾಗಿ ಅಲ್ಲ. ಅದಕ್ಕೇ ಕನಕದಾಸರು ಕುಲ ಕುಲವೆಂದು ಬಡಿದಾಡದಿರಿ ಎಂದು ಹೇಳಿದ್ದು. ಬಸವಣ್ಣನವರು, “ಇವ ನಮ್ಮವ ಇವ ನಮ್ಮವ” ಎಂದಿದ್ದು. ಕುವೆಂಪು ಅವರು, “ಹುಟ್ಟುವಾಗ ಎಲ್ಲರೂ ವಿಶ್ವ ಮಾನವರು” ಎಂದರು, ಅಂಬೇಡ್ಕರ್ ಅವರು ಸಮ ಸಮಾಜದ ಬಗ್ಗೆ ಹೇಳಿದರು. ಬಸವಾದಿ ಶರಣರು, ಕನಕದಾಸರು, ಅಂಬೇಡ್ಕರ್, ಕುವೆಂಪು, ಸೂಫಿಗಳ ಆಶಯಗಳೆಲ್ಲಾ ಒಂದೇ ಆಗಿತ್ತು. ಆದ್ದರಿಂದ ನಾವುಗಳು ಇವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಲ್ಲೇಶಪ್ಪ ಹೊರಪೇಟೆ ಅವರ ಕನಕನ ಹೆಜ್ಜೆ ಮಕ್ಕಳ ಕಾದಂಬರಿಯನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದರು.
ನಿರಂಜನಾನಂದಪುರಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ರೇವಣಸಿದ್ದೇಶ್ವರ, ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ, ಮಹಾಸಿದ್ದೇಶ್ವರಿ ದೇವರುಗಳ ಕುಂಭಾಭಿಷೇಕ ನೆರವೇರಿಸಿದರು.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಚಿವರಾದ ಹೆಚ್ ಎಂ ರೇವಣ್ಣ ಸೇರಿದಂತೆ ಇತರರು ಇದ್ದರು.