ಬಿಜೆಪಿಯಿಂದ ಉಚ್ಛಾಟಿತರಾಗಿರುವ ಮಾಜಿ ಶಾಸಕ ಕೆ ರಘುಪತಿ ಭಟ್ ಅವರು ಹಿಜಾಬ್ ಹೋರಾಟಗಾರ್ತಿ ಅಲಿಯಾ ಅಸ್ಸಾದಿ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿ, “ಆಕೆಯ ಶೈಕ್ಷಣಿಕ ಜೀವನಕ್ಕೆ ನಾನು ಶುಭ ಕೋರುತ್ತೇನೆ” ಎಂದಿದ್ದಾರೆ.
“ಉಡುಪಿಯಲ್ಲಿಈ ಹಿಂದೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಹಿಜಾಬ್ ಪ್ರಕರಣವನ್ನು ನಾನು ಸಮವಸ್ತ್ರ ಆಧಾರಿತವಾಗಿ ನಾನು ನೋಡಿದ್ದೇನೆಯೇ ಹೊರತು, ಧರ್ಮಾಧಾರಿತವಾಗಿ ನೋಡಿಲ್ಲ” ಎಂದು ತಿಳಿಸಿದ್ದಾರೆ.
“ಆ ವಿದ್ಯಾರ್ಥಿನಿ ಕೆಲವು ಸಂಘಟನೆಗಳ ಪ್ರಭಾವಕ್ಕೆ ಒಳಗಾಗಿದ್ದರು. ಹಾಗಾಗಿಯೇ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು. ಕಾಲೇಜಿನಲ್ಲಿ ಆಕೆ ಶಿಸ್ತು ತಪ್ಪುಬಾರದಾಗಿತ್ತು. ಇದಕ್ಕಾಗಿಯೇ ಇದು ದೊಡ್ಡದಾಗಿ ಬೆಳೆಯಿತು. ನಾನು ಶಾಸಕನಾಗುವ ಮುನ್ನ ಆ ಶಾಲೆಯಲ್ಲಿ ಸಮವಸ್ತ್ರ ಪದ್ದತಿ ಜಾರಿಯಲ್ಲಿತ್ತು. ಹಾಗಾಗಿ, ಅದು ಹೋರಾಟಕ್ಕೆ ಕಾರಣವಾಯಿತು” ಎಂದು ಅಲಿಯಾ ಅಸ್ಸಾದಿ ಟ್ವೀಟಿಗೆ ಸ್ಪಷ್ಟನೆ
ಯನ್ನು ನೀಡಿದ್ದಾರೆ.
“ನಾನು ಮೂರು ಬಾರಿ ಉಡುಪಿಯ ಶಾಸಕನಾಗಿದ್ದೇನೆ, ಜನರ ಆಶೀರ್ವಾದ ಇಲ್ಲದಿದ್ದರೆ ಗೆಲ್ಲಲು ಸಾಧ್ಯವೇ? ಏನೇ ಆಗಲಿ, ಒಳ್ಳೆಯ ಶಿಕ್ಷಣದಿಂದ ಧರ್ಮಾದಂತೆ, ದೇಶದ್ರೋಹದ ಭಾವನೆ ಬರುವುದಿಲ್ಲ ಎನ್ನುವುದು ನನ್ನ ನಂಬಿಕೆ. ಆಕೆಯ ಶೈಕ್ಷಣಿಕ ಜೀವನಕ್ಕೆ ನಾನು ಶುಭ ಕೋರುತ್ತೇನೆ” ಎಂದು ರಘುಪತಿ ಭಟ್ ತಿಳಿಸಿದ್ದಾರೆ.
ಅಲಿಯಾ ಅಸ್ಸಾದಿ ಟ್ವೀಟ್ ಏನು?
“ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು. ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನಗಳಿರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ, ಆದರೆ ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು. ಅಂದು ನಾನು ಉಚ್ಛಾಟಿತ ವಿದ್ಯಾರ್ಥಿ, ನಿಮಗೆ ಪಕ್ಷದಲ್ಲಿ ಪದವಿ. ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿ, ನೀವು ಉಚ್ಚಾಟಿತ ವ್ಯಕ್ತಿ” ಎಂದು ಹಿಜಾಬ್ ಹೋರಾಟಗಾರ್ತಿ ಅಲಿಯಾ ಅಸ್ಸಾದಿ ಟ್ವೀಟ್ ಮಾಡಿದ್ದರು.