Homeಕರ್ನಾಟಕಕೊಲೆಯಾದ ಬಿಡದಿ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಸರ್ಕಾರದಿಂದ ನ್ಯಾಯ: ಡಿ.ಕೆ.ಶಿವಕುಮಾರ್

ಕೊಲೆಯಾದ ಬಿಡದಿ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಸರ್ಕಾರದಿಂದ ನ್ಯಾಯ: ಡಿ.ಕೆ.ಶಿವಕುಮಾರ್

ರಾಮನಗರ ಜಿಲ್ಲೆಯ ಭದ್ರಾಪುರ ಗ್ರಾಮದ ಅಪ್ರಾಪ್ತ ಬಾಲಕಿ ಖುಷಿ ಹತ್ಯೆಯ ವಿಚಾರದಲ್ಲಿ ಅವರ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿ ಕೊಡಲಾಗುವುದು. ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ರಾಮನಗರ ಜಿಲ್ಲೆ ಬಿಡದಿಯ ಭದ್ರಾಪುರದ ಖುಷಿ ಎನ್ನುವ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ ಬಾಲಕಿಯ ಶವ ರೈಲ್ವೇ ಹಳಿ ಬಳಿ ಪತ್ತೆಯಾಗಿತ್ತು. ಆಕೆಯ ಕುಟುಂಬ ಸದಸ್ಯರಿಗೆ ಬುಧವಾರ ಸಾಂತ್ವನ ಹೇಳಿ, ಜಿಲ್ಲಾಡಳಿತ ಪರವಾಗಿ ₹4,12,500 ಹಾಗೂ ಪಂಚಾಯ್ತಿ ವತಿಯಿಂದ ₹50,000 ಪರಿಹಾರ ಚೆಕ್ ವಿತರಿಸಿ ನಂತರ ಮಾಧ್ಯಮಗಳ ಜತೆ ಮಾತನಾಡಿದರು.

“ಈ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಯಾರ ಒತ್ತಡಕ್ಕೂ ಒಳಗಾಗದೆ ನ್ಯಾಯಪರ, ನಿಷ್ಠುರವಾಗಿ ತನಿಖೆ ನಡೆಯಲಿದೆ.ಯಾರ‌ ಮೇಲಾದರೂ ಅನುಮಾನವಿದೆಯೇ ಎಂದು ಬಾಲಕಿಯ ಕುಟುಂಬಸ್ಥರ ಬಳಿ ಕೇಳಿದೆ. ಅವರು ಇಲ್ಲ ಎಂದು ಹೇಳುತ್ತಿದ್ದಾರೆ. ತನಿಖೆ ಮಾಡುವುದು ಪೊಲೀಸ್ ಇಲಾಖೆ ಕರ್ತವ್ಯ” ಎಂದರು.

ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆಯೇ ಎಂದು ಕೇಳಿದಾಗ, “ಎಲ್ಲ ಆಯಾಮದಲ್ಲಿಯೂ ಪೊಲೀಸರು ತನಿಖೆ ಮಾಡಲಿದ್ದಾರೆ. ದ್ವೇಷದಿಂದ ನಡೆದಿದೆಯೇ? ಅತ್ಯಾಚಾರವಾಗಿದೆಯೇ? ಏನಾದರೂ ಬೇರೆ ಕಾರಣ ಇದೆಯೇ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ನಾವು ನ್ಯಾಯ ಒದಗಿಸುತ್ತೇವೆ ” ಎಂದು ಹೇಳಿದರು.

“ಬಾಲಕಿಯು ಹಾಸ್ಟೆಲ್ ನಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿತ್ತು. ರಜೆಗೆಂದು ಊರಿಗೆ ಬಂದ ಸಂದರ್ಭದಲ್ಲಿ ಈ ಅನಾಹುತ ಘಟನೆ ನಡೆದಿದೆ. ಮಾತುಬಾರದ, ಕಿವಿ ಕೇಳದಿದ್ದರೂ ಚುರುಕಾಗಿದ್ದ ಬಾಲಕಿ ಎಂದು ಎಲ್ಲರೂ ಹೇಳುತ್ತಿದ್ದಾರೆ” ಎಂದರು.

ಘಟನೆ ನಡೆದಿರುವ ಈ ಊರಿನಲ್ಲಿ ಮೂಲಸೌಕರ್ಯಗಳ ಕೊರತೆಯಿದೆ, ಬೀದಿ ದೀಪಗಳ ವ್ಯವಸ್ಥೆಯಿಲ್ಲ ಎನ್ನುವ ಆರೋಪದ ಬಗ್ಗೆ ಕೇಳಿದಾಗ, “ಈಗ ಈ ಪ್ರಕರಣದ ಜತೆಗೆ ಬೇರೆ ವಿಚಾರಗಳನ್ನು ಬೆರೆಸಲು ಹೋಗುವುದಿಲ್ಲ. ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗುವುದು” ಎಂದರು.

ಆರೋಪಿಗಳ ಬಂಧನವಾಗಿದೆಯೇ ಎಂದಾಗ, “ತನಿಖೆ ನಡೆಯುತ್ತಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡುತ್ತಾರೆ. ನಾನು ಅದನ್ನು ಹೇಳಲು ಆಗುವುದಿಲ್ಲ” ಎಂದು ತಿಳಿಸಿದರು.‌

ಅಂತ್ಯ ಸಂಸ್ಕಾರ

ರಾಮನಗರ ಜಿಲ್ಲೆ ಬಿಡದಿಯಲ್ಲಿ ಭೀಕರವಾಗಿ ಕೊಲೆಯಾಗಿದ್ದ ಮಾತು ಬಾರದ ಮತ್ತು ಕಿವಿ ಕೇಳದ ಬಾಲಕಿಯ ಅಂತ್ಯ ಸಂಸ್ಕಾರ ಅಧಿಕಾರಿಗಳ ಸಮ್ಮುಖದಲ್ಲಿ ಬುಧವಾರ ನಡೆಯಿತು.

“ತಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿ ಕ್ರೂರವಾಗಿ ಕೊಲೆ ಮಾಡಲಾಗಿದೆ. ಹಂತಕರನ್ನು ಪೊಲೀಸರು ಬಂಧಿಸುವವರೆಗೆ ಆಕೆಯ ಶವಸಂಸ್ಕಾರ ಮಾಡುವುದಿಲ್ಲ…” ಎಂದು ಪೋಷಕರು ಹಠ ಹಿಡಿದ್ದರು. ಕೊನೆಗೆ ಅಧಿಕಾರಿಗಳು ಪಾಲಕರ ಮನವೊಲಿಸಿದ್ದು, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸ್ಥಳಕ್ಕೆ ಧಾವಿಸಿದ ಮೇಲೆ ಸ್ಥಳೀಯ ಸ್ಮಶಾನದಲ್ಲಿ ಬಾಲಕಿಯ ಅಂತ್ಯಸಂಸ್ಕಾರ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments