2008ರಲ್ಲಿ ನಡೆದಿದ್ದ ಟಿವಿ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ 15 ವರ್ಷಗಳ ಬಳಿಕ ತೀರ್ಪು ಹೊರಬಿದ್ದಿದ್ದು, ನಾಲ್ಕು ಅಪರಾಧಿಗಳಿಗೆ ದೆಹಲಿಯ ಸಾಕೇತ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
5ನೇ ಅಪರಾಧಿ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗದಿದ್ದರೂ, ಕೃತ್ಯಕ್ಕೆ ಕಾರು ನೀಡಿದಕ್ಕಾಗಿ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಪರಾಧಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ವಿತ್ ಮಲಿಕ್ ಮತ್ತು ಅಜಯ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹ 1.25 ಲಕ್ಷ ದಂಡ ಹಾಗೂ 5ನೇ ಅಪರಾಧಿ ಅಜಯ್ ಸೇಥಿಗೆ 3 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ₹7.25 ಲಕ್ಷ ದಂಡ ವಿಧಿಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವೀಂದ್ರ ಕುಮಾರ್ ಆದೇಶಿಸಿದ್ದಾರೆ.
ಅಪರಾಧಿಗಳಿಗೆ ವಿಧಿಸಲಾದ ಒಟ್ಟು ದಂಡದ ಮೊತ್ತದಲ್ಲಿ ₹ 12 ಲಕ್ಷಗಳನ್ನು ಸಂತ್ರಸ್ತೆಯ ಕುಟುಂಬಕ್ಕೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಸೌಮ್ಯಾ ವಿಶ್ವನಾಥನ್ ಖಾಸಗಿ ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಪತ್ರಕರ್ತೆಯಾಗಿದ್ದರು. ಸಪ್ಟೆಂಬರ್ 30, 2008 ರಂದು ಹತ್ಯೆಯಾಗಿದ್ದರು. ಆ ದಿನ ಬ್ರೇಕಿಂಗ್ ನ್ಯೂಸ್ ಈವೆಂಟ್‌ಗೆ ಸಹಾಯ ಮಾಡಲೆಂದು ಕಚೇರಿಯಲ್ಲೇ ತಂಗಿದ್ದರು. ಕೆಲಸ ಮುಗಿಯುತ್ತಿದ್ದಂತೆಯೇ ಝಂಡೆವಾಲನ್ ಕಚೇರಿಯಿಂದ ಬೆಳಗ್ಗಿನ ಜಾವ 3.03 ಕ್ಕೆ ತಮ್ಮ ಕಾರಿನಲ್ಲಿ ವಸಂತ್ ಕುಂಜ್‌ನಲ್ಲಿದ್ದ ನಿವಾಸಕ್ಕೆ ತೆರಳಿದ್ದಾರೆ. ಆ ವೇಳೆ ಹಂತಕರಿಂದ ಕೊಲೆಯಾಗಿದ್ದರು.
15 ವರ್ಷಗಳ ಬಳಿಕ ತೀರ್ಪು ಹೊರಬಿದ್ದಿದ್ದು, ಇದು ನನಗೆ ತೃಪ್ತಿ ತಂದಿಲ್ಲ ಅಂತ ಸೌಮ್ಯಾ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.