Homeಕರ್ನಾಟಕಯುಜಿಸಿ ಹೊಸ ಕರಡಿಗೆ ಆಕ್ಷೇಪ, ಸಲ್ಲಿಸಲು ವಿವಿಧ ರಾಜ್ಯಗಳ ಜಂಟಿ ನಿರ್ಧಾರ: ಸಚಿವ ಸುಧಾಕರ್

ಯುಜಿಸಿ ಹೊಸ ಕರಡಿಗೆ ಆಕ್ಷೇಪ, ಸಲ್ಲಿಸಲು ವಿವಿಧ ರಾಜ್ಯಗಳ ಜಂಟಿ ನಿರ್ಧಾರ: ಸಚಿವ ಸುಧಾಕರ್

ಯುಜಿಸಿ ರೂಪಿಸಿರುವ 2025 ರ ಹೊಸ ಕರಡಿಗೆ ಆಕ್ಷೇಪ ಸಲ್ಲಿಸಲು ವಿವಿಧ ರಾಜ್ಯಗಳ ಉನ್ನತ ಶಿಕ್ಷಣ ಸಚಿವರುಗಳ ಸಮಾವೇಶದಲ್ಲಿ ತೀರ್ಮಾನಿಸಲಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ತಿಳಿಸಿದರು.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ರಾಜ್ಯಗಳ ಉನ್ನತ ಶಿಕ್ಷಣ ಸಚಿವರುಗಳ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

“ಯುಜಿಸಿ ರೂಪಿಸಿರುವ ಹೊಸ ಕರಡು ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನವಾಗಿದ್ದು, ಶಿಕ್ಷಣ, ಬೋಧನಾ ಕ್ಷೇತ್ರದಲ್ಲಿ ಅನುಭವ ಇಲ್ಲದವರು ಕುಲಪತಿಗಳಾಗಿ ಅಧಿಕಾರ ನಡೆಸಬಹುದಾಗಿದೆ. ಇದರಿಂದ ಶಿಕ್ಷಣ ತಜ್ಞರು ಮತ್ತು ವಿದ್ವಾಂಸರಿಗೆ ಅನ್ಯಾಯವಾಗುತ್ತದೆ. ಇದುವರೆಗೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಸಂಬಂಧ ರಾಜ್ಯ ಸರ್ಕಾರ ಶೋಧನಾ ಸಮಿತಿಯನ್ನು ರಚಿಸುತ್ತಿದ್ದು, ಪ್ರಸ್ತುತ ಹೊಸ ಕರಡಿನ ಅನ್ವಯ ಈ ಅಧಿಕಾರವನ್ನು ರಾಜ್ಯ ಸರ್ಕಾರದ ಕೈಯಿಂದ ಕಿತ್ತುಕೊಳ್ಳಲಾಗಿದೆ. ಇದರಿಂದ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರವನ್ನು ನೀಡಿದಂತಾಗಿದೆ” ಎಂದರು.

“ಅಲ್ಲದೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಬೇಕಾಗುವ ಐಚ್ಛಿಕ ವಿಷಯದಲ್ಲಿನ ಮೂಲ ಪದವಿ ಸೇರಿದಂತೆ ಅತಿಥಿ ಶಿಕ್ಷಕರು/ಸಂದರ್ಶಕ ಅಧ್ಯಾಪಕರು/ ಪ್ರೊಫೆಸರ್ ಮುಂತಾದವರ ನೇಮಕಾತಿ ಕುರಿತು ಮಾರ್ಗಸೂಚಿಯನ್ನು ಅಂತಿಮ ಗೊಳಿಸುವ ಮುನ್ನ ಹೆಚ್ಚಿನ ಸ್ಷಷ್ಟತೆ ನೀಡಬೇಕಾಗಿದೆ” ಎಂದು ಹೇಳಿದರು.

“ರಾಷ್ಟ್ರೀಯ ಶಿಕ್ಷಣ ನೀತಿ( NEP) ಯಲ್ಲಿರುವ ಎಲ್ಲ ಅಂಶಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸದಿದ್ದಲ್ಲಿ, ಶಿಕ್ಷಾರ್ಹ ಕ್ರಮಗಳನ್ನು ತೆಗೆದುಕೊಳ್ಳುವ ನಿರ್ಧಾರ ರಾಜ್ಯಗಳ ಸ್ವಾಯತ್ತ ಮನೋಭಾವಕ್ಕೆ ಧಕ್ಕೆ ತರುವಂತದ್ದು. ಅದನ್ನು ಪರಿಶೀಲಿಸಬೇಕಾದ ಅಗತ್ಯತೆ ಇದೆ. ಒಟ್ಟಾರೆಯಾಗಿ ಯುಜಿಸಿ ನಿಯಮಗಳನ್ನು ರಚಿಸುವ ಸಂದರ್ಭದಲ್ಲಿ ರಾಜ್ಯಗಳೊಡನೆ ಚರ್ಚೆ ಮತ್ತು ಸಮಾಲೋಚನೆ ನಡೆಸಬೇಕಾದ ಅಗತ್ಯತೆ ಇದೆ” ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಿಮಾಚಲ ಪ್ರದೇಶ, ತೆಲಂಗಾಣ, ತಮಿಳುನಾಡು, ಜಾರ್ಖಂಡ್ ರಾಜ್ಯಗಳ ಉನ್ನತ ಶಿಕ್ಷಣ ಸಚಿವರುಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments