ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧ ಆವರಣದಲ್ಲಿ ಅವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಸೋಮವಾರ ಪುಷ್ಪ ನಮನ ಸಲ್ಲಿಸಿದರು.
ನಂತರ ಸಿದ್ದರಾಮಯ್ಯ ಅವರು ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆದ ನೆಹರೂ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್, ಮಾಜಿ ಅಧ್ಯಕ್ಷ, ಸಚಿವ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್, ಮಂಜುನಾಥ್ ಭಂಡಾರಿ, ಮಾಜಿ ಸಚಿವೆ ರಾಣಿ ಸತೀಶ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ ಕೆ ಹರಿಪ್ರಸಾದ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
ನಮನ ಸಲ್ಲಿಸಿ ಸಿಎಂ ಪೋಸ್ಟ್
“ದೇಶದ ಮೊದಲ ಪ್ರಧಾನಿ, ವಿಶ್ವವೇ ಕೊಂಡಾಡಿದ ರಾಜಕೀಯ ಮುತ್ಸದ್ದಿ ಮತ್ತು ಕಾಂಗ್ರೆಸ್ ಪಕ್ಷದ ಹೆಮ್ಮೆಯ ನಾಯಕ ಪಂಡಿತ ಜವಾಹರಲಾಲ ನೆಹರು ಅವರನ್ನು ಅವರ ಪುಣ್ಯದಿನದಂದು ಗೌರವ ಮತ್ತು ಕೃತಜ್ಞತೆಯಿಂದ ನೆನೆಯೋಣ” ಎಂದು ಸಿದ್ದರಾಮಯ್ಯ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
“ಗುಲಾಮಗಿರಿಯಿಂದ ಜರ್ಜರಿತವಾಗಿದ್ದ ಭಾರತವನ್ನು ಆರ್ಥಿಕ ಅಭಿವೃದ್ದಿ ಮತ್ತು ಸಾಮಾಜಿಕ ಸುಧಾರಣೆಯ ಕ್ರಮಗಳ ಮೂಲಕ ಸ್ವತಂತ್ರ, ಸ್ವಾವಲಂಬಿ ಮತ್ತು ಜಾತ್ಯತೀತ ರಾಷ್ಟ್ರವನ್ನಾಗಿ ಕಟ್ಟಿದ ನೆಹರು ಅವರ ಜನಪರ ಕಾಳಜಿ, ದೇಶಭಕ್ತಿ ಮತ್ತು ಪುರೋಗಾಮಿ ಚಿಂತನೆಗಳು ನಮಗೆಲ್ಲ ಆದರ್ಶ ಮತ್ತು ಸ್ಪೂರ್ತಿದಾಯಕ” ಎಂದಿದ್ದಾರೆ.
“ಪ್ರಜಾಪ್ರಭುತ್ವ ವಿರೋಧಿ ಮತ್ತು ಕೋಮುವಾದಿ ಶಕ್ತಿಗಳು ಸುಳ್ಳು ಇತಿಹಾಸ ಮತ್ತು ಅಪಪ್ರಚಾರಗಳಿಂದ ದಮನಮಾಡಲು ಯತ್ನಿಸಿದಷ್ಟು ಪುಟಿದೆದ್ದು ಬಂದು ನಮ್ಮನ್ನು ಸೆಳೆಯುವ, ಸಲಹುವ ಮತ್ತು ಮಾರ್ಗದರ್ಶನ ನೀಡುವ ಜವಹರಲಾಲ ನೆಹರು ಅವರ ಚಿಂತನೆಯನ್ನು ಪಸರಿಸುವ ಮೂಲಕ ಅವರನ್ನು ಜೀವಂತವಾಗಿಡೋಣ” ಎಂದು ತಿಳಿಸಿದ್ದಾರೆ.