ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಆರೋಪಿಗಳ ವಿರುದ್ಧ ಬೆಳಗಾವಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
500 ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ನಲ್ಲಿ ಹತ್ಯೆಗೆ ಕಾರಣವಾದ ಪ್ರಮುಖ ವಿಚಾರ ಬಯಲಾಗಿದೆ. ಹತ್ಯೆಗೆ ಹಣಕಾಸಿನ ವಿಚಾರ ಮಾತ್ರವಲ್ಲ, ಬೈಗುಳವೇ ಹೆಚ್ಚು ಕಾರಣ ಎನ್ನುವ ವಿಚಾರ ಸಿಐಡಿ ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣದ ಸಂಪೂರ್ಣ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಆರೋಪಿಗಳಾದ ನಾರಾಯಣ ಮಾಳಿ ಮತ್ತು ಹುಸೇನ್ ಡಾಲಾಯತ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಸಿಐಡಿ ಚಾರ್ಜ್ಶೀಟ್ನಲ್ಲಿ 10 ಮಂದಿಯನ್ನು ಸಾಕ್ಷ್ಯಾಧಾರಗಳನ್ನಾಗಿಸಿ 164 ಹೇಳಿಕೆಗಳ ಜೊತೆ ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹಿಸಿದೆ.
ಜೈನಮುನಿ ಜೊತೆ ಆರೋಪಿ ನಾರಾಯಣ ಮಾಳಿ ಹೆಚ್ಚು ಒಡನಾಟ ಹೊಂದಿದ್ದ ಬಗ್ಗೆ ಸಾಕ್ಷಿಗಳು ನೀಡಿದ ಹೇಳಿಕೆಯನ್ನು ದಾಖಲಿಸಲಾಗಿದೆ. ಆರು ಲಕ್ಷ ಹಣದ ಜೊತೆ ಜೈನ ಮುನಿಗಳು ಆರೋಪಿಯನ್ನ ಹೀಯಾಳಿಸಿ ನಿಂದನೆ ಮಾಡಿದ್ದು ಕೊಲೆಗೆ ಕಾರಣವಾಗಿದೆ.
ಬೈಗುಳದಿಂದ ಕೋಪಗೊಂಡಿದ್ದ ಆರೋಪಿಗಳು ಕಾಮಕುಮಾರ ನಂದಿ ಮಹಾರಾಜರನ್ನು ಕೊಲೆ ಮಾಡಿ ಗುರುತು ಸಹ ಸಿಗದಂತೆ ದೇಹ ತುಂಡರಿಸಿ ಬೋರ್ವೆಲ್ಗೆ ಹಾಕಿದ್ದರು. ತುಂಡರಿಸಲು ಬಳಸಿದ್ದ ಮಚ್ಚು ಮತ್ತು ಚೀಲವನ್ನು ರಾಯಭಾಗದ ಮೇಲ್ಸೇತುವೆ ಬಳಿ ಎಸೆದಿದ್ದರು.