Homeಕರ್ನಾಟಕಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ: ಡಿ‌ ಕೆ ಶಿವಕುಮಾರ್

ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ: ಡಿ‌ ಕೆ ಶಿವಕುಮಾರ್

ಡಿ.27ರಂದು ನಡೆಯಲಿರುವ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸ ಸಮಾರಂಭ ಸಭೆಗೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಎಂದು ಹೆಸರಿಡಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ಬೆಳಗಾವಿ ಕ್ಲಬ್ ರಸ್ತೆಯ ಸಿಪಿಇಡಿ ಶಾಲಾ ಮೈದಾನದಲ್ಲಿ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಬುಧವಾರ ಮಾತನಾಡಿ, “ಈ ಪ್ರದೇಶವನ್ನು ಮಹಾತ್ಮಾ ಗಾಂಧೀಜಿ ನವನಗರ ಎಂದು ಘೋಷಣೆ ಮಾಡಿದ್ದೇವೆ. 26 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನು ಗಾಂಧಿ ಬಾವಿ (ಪಂಪ ಸರೋವರ) ಬಳಿ ಹಮ್ಮಿಕೊಳ್ಳಲಾಗಿದೆ. 1924ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧಿ ಅವರು ಅಧ್ಯಕ್ಷರಾಗಿದ್ದರು. ಇಂದು ಆ ಸ್ಥಾನದಲ್ಲಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿರುವುದು ನಮ್ಮ ಹೆಮ್ಮೆಯ ವಿಚಾರ” ಎಂದರು.

“ಕರ್ನಾಟಕದವರೇ ಆದ ಗಂಗಾಧರ ದೇಶಪಾಂಡೆ ಹಾಗೂ ಜವಾಹರ್ ಲಾಲ್ ನೆಹರು ಅವರು ಅಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಅವರೂ ಸೇರಿ ಬೆಳಗಾವಿಯಲ್ಲಿ ಈ ಅಧಿವೇಶನ ಮಾಡಿದ್ದರು. ಅಂದು 80 ಎಕರೆ ಜಾಗದಲ್ಲಿ ಅಧಿವೇಶನ ನಡೆದಿತ್ತು. ಇಂದು ಅದೇ ಸ್ಥಳದಲ್ಲಿ ಕಾರ್ಯಕಾರಿ ಸಮಿತಿ ಸಭೆ ಮಾಡುತ್ತಿದ್ದೇವೆ.” ಎಂದು ತಿಳಿಸಿದರು.

“1924ರ ಅಧಿವೇಶನದ ದಾಖಲೆಗಳನ್ನು ಸಂಗ್ರಹಿಸಿದ್ದು, ಅದನ್ನು ಪುಸ್ತಕ ಮಾಡಿ ನಾಳೆ ಬಿಡುಗಡೆ ಮಾಡುತ್ತಿದ್ದೇವೆ. 26ರಂದು ಬೆಳಗ್ಗೆ 10 ಗಂಟೆಗೆ ವೀರ ಸೌಧದಲ್ಲಿ ಗಾಂಧಿ ಅವರ ಪುತ್ಥಳಿ ಅನಾವರಣ ಮಾಡಲಾಗುವುದು. ಜತೆಗೆ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಬೆಳಗ್ಗೆ 10.45ಕ್ಕೆ ಖಾದಿ ಮೇಳವನ್ನು ಉದ್ಘಾಟನೆ ಮಾಡಲಾಗುವುದು. 11.15ಕ್ಕೆ ಗಂಗಾಧರ ದೇಶಪಾಂಡೆ ಅವರ ಸ್ಮಾರಕವನ್ನು ನಾನು ಹಾಗೂ ಮುಖ್ಯಮಂತ್ರಿಗಳು ಅನಾವರಣ ಮಾಡಲಿದ್ದೇವೆ. ನಂತರ ಗಂಗಾಧರ ದೇಶಪಾಂಡೆ ಅವರ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಮಧ್ಯಾಹ್ನ 3 ಗಂಟೆಗೆ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ರಾತ್ರಿ 7ಕ್ಕೆ ಎಐಸಿಸಿ ಅಧ್ಯಕ್ಷರಿಂದ ಭೋಜನಕೂಟ ಏರ್ಪಡಿಸಲಾಗಿದೆ” ಎಂದು ಹೇಳಿದರು.

“ಡಿ.27ರಂದು ಬೆಳಗ್ಗೆ 10.30ಕ್ಕೆ ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆಯನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಅನಾವರಣಗೊಳಿಸಲಿದ್ದಾರೆ. ಮುಖ್ಯಮಂತ್ರಿಗಳು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಭಾಧ್ಯಕ್ಷರಾದ ಯು.ಟಿ ಖಾದರ್ ಹಾಗೂ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಮುಖಂಡತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಪಕ್ಷದ ನಾಯಕರಿಗೆ ಆಹ್ವಾನ ನೀಡಲಾಗುವುದು. ಸ್ಥಳೀಯ ನಾಯಕರು, ರಾಜ್ಯದ ಎಲ್ಲಾ ಸಂಸದರನ್ನು ನಾವು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. 12 ಗಂಟೆಗೆ ಮುಖ್ಯಮಂತ್ರಿಗಳಿಂದ ಔತನಕೂಟ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಮಾವೇಶ ನಡೆಯಲಿದೆ” ಎಂದು ತಿಳಿಸಿದರು.

ಬೆಳಗಾವಿಯಲ್ಲಿ ದೀಪಾಲಂಕಾರ

“ಬೆಳಗಾವಿ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಎಸ್ಕಾಂನವರು ಬೆಳಗಾವಿ ನಗರದಲ್ಲಿ ದೀಪಾಲಂಕಾರ ಮಾಡಿದ್ದು, ಬಹಳ ಉತ್ತಮವಾಗಿ ಅಲಂಕಾರ ಮಾಡಿದ್ದಾರೆ. ರಾಜ್ಯದ ಜನತೆ ಅದರಲ್ಲೂ ಕಿತ್ತೂರು ಕರ್ನಾಟಕ ಭಾಗದ ಜನ ಈ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. 1904ರಲ್ಲಿ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿದ್ದು, 1924ರಲ್ಲಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಅದರ ಫೋಟೋಗಳು ನಮ್ಮ ಬಳಿ ಇದೆ. ವಿಜಯನಗರದ ವಿರೂಪಾಕ್ಷ ದೇಗುಲ ಮಾದರಿಯ ದೀಪಾಲಂಕಾರದ ಫೋಟೋ ಲಭ್ಯವಾಗಿದೆ. ಅದೇ ರೀತಿ ಈ ಬಾರಿಯೂ ದೀಪಾಲಂಕಾರ ಮಾಡಲಾಗಿದೆ” ಎಂದು ತಿಳಿಸಿದರು.

ವರ್ಷಪೂರ್ತಿ ಗಾಂಧಿ ಭಾರತ ಕಾರ್ಯಕ್ರಮ

“ಸರ್ಕಾರ ಹಾಗೂ ಪಕ್ಷದ ವತಿಯಿಂದ ರಾಜ್ಯಾದ್ಯಂತ ಈ ಶತಮಾನೋತ್ಸವ ಗಾಂಧಿ ಭಾರತ ಕಾರ್ಯಕ್ರಮ ಆಚರಿಸಲಾಗುವುದು. ಶಾಲಾ ಕಾಲೇಜುಗಳಲ್ಲಿ ಚರ್ಚಾಸ್ಪರ್ಧೆ ನಡೆಸಲಾಗುವುದು. ಗಾಂಧಿ ತತ್ವ, ಆಚಾರ ವಿಚಾರಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುವುದು. ಪಕ್ಷ ಹಾಗೂ ಸರ್ಕಾರದ ವತಿಯಿಂದ ಈಗಾಗಲೇ ಗಾಂಧಿ ಜಯಂತಿ ಅಂಗವಾಗಿ ಕಳೆದ ಅಕ್ಟೋಬರ್ 2ರಂದು ಗಾಂಧಿ ನಡಿಗೆ ಪಾದಯಾತ್ರೆ ಮಾಡಿದ್ದೇವೆ, ವಿಧಾನಸೌಧದಲ್ಲಿ ಶಾಲಾ ಮಕ್ಕಳ ಜತೆ ಸಂವಾದ ಕಾರ್ಯಕ್ರಮ ಮಾಡಲಾಗಿದೆ” ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆ ಶಾಸಕರಿಗೆ ಯಾಕೆ ಜವಾಬ್ದಾರಿ ನೀಡಿಲ್ಲ ಎಂದು ಕೇಳಿದಾಗ, “ಬೆಳಗಾವಿ ಶಾಸಕರಿಗೆ ಸಂಘಟನೆಯ ಜವಾಬ್ದಾರಿ ನೀಡಿದ್ದೇವೆ. ಅವರಿಗೆ ಈಗಾಗಲೇ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಸಭೆಯ ಚರ್ಚಾ ವಿಷಯಗಳನ್ನು ಅಂದು ತೀರ್ಮಾನ ಮಾಡಲಿದ್ದಾರೆ. ಈಗಾಗಲೇ ಕರಡು ಸಮಿತಿ ಸಭೆ ನಡೆಯುತ್ತಿದ್ದು, ಏನೆಲ್ಲಾ ವಿಚಾರ ಚರ್ಚೆ ಮಾಡಬೇಕು ಎಂದು ಸಭೆ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

ಅಂಬೇಡ್ಕರ್ ಗೆ ಅಪಮಾನ ಮಾಡಿರುವ ವಿಚಾರ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಗುವುದೇ ಎಂದು ಕೇಳಿದಾಗ, “27ರಂದು ನಡೆಯಲಿರುವ ಸಮಾವೇಶ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಹೆಸರಿಟ್ಟಿದ್ದೇವೆ” ಎಂದು ಉತ್ತರಿಸಿದರು.

ಶೆಟ್ಟರ್ ನೇತೃತ್ವದಲ್ಲಿ ಕಾರ್ಯಕ್ರಮ ಮಾಡಲಿ, ನಾನು ಸೇವಕನಂತೆ ಕೆಲಸ ಮಾಡುವೆ

ಗಾಂಧಿ ಮೇಲೆ ಪ್ರೀತಿ ಇದ್ದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಕಾರ್ಯಕ್ರಮ ಮಾಡಿದ್ದರೆ 500 ಕೋಟಿ ಖರ್ಚು ಮಾಡಲು ಸಿದ್ಧವಿದ್ದೆವು ಎಂಬ ‌ಜಗದೀಶ್ ಶೆಟ್ಟರ್ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಈಗಲೂ ಮಾಡಲಿ. ನಾವು ಈ ಕಾರ್ಯಕ್ರಮವನ್ನು ಒಂದು ವರ್ಷಗಳ ಕಾಲ ಆಚರಣೆ ಮಾಡುತ್ತೇವೆ. ಅವರು ಕೂಡ ಈ ಕಾರ್ಯಕ್ರಮ ಮಾಡಲಿ ಎಂದು ಮಾಧ್ಯಮಗಳ ಮೂಲಕ ನಮ್ರತೆಯಿಂದ ಜನರ ಪರವಾಗಿ ಮನವಿ ಮಾಡುತ್ತೇನೆ. ಅವರೇ ಮುಂದಾಳತ್ವ ವಹಿಸಿಕೊಂಡು ಕಾರ್ಯಕ್ರಮ ಮಾಡಲಿ, ಅವರ ಹಿಂದೆ ನಿಂತು ನಾವು ಸೇವಕರಂತೆ ಕೆಲಸ ಮಾಡುತ್ತೇವೆ” ಎಂದರು.

ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವೆನೆ ಹೋಗಿಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ರಾಜ್ಯದಲ್ಲಿ ನಾವು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ತಮ್ಮ ಜವಾಬ್ದಾರಿಯಿಂದ ಕಾರ್ಯಕ್ರಮ ಮಾಡಲಿ. ದೇಶದ ನೋಟಿನಲ್ಲಿ ಗಾಂಧಿ ಅವರ ಚಿತ್ರ ಏಕಿದೆ? ಅವರಿಗೆ ಗಾಂಧಿ ಬಗ್ಗೆ ಅರಿವಿಲ್ಲವೇ? ಗಾಂಧಿ ಅವರ ಹಕ್ಕನ್ನು ಬಿಜೆಪಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸವಿಲ್ಲ. ಸ್ವಾತಂತ್ರ್ಯ ಹೋರಾಟದ ಇತಿಹಾಸವಿರುವುದು ಕಾಂಗ್ರೆಸಿಗರಿಗೆ ಮಾತ್ರ” ಎಂದು ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments