ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೈದ್ಯಕೀಯ ಕಾರಣ ಉಲ್ಲೇಖಿಸಿ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ, ತಮ್ಮ ರಾಜೀನಾಮೆ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
“ಆರೋಗ್ಯಕ್ಕೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಯ ಪ್ರಕಾರ, ನಾನು ಭಾರತದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಇದು ತಕ್ಷಣದಿಂದ ಜಾರಿಗೆ ಬರುತ್ತದೆ” ಎಂದು ಅವರ ಪತ್ರದಲ್ಲಿ ವಿವರಿಸಿದ್ದಾರೆ.
“ಅದರೊಂದಿಗೆ ಪ್ರಧಾನ ಮಂತ್ರಿಗಳು ಮತ್ತು ಮಂತ್ರಿ ಮಂಡಳಿಗೆ ನಾನು ನನ್ನ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಪ್ರಧಾನ ಮಂತ್ರಿಯವರ ಸಹಕಾರ ಮತ್ತು ಬೆಂಬಲ ಅಮೂಲ್ಯವಾದುದು, ಮತ್ತು ನನ್ನ ಅಧಿಕಾರದ ಅವಧಿಯಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
ಮುಂದಿನ ಉಪರಾಷ್ಟ್ರಪತಿ ಯಾರು?
ರಾಜೀನಾಮೆ, ನಿಧನ, ಪದಚ್ಯುತಿ ಅಥವಾ ಇನ್ಯಾವುದೇ ಕಾರಣದಿಂದ ಉಪ ರಾಷ್ಟ್ರಪತಿ ಸ್ಥಾನ ತೆರವಾದಲ್ಲಿ, ಆ ಸ್ಥಾನವನ್ನು ಭರ್ತಿ ಮಾಡಲು ಸಾಧ್ಯವಾದಷ್ಟು ಬೇಗ ಚುನಾವಣೆ ನಡೆಸಬೇಕೆಂದು ಸಂವಿಧಾನವು ಹೇಳುತ್ತದೆ.
ಈ ಬಗ್ಗೆ ಸಂವಿಧಾನದ 68ನೇ ವಿಧಿಯ 2ನೇ ಷರತ್ತಿನಲ್ಲಿ ವಿವರಿಸಲಾಗಿದೆ.
ಆಯ್ಕೆಯಾದ ವ್ಯಕ್ತಿಯು ಅಧಿಕಾರ ವಹಿಸಿಕೊಂಡ ದಿನದಿಂದ ಐದು ವರ್ಷಗಳ ಪೂರ್ಣ ಅವಧಿಗೆ ಅಧಿಕಾರದಲ್ಲಿರಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ. ಆದರೆ, ಉಪ ರಾಷ್ಟ್ರಪತಿ ಹುದ್ದೆಯಲ್ಲಿದ್ದವರು ಅವಧಿ ಮುಗಿಯುವ ಮೊದಲು ನಿಧನರಾದರೆ ಅಥವಾ ರಾಜೀನಾಮೆ ನೀಡಿದರೆ ಅಥವಾ ರಾಷ್ಟ್ರಪತಿಯಾಗಿ ಆಯ್ಕೆಯಾದರೆ, ಮುಂದಿನ ಉಪ ರಾಷ್ಟ್ರಪತಿ ಆಯ್ಕೆಯಾಗುವವರೆಗೆ ಅವರ ಕರ್ತವ್ಯಗಳನ್ನು ಯಾರು ನಿರ್ವಹಿಸುತ್ತಾರೆ ಎಂಬ ಬಗ್ಗೆ ಸಂವಿಧಾನದಲ್ಲಿ ವಿವರಿಸಿಲ್ಲ.
66ನೇ ವಿಧಿಯ ಅಡಿಯಲ್ಲಿ, ಉಪರಾಷ್ಟ್ರಪತಿಯನ್ನು ಸಂಸತ್ತಿನ ಎರಡೂ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರನ್ನು ಮಾತ್ರ ಒಳಗೊಂಡಿರುವ ಎಲೆಕ್ಟೋರಲ್ ಕಾಲೇಜ್, ರಹಸ್ಯ ಮತದಾನ ಮತ್ತು ಏಕ ವರ್ಗಾವಣೆ ಮಾಡಬಹುದಾದ ಮತವನ್ನು ಬಳಸಿಕೊಂಡು ಅನುಪಾತದ ಪ್ರಾತಿನಿಧ್ಯ ವ್ಯವಸ್ಥೆಯ ಮೂಲಕ ಆಯ್ಕೆ ಮಾಡುತ್ತದೆ.
ರೇಸ್‌ನಲ್ಲಿ ಯಾರಿದ್ದಾರೆ?
ದೆಹಲಿ ರಾಜಕಾರಣದ ಮೂಲಗಳ ಪ್ರಕಾರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಉಪರಾಷ್ಟ್ರಪತಿ ಹುದ್ದೆಗೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಸದ್ಯಕ್ಕೆ ಇದು ಊಹಾಪೋಹ ಮಾತ್ರ. ಇತ್ತೀಚೆಗೆ ನಿತೀಶ್ ಕುಮಾರ್‌ಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡಗಳು ಕೇಳುಬರುತ್ತಿದ್ದವು ಎನ್ನಲಾಗಿತ್ತು. ಈಗ ಧನ್‌ಕರ್ ರಾಜೀನಾಮೆಯ ಬೆನ್ನಲ್ಲೇ ಅವರು ಈ ಸ್ಥಾನಕ್ಕೆ ಏರಬಹುದು ಎಂದು ಚರ್ಚೆಯಾಗುತ್ತಿದೆ.
ಹಾಗೆಯೇ ಜನತಾದಳ-ಸಂಯುಕ್ತ ಸಂಸದರಾಗಿರುವ ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರನ್ನು ಸಂಭಾವ್ಯ ಅಭ್ಯರ್ಥಿಯಾಗಿ ನೋಡಲಾಗುತ್ತಿದೆ.