ಆಲಮಟ್ಟಿ ಅಣೆಕಟ್ಟು ಎತ್ತರದ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರು ಕೃಷ್ಣಾ ನದಿ ಜಲಾನಯನ ಪ್ರದೇಶದ ರಾಜ್ಯಗಳ ಪ್ರತಿನಿಧಿಗಳನ್ನು ಕರೆಸಿ ಅಣೆಕಟ್ಟು ಎತ್ತರ ಹೆಚ್ಚಳದ ಬಗ್ಗೆ ಮುಂದಿನ 15 ದಿನಗಳಲ್ಲಿ ಸಭೆ ನಡೆಸಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ನವದೆಹಲಿಯ ಕರ್ನಾಟಕ ಭವನ-1 “ಕಾವೇರಿ”ಯಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಶುಕ್ರವಾರ ಮಾತನಾಡಿದರು.
“ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್ ಅವರನ್ನು ರಾಜ್ಯಖಾತೆ ಸಚಿವರಾದ ಸೋಮಣ್ಣ ಅವರ ಜೊತೆ ಭೇಟಿ ಮಾಡಲಾಗಿತ್ತು. ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ನಮಗೆ ಎಷ್ಟು ನೀರು ಸಿಗಬೇಕು ಹಾಗೂ ಅಣೆಕಟ್ಟು ಎಷ್ಟು ಎತ್ತರ ಮಾಡಬೇಕು ಎಂದು ಹಿಂದೆಯೇ ತೀರ್ಮಾನವಾಗಿದೆ. 524 ಅಡಿ ಎತ್ತರಕ್ಕೆ ಎಷ್ಟು ಭೂಮಿ ಬೇಕಾಬಹುದು ಎಂದು ಅಂದಾಜಿಸಿ ಭೂಸ್ವಾಧೀನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಕೆಲಸವನ್ನು ಬೇಗ ಮುಗಿಸುವ ಬದ್ಧತೆ ನಮ್ಮ ಸರ್ಕಾರಕ್ಕಿದೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಬಗ್ಗೆಯೂ ಮನವಿ ಮಾಡಿದ್ದೇವೆ” ಎಂದರು.
“ಭದ್ರಾ ಮೇಲ್ದಂಡೆ ವಿಚಾರವಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಕೇಂದ್ರದ ಕ್ಯಾಬಿನೆಟ್ ಮುಂದೆ ಈ ವಿಚಾರ ತೆಗೆದುಕೊಡು ಹೋಗಲಾಗಿದೆ ಎಂದು ಹೇಳಿದ್ದಾರೆ. ಮೇಕೆದಾಟು ವಿಚಾರದಲ್ಲಿ 15 ದಿನಗಳಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕದ ವಾದ ಆಲಿಸುವುದಾಗಿ ಹೇಳಿತ್ತು. ಆದರೆ ದಿನಾಂಕ ನಿಗದಿ ಮಾಡಿಲ್ಲ. ತಮಿಳುನಾಡಿನವರು ರಾಜಕೀಯವಾಗಿ ಸಹಕಾರ ನೀಡುವುದಿಲ್ಲ ಎನ್ನುವುದು ನಮಗೆ ಅರಿವಿದೆ. ಅವರು ಸಣ್ಣಪುಟ್ಟ ಅಣೆಕಟ್ಟುಗಳನ್ನು ಅವರ ವಲಯದಲ್ಲಿ ಕಟ್ಟಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನಾವು ತೊಂದರೆ ಕೊಡಲು ಹೋಗುವುದಿಲ್ಲ. ಈ ವಿಚಾರವನ್ನೂ ಸಚಿವರ ಗಮನಕ್ಕೆ ತರಲಾಗಿದೆ” ಎಂದು ಹೇಳಿದರು.
“ಕಳಸಾ ಬಂಡೂರಿ ಕಾಮಗಾರಿಗೆ ಪರಿಸರ ಇಲಾಖೆಯ ಅನುಮತಿ ಸಿಗದಿರುವ ಬಗ್ಗೆ ಗಮನಕ್ಕೆ ತರಲಾಗಿದೆ. ಈಗಾಗಲೇ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಈ ಹಿಂದೆ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ಅರಣ್ಯ ಸಚಿವರನ್ನೂ ಸಹ ಭೇಟಿ ಮಾಡಲಾಗಿತ್ತು. ಎತ್ತಿನಹೊಳೆ ಕಾಮಗಾರಿ ಕುಡಿಯುವ ನೀರಿನ ಯೋಜನೆಯಾದ ಕಾರಣ ಒಂದಷ್ಟು ಅನುದಾನ ನೀಡಬೇಕು ಎಂದು ಮನವಿ ಮಾಡಲಾಗಿದೆ. ಜೊತೆಗೆ ಅರಣ್ಯ ಭೂಮಿ ಬಳಕೆ, ಬದಲಿ ಭೂಮಿ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದರ ಡಿಪಿಆರ್ ಅನ್ನು ನೋಡುವುದಾಗಿ ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.
“ಕಾವೇರಿ, ಕೃಷ್ಣಾ,ಗೋದಾವರಿ ನದಿ ಜೋಡಣೆ ಸಂಬಂಧ ನಮ್ಮ ರಾಜ್ಯದ ವಾದವನ್ನು ನಾನು ಹಾಗೂ ಮುಖ್ಯಮಂತ್ರಿಯವರು ಸಲ್ಲಿಸಿದ್ದೇವೆ. ಇದರ ಬಗ್ಗೆ ಧನಾತ್ಮಕವಾಗಿ ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದಾರೆ. ನಮ್ಮ ಭೇಟಿ ಫಲದಾಯಕವಾಗಿದೆ ಎನ್ನುವುದು ಸಂತಸದ ವಿಚಾರ” ಎಂದರು.
ಕೃಷ್ಣಾ ನ್ಯಾಯಾಧೀಕರಣ ವಿಚಾರ ಸುಪ್ರೀಂ ಕೋರ್ಟಿನಲ್ಲಿ ತಡೆಯಾಜ್ಞೆ ಇರುವ ಬಗ್ಗೆ ಕೇಳಿದಾಗ, “ಶೆಡ್ಯೂಲ್ 524ಕ್ಕೆ ಸೇರಿದ ವಿಚಾರವಾದ ಕಾರಣ ಈ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರು ಆಂತರಿಕ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಇದರ ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ” ಎಂದು ಹೇಳಿದರು.
ನಿರುದ್ಯೋಗಿಗಳಿಗೆ ಪರಿಷತ್ ಸ್ಥಾನ ಕೊಟ್ಟಂತೆ ಆಗಬಾರದು
ವಿಧಾನಪರಿಷತ್ ನಾಮನಿರ್ದೇಶನದ ಬಗ್ಗೆ ಕೇಳಿದಾಗ, “ಪಕ್ಷದ ಕಾರ್ಯಕರ್ತರಿಗೆ ಹಾಗೂ ಪಕ್ಷದ ಪರವಾಗಿ ದನಿ ಎತ್ತುವವರಿಗೆ ನೀಡಬೇಕು ಎಂಬುದು ನನ್ನ ಅಭಿಲಾಷೆ. ಸುಮ್ಮನೆ ಇರುವ ನಿರುದ್ಯೋಗಿಗಳಿಗೆ ಕೊಟ್ಟಂತೆ ಆಗಬಾರದು. ಉತ್ತಮವಾಗಿ ಮಾತನಾಡುವಂತಹ ಪ್ರತಿನಿಧಿಗಳಿಗೆ ಸ್ಥಾನ ನೀಡಬೇಕು ಎಂಬುದು ನನ್ನ ಪ್ರಾಶಸ್ತ್ಯ. ಇದರ ಬಗ್ಗೆ ಮುಖ್ಯಮಂತ್ರಿಗಳು ನಾನು ಹೈಕಮಾಂಡ್ ಬಳಿ ಮಾತನಾಡಿದ್ದೇವೆ. ಹೈಕಮಾಂಡ್ ಇಬ್ಬರನ್ನು ಸಂಪರ್ಕಿಸುತ್ತದೆ” ಎಂದು ಹೇಳಿದರು.
ಮೇಕೆದಾಟು ಹಾಗೂ ಭದ್ರಾ ಮೇಲ್ದಂಡೆ ಬಗ್ಗೆ ಪ್ರತಿ ಬಾರಿ ದೆಹಲಿಗೆ ಬಂದಾಗಲೂ ಚರ್ಚೆ ಮಾಡುವ ಬಗ್ಗೆ ಕೇಳಿದಾಗ, “ಇದು ಮೋದಿ ಅವರ ನಾಯಕತ್ವದ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ. ನಿರ್ಮಲಾ ಸೀತಾರಾಮನ್ ಅವರು ಭದ್ರಾ ಯೋಜನೆಗೆ ರೂ.5,300 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದರು. ನಾವು ಗುತ್ತಿಗೆದಾರರಿಗೆ ಹಣ ನೀಡಬೇಕಿದೆ” ಎಂದರು.
ಮೇಕೆದಾಟು ಬಗ್ಗೆ ಕೆಲಸಗಳೇ ನಡೆಯುತ್ತಿಲ್ಲ ಎಂದು ಕೇಳಿದಾಗ, “ಈಗಾಗಲೇ ರಾಜ್ಯದಲ್ಲಿ ಕಚೇರಿಯನ್ನೂ ತೆರೆಯಲಾಗಿದೆ. ಸ್ಥಳ ಗುರುತಿಸುವಿಕೆ ಸೇರಿದಂತೆ ಅನೇಕ ಕೆಲಸಗಳು ನಡೆಯುತ್ತಿದೆ. ದೆಹಲಿಯಲ್ಲೂ ಈ ಬಗ್ಗೆ ಕೆಲಸ ಪ್ರಾರಂಭ ಮಾಡಲಾಗುವುದು” ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದಾಗ, “ಪಕ್ಷ ಹೇಗೆ ಹೇಳುತ್ತದೆಯೋ ಆ ರೀತಿ ಮುನ್ನಡೆಯುವುದು. ಐದು ವರ್ಷ ಸೇವೆ ಸಲ್ಲಿಸಿದ್ದೇನೆ. ಪಕ್ಷಕ್ಕೆ ಒಳ್ಳೆಯದಾಗುವುದು ಮುಖ್ಯ. ವ್ಯಕ್ತಿಗಿಂತ ಪಕ್ಷ ಮುಖ್ಯ” ಎಂದು ಮಾರ್ಮಿಕವಾಗಿ ನುಡಿದರು.
ನಿಯೋಗಕ್ಕೆ ಸಂಸದ ತುಕಾರಾಂ ನೇಮಕ
ಸಂಸತ್ ಕ್ಷೇತ್ರಗಳ ಮರುವಿಂಗಡಣೆ ವಿರುದ್ಧದ ಹೋರಾಟದ ಬೆಳವಣಿಗೆಯ ಬಗ್ಗೆ ಕೇಳಿದಾಗ, “ಕ್ಷೇತ್ರ ಮರುವಿಂಗಡಣೆ ಹೋರಾಟದ ನಿಯೋಗಕ್ಕೆ ಹೈಕಮಾಂಡ್ ಸೂಚನೆಯಂತೆ ನಮ್ಮ ಕರ್ನಾಟಕದಿಂದ ಸಂಸದರಾದ ತುಕಾರಾಂ ಅವರನ್ನು ನೇಮಿಸಲಾಗಿದೆ” ಎಂದರು.