Homeಕರ್ನಾಟಕ5 ಹುಲಿಗಳ ಸೆರೆಗೆ ಬೋನು, ಅರವಳಿಕೆ ಕಾರ್ಯಾಚರಣಗೆ ಈಶ್ವರ ಖಂಡ್ರೆ ಸೂಚನೆ

5 ಹುಲಿಗಳ ಸೆರೆಗೆ ಬೋನು, ಅರವಳಿಕೆ ಕಾರ್ಯಾಚರಣಗೆ ಈಶ್ವರ ಖಂಡ್ರೆ ಸೂಚನೆ

• ತಾಯಿ ಮತ್ತು ನಾಲ್ಕು ಮರಿ ಹುಲಿಗಳ ಸಂಚಾರದ ಬಗ್ಗೆ ಸತತ ನಿಗಾಕ್ಕೂ ಖಂಡ್ರೆ ಆದೇಶ
ಜನರ ಜೀವದ ಸುರಕ್ಷತೆ ಪರಮೋಚ್ಚ, ವನ್ಯಜೀವಿಗಳ ರಕ್ಷಣೆಯೂ ಅಷ್ಟೇ ಮುಖ್ಯ- ಖಂಡ್ರೆ

ಚಾಮರಾನಗರದ ನಂಜೆದೇವಪುರದಲ್ಲಿ ಕಾಣಿಸಿಕೊಂಡಿರುವ 5 ಹುಲಿಗಳನ್ನು ಸುರಕ್ಷಿತವಾಗಿ ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಮೊದಲಿಗೆ ಬೋನುಗಳನ್ನು ಅಳವಡಿಸಲು ಮತ್ತು ಅಗತ್ಯ ಬಿದ್ದರೆ ಅರವಳಿಕೆ ನೀಡಿ ಸೆರೆ ಹಿಡಿಯಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಅವರು, ಹುಲಿಗಳು ಖಾಸಗಿ ಜಮೀನಿನಲ್ಲಿ ಕಾಣಿಸಿಕೊಂಡಿರುವ ಕಾರಣ ಜನರು ಭಯಭೀತರಾಗಿದ್ದು, ಅಮೂಲ್ಯವಾದ ಜೀವಹಾನಿ ಆಗದ ರೀತಿಯಲ್ಲಿ ಮತ್ತು ವನ್ಯಜೀವಿಗಳಿಗೂ ತೊಂದರೆ ಆಗದ ರೀತಿಯಲ್ಲಿ ಕ್ರಮ ವಹಿಸುವಂತೆ ಅವರು ನಿರ್ದೇಶನ ನೀಡಿದರು.

ಹುಲಿಗಳ ಚಲನವಲನದ ಮೇಲೆ ಸತತ ನಿಗಾ ಇಡುವುದು ಅತ್ಯಗತ್ಯವಾಗಿದ್ದು, ಡ್ರೋನ್ ಕ್ಯಾಮರಾಗಳು, ಥರ್ಮಲ್ ಕ್ಯಾಮರಾಗಳನ್ನು ಬಳಸಿ ಹುಲಿಗಳು ಎಲ್ಲಿವೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದು ಗ್ರಾಮಗಳ ಬಂದರೆ ಗ್ರಾಮಸ್ಥರಿಗೆ ಕೂಡಲೇ ಮಾಹಿತಿ ನೀಡಬೇಕು ಮತ್ತು ಅಲ್ಲಿಗೆ ಅರಣ್ಯ ಇಲಾಖೆಯ ತಂಡಗಳನ್ನು ಕಳುಹಿಸಿ ಯಾವುದೇ ಅನಾಹುತ ಆಗದಂತೆ ಕ್ರಮ ವಹಿಸಬೇಕು ಎಂದರು.

5 ಹುಲಿಗಳ ಕಾರ್ಯಾಚರಣೆ ಸುಲಭದ ಕಾಯಕವಲ್ಲ ಎಂಬುದು ತಮಗೂ ಅರಿವಿದೆ. ಹುಲಿಗಳನ್ನು ಹಿಡಿಯುವಾಗ ಹುಲಿಗಳು ಕಾರ್ಯಾಚರಣೆ ತಂಡದ ಮೇಲೆ ದಾಳಿ ಮಾಡದಂತೆ ಮತ್ತು ಬಡಗಲಪುರದಲ್ಲಿ ಹುಲಿ ರಕ್ಷಣೆ ಕಾರ್ಯಾಚರಣೆ ವೇಳೆ ವ್ಯಕ್ತಿಯ ಮೇಲೆ ದಾಳಿ ಆದಂತಹ ಪ್ರಕರಣಗಳು ಮರುಕಳಿಸದಂತೆ ಹಿರಿಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದರು.

ಹೆಚ್ಚುವರಿ ಆನೆ, ಪಶುವೈದ್ಯರ ನಿಯೋಜನೆಗೂ ಸೂಚನೆ

5 ಹುಲಿಗಳ ರಕ್ಷಣೆ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ಸಲಕರಣೆ, ಹೆಚ್ಚುವರಿ ಪಶುವೈದ್ಯರು, ಶಾರ್ಪ್ ಶೂಟರ್ ಗಳನ್ನು ಸಹ ನಿಯೋಜನೆ ಮಾಡುವಂತೆ ಹಾಗೂ ಹೆಚ್ಚುವರಿಯಾಗಿ ಆನೆಗಳನ್ನು ತಕ್ಷಣವೇ ತರಿಸಿಕೊಳ್ಳುವಂತೆಯೂ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟವಾಗಿ ತಿಳಿಸಿದರು.

ಜನರ ಜೀವ ಪರಮೋಚ್ಚ

ಜನರ ಜೀವದ ಸುರಕ್ಷತೆ ಅತ್ಯಂತ ಪರಮೋಚ್ಚವಾದ್ದು, ಅದೇ ವೇಳೆ ವನ್ಯಜೀವಿಗಳ ರಕ್ಷಣೆಯೂ ಅಷ್ಟೇ ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ನಡೆಸಬೇಕು, ಸಿಬ್ಬಂದಿಯ ಸುರಕ್ಷತೆಗೆ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಜೊತೆಗೆ ಜನರು ಯಾರೂ ಕಾರ್ಯಾಚರಣೆ ಸ್ಥಳಕ್ಕೆ ಬಾರದಂತೆ ಸೆಕ್ಷನ್ 144 ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಸೂಚಿಸಿದರು.

ಇ-ಗಸ್ತು ಹೆಚ್ಚಿಸಬೇಕು. ಎಲ್ಲ ಅರಣ್ಯ ಗಸ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ಮೊಬೈಲ್ ನಲ್ಲಿ ಈ ಆಪ್ ಅಳವಡಿಸಿ, ಗಸ್ತಿನ ಮೇಲೆ ಕೇಂದ್ರ ಕಚೇರಿಯಿಂದ ನಿಗಾ ಇಡಬೇಕು. ಗಸ್ತಿನಲ್ಲಿ ಯಾವುದೇ ಲೋಪ ಆಗದಂತೆ ಪೂರ್ಣ ಪ್ರಮಾಣದಲ್ಲಿ ಎಚ್ಚರಿಕೆ ವಹಿಸಬೇಕು ಹಾಗೂ ಕಮಾಂಡ್ ಕೇಂದ್ರಗಳನ್ನು ವಿಳಂಬವಿಲ್ಲದೆ ಎಲ್ಲೆಡೆ ಕಾರ್ಯಾರಂಭ ಮಾಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಗ ನಾವು ಕೈಗೊಳ್ಳುತ್ತಿರುವುದೆಲ್ಲವೂ ತಾತ್ಕಾಲಿಕ ಕ್ರಮಗಳಾಗಿದ್ದು, ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಬಾರದಂತೆ ಶಾಶ್ವತ ಪರಿಹಾರ ಏನು ಎಂಬ ಬಗ್ಗೆ ಅಧಿಕಾರಿಗಳು ತಜ್ಞರೊಂದಿಗೆ ಚರ್ಚಿಸಿ ರೂಪುರೇಶೆ ತಯಾರಿಸಿ ವರದಿ ಸಲ್ಲಿಸಲು ಸೂಚಿಸಿದರು.

ತುರುವೇಕೆರೆಯಲ್ಲಿ ಮಹಿಳೆಯ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದ ಚಿರತೆ, ಮಹಿಳೆಯ ದೇಹದ ಮಾಂಸ ಭಕ್ಷಣೆ ಮಾಡಿರುವ ಕಾರಣ ಅದನ್ನು ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರಿಗೆ ಮಾಹಿತಿ ನೀಡಲಾಯಿತು.

ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಹಿರಿಯ ಅಧಿಕಾರಿಗಳಾದ ಮನೋರ್ ರಾಜನ್, ಬಿಸ್ವಜಿತ್ ಮಿಶ್ರಾ ಮತ್ತು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments