2014ರಲ್ಲಿ ಕೇವಲ ರೂ.55 ಲಕ್ಷ ಕೋಟಿಯಷ್ಟು ಇದ್ದ ಭಾರತದ ಸಾಲ ಈ ಹಣಕಾಸಿನ ವರ್ಷದಲ್ಲಿ ರೂ.183.67 ಲಕ್ಷ ಕೋಟಿಗೆ ತಲುಪಿದೆ. ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ಅವರು ಮಾಡಿರುವ ಸಾಲ ರೂ.123 ಲಕ್ಷ ಕೋಟಿ. ಅಂದರೆ ಪ್ರತಿಯೊಬ್ಬ ಭಾರತೀಯನ ತಲೆಮೇಲೆ 92 ಸಾವಿರ ರೂಪಾಯಿಗಳ ಸಾಲದ ಹೊರೆ ಇದೆ. “ಸಬ್ ಕಾ ಸಾಥ್ ಸಬ್ ಕೋ ಸಾಲ” ಎಂದು ಸಿಎಂ ಸಿದ್ದರಾಮಯ್ಯ ಆರ್ ಅಶೋಕ್‌ಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಆರ್ ಅಶೋಕ್ ಅವರೇ, ಯಾಕೆ ನಮ್ಮ ಕೈಯಲ್ಲಿ ಬಡಿಗೆ ಕೊಟ್ಟು ಬಡಿಸಿಕೊಳ್ಳುತ್ತೀರಿ? ರಾಜ್ಯ ಸರ್ಕಾರದ ಸಾಲದ ಲೆಕ್ಕ ಹೇಳಿದ್ದೀರಿ, ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ನಿಮ್ಮದೇ ಪಕ್ಷದ ಸರ್ಕಾರದ ಸಾಲದ ಕತೆಯನ್ನು ಸ್ವಲ್ಪ ಹೇಳಿ ಬಿಡಿ. ನೀವು ಮರೆತಿದ್ದರೆ ನಾನು ಹೇಳುತ್ತೇನೆ ಕೇಳಿ” ಎಂದಿದ್ದಾರೆ.
“ಅಶೋಕ್ ಅವರೇ, ನಿಮಗೆ ಈ ಆರ್ಥಿಕ ವ್ಯವಹಾರಗಳು ಅರ್ಥವಾಗುವುದಿದ್ದರೆ ಸ್ವಲ್ಪ ಕೇಳಿಸಿಕೊಳ್ಳಿ. ನಮ್ಮ ರಾಜ್ಯ ಸರ್ಕಾರದ ಸಾಲ ‘’ಹಣಕಾಸು ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ (ಎಫ್ ಆರ್ ಬಿ)ಯ ವ್ಯಾಪ್ತಿಯಲ್ಲಿಯೇ ಇದೆ. ನಮ್ಮ ಸಾಲ ಒಟ್ಟು ಸಾಲ ಒಂದು ಲಕ್ಷ ಕೋಟಿಯನ್ನು ಮೀರಿದ್ದರೂ ಅದು ನಮ್ಮ ಜಿಎಸ್‌ಡಿಪಿಯ ಶೇ.25ರ ಮಿತಿಯೊಳಗೆಯೇ ಇದೆ. ನಮ್ಮ ಹಣಕಾಸು ಕೊರತೆ ಕೂಡಾ ಜಿಎಸ್‌ಡಿಪಿಯ ಶೇಕಡಾ ಮೂರನ್ನು ಮೀರಿಲ್ಲ” ಎಂದು ಹೇಳಿದ್ದಾರೆ.
“ಕೇಂದ್ರದ ಬಿಜೆಪಿ ಆಡಳಿತದಲ್ಲಿ ಸರ್ಕಾರದ ಸಾಲ ಮಾತ್ರ ಹೆಚ್ಚಾಗುತ್ತಿಲ್ಲ, ಅವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ವೈಯಕ್ತಿಕ ಸಾಲ ಕೂಡಾ ಹೆಚ್ಚಾಗುತ್ತಿದ್ದರೆ, ನಿರುದ್ಯೋಗದಿಂದಾಗಿ ಕುಟುಂಬದ ಆದಾಯ ಕುಸಿಯತ್ತಿದೆ. ಹಾಗಿದ್ದರೆ ನರೇಂದ್ರ ಮೋದಿ ಸರ್ಕಾರದ ಸಾಲದ ಹಣ ಎಲ್ಲಿ ಸೋರಿಹೋಗುತ್ತಿದೆ” ಎಂದು ಸಿಎಂ ಪ್ರಶ್ನಿಸಿದ್ದಾರೆ.
“ಬೆಲೆ ಏರಿಕೆ, ನಿರುದ್ಯೋಗಗಳಿಂದಾಗಿ ತತ್ತರಿಸಿ ಹೋಗಿರುವ ರಾಜ್ಯದ ಜನತೆ ನಮ್ಮ ಗ್ಯಾರಂಟಿ ಮತ್ತು ಇತರ ಜನ ಕಲ್ಯಾಣ ಯೋಜನೆಗಳಿಂದಾಗಿ ಉಸಿರಾಡುವಂತಾಗಿದೆ. ಗ್ಯಾರಂಟಿ ಯೋಜನಗೆಳು ರಾಜ್ಯದ ಒಂದೂವರೆ ಕೋಟಿ ಕುಟುಂಬಗಳನ್ನು ನೇರವಾಗಿ ತಲುಪಿದೆ. 1.22 ಕೋಟಿ ಮಹಿಳೆಯರು ನಮ್ಮ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ನಮ್ಮ ಗ್ಯಾರಂಟಿ ಮತ್ತಿತರ ಕಲ್ಯಾಣ ಯೋಜನೆಗಳಿಂದಾಗಿ ಪ್ರತಿ ಕುಟುಂಬದ ಮಾಸಿಕ ಆದಾಯ ಏಳರಿಂದ ಹತ್ತು ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದೆ” ಎಂದಿದ್ದಾರೆ.
“ಅಶೋಕ್ ಅವರೇ, ಬೆಂಗಳೂರು ನಗರದಲ್ಲಿ ಕೂತು ಆಧಾರವಿಲ್ಲದ ರಾಜಕೀಯ ಹೇಳಿಕೆಗಳನ್ನು ನೀಡುತ್ತಾ ಕಾಲ ಹರಣ ಮಾಡಬೇಡಿ. ಹಳ್ಳಿಗಳಿಗೆ ಹೋಗಿ ನಿಮ್ಮ ಪಕ್ಷದ ಬೆಂಬಲಿಗರ ಜೊತೆಯಲ್ಲಿಯೇ ಮಾತನಾಡಿ. ನಮ್ಮ ಸರ್ಕಾರದ ಯೋಜನೆಗಳಿಂದ ಅವರು ಏನನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೆ ಕೇಳಿ ನೋಡಿ. ಇಡೀ ಕರ್ನಾಟಕ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡುತ್ತಿದೆ” ಎಂದು ತಿಳಿಸಿದ್ದಾರೆ.