ಇಸ್ರೇಲ್ ಮೇಲೆ ಗುರುವಾರ ಇರಾನ್ ಮತ್ತೊಂದು ಕ್ಷಿಪಣಿ ದಾಳಿ ನಡೆಸಿದ್ದು, ಇಸ್ರೇಲ್ ದೇಶದಲ್ಲಿ ವ್ಯಾಪಕ ಹಾನಿಯುಂಟಾಗಿದೆ. ದಕ್ಷಿಣ ಇಸ್ರೇಲ್‌ನ ಸರೋಕಾ ವೈದ್ಯಕೀಯ ಕೇಂದ್ರದ ಕಟ್ಟಡದ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಕಟ್ಟಡದ ಒಳಗಿದ್ದ ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲಿ ಸರ್ಕಾರದ ವಕ್ತಾರರು ದಾಳಿಯನ್ನು ಖಚಿತಪಡಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಬಗ್ಗೆ ಮಾತನಾಡಿದ್ದು, “ಈ ದಾಳಿಗೆ ಇರಾನ್ ಭಾರಿ ಬೆಲೆ ತೆರಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
ಇಸ್ರೇಲ್‌ನ ಮಿಲಿಟರಿ ನೆಲೆ ಗುರಿಯಾಗಿಸಿ ಇರಾನ್ ದಾಳಿ ನಡೆಸಿದ್ದು, ಈ ಗುರಿಗಳು ಮಿಲಿಟರಿ ಆಸ್ಪತ್ರೆಯ ಸಮೀಪದಲ್ಲೇ ಇರುವುದರಿಂದ ಸ್ಪೋಟದ ತೀವ್ರತೆಗೆ ಆಸ್ಪತ್ರೆಯ ಕಟ್ಟಡಕ್ಕೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಸರೋಕಾ ವೈದ್ಯಕೀಯ ಕೇಂದ್ರ ಇಸ್ರೇಲ್‌ನಲ್ಲಿನ ಅತಿದೊಡ್ಡ ಆಸ್ಪತ್ರೆಯಾಗಿದೆ.
ಇಸ್ರೇಲ್ ಮೇಲೆ ಇರಾನ್ ಪೂರ್ಣ ಪ್ರಮಾಣದ ಯುದ್ಧ ಘೋಷಿಸಿದಂತೆ ಕಾಣುತ್ತಿದ್ದು, ಆಪರೇಷನ್ ‘ಟ್ರು ಪ್ರಾಮಿಸ್ 3’ ಕಾರ್ಯಾಚರಣೆಯ 12ನೇ ಅಲೆಯ ಭಾಗವಾಗಿ ಅತಿ ಭಾರದ, ದೀರ್ಘ ಶ್ರೇಣಿಯ ಎರಡು ಹಂತದ ‘ಸಿಜ್ಜಿಲ್’ ಕ್ಷಿಪಣಿಗಳ ದಾಳಿಯನ್ನು ಪ್ರಾರಂಭಿಸಿರುವುದಾಗಿ ಇರಾನ್ ತಿಳಿಸಿದೆ.