ಐಪಿಎಲ್ 2025ರ ಮೊದಲ ಕ್ವಾಲಿಫೈಯರ್ ಪಂದ್ಯ ಗುರುವಾರ ಪಂಜಾಬ್‌ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಸಂಜೆ 7.30ಕ್ಕೆ ನಡೆಯಲಿದ್ದು, ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿವೆ.
ಈ ಟೂರ್ನಿಯಲ್ಲಿ ಉಭಯ ತಂಡಗಳೂ ತಲಾ 19 ಅಂಕಗಳನ್ನು ಗಳಿಸಿವೆ. ಆದರೆ ರನ್‌ರೇಟ್‌ನಲ್ಲಿ ತುಸು ಹೆಚ್ಚಿನ ಸಾಧನೆ ಮಾಡಿರುವ ಆತಿಥೇಯ ಪಂಜಾಬ್ ಮೊದಲ ಹಾಗೂ ನಂತರದ ಸ್ಥಾನದಲ್ಲಿ ಬೆಂಗಳೂರು ಇದೆ. ಎರಡೂ ತಂಡಗಳು ತಲಾ 14 ಪಂದ್ಯಗಳನ್ನು ಆಡಿವೆ. ತಲಾ 4 ಸೋತು, 9ರಲ್ಲಿ ಜಯಿಸಿವೆ. ಮಳೆಯಿಂದ ಒಂದೊಂದು ಪಂದ್ಯ ರದ್ದಾಗಿವೆ. ಪಂಜಾಬ್ ಮತ್ತು ಆರ್‌ಸಿಬಿ ತಂಡಗಳು ಲೀಗ್ ಹಂತದಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಅರ್ಹತೆ ಗಿಟ್ಟಿಸಿದರೆ, ಸೋಲುವ ತಂಡಕ್ಕೆ ಇನ್ನೂ ಒಂದು ಅವಕಾಶ ಸಿಗಲಿದೆ. ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತರ ವಿರುದ್ಧ ಆಡಿ ಫೈನಲ್ ಅರ್ಹತೆಗೆ ಇನ್ನೊಮ್ಮೆ ಪ್ರಯತ್ನಿಸುವ ಅವಕಾಶ ಇಂದು ಸೋಲುವ ತಂಡಕ್ಕೆ ಸಿಗಲಿದೆ.
ಪಂಜಾಬ್ ಮತ್ತು ಆರ್‌ಸಿಬಿ ತಂಡಗಳು ಪ್ಲೇಯಿಂಗ್-11ನಲ್ಲಿ ಸ್ಥಿರತೆ ಕಾಯ್ದುಕೊಂಡಿವೆ. ಪಂಜಾಬ್ ತಂಡವು ಪ್ರಿಯಾಂಶ್ ಆರ್ಯ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಅವರ ಆರಂಭಿಕ ಜೋಡಿಯನ್ನು ಉಳಿಸಿಕೊಂಡಿದೆ. ಅರ್ಶ್‌ದೀಪ್ ಸಿಂಗ್ ನೇತೃತ್ವದ ಬೌಲಿಂಗ್ ವಿಭಾಗ ಉತ್ತಮವಾಗಿದೆ. ಮಾರ್ಕೊ ಜಾನ್ಸೆನ್ ಅವರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಬೇಕಿರುವುದರಿಂದ ಅವರು ಈ ಪಂದ್ಯದಲ್ಲಿ ಆಡುವುದಿಲ್ಲ.
ತಂಡದ ಪ್ರಮುಖ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಗಾಯಗೊಂಡಿದ್ದು, ಅವರು ಆಡುವ ಬಗ್ಗೆ ಇನ್ನೂ ಖಚಿತವಿಲ್ಲ. ಆದರೆ, ಅವರು ಶೀಘ್ರದಲ್ಲೇ ತಂಡಕ್ಕೆ ಸೇರಿಕೊಳ್ಳುವ ನಿರೀಕ್ಷೆಯಿದೆ. ಮಾರ್ಕೊ ಇನ್ನು ಜಾನ್ಸೆನ್ ಬದಲಿಗೆ ಯಾರನ್ನು ಆಯ್ಕೆ ಮಾಡಬೇಕೆಂದು ಪಂಜಾಬ್ ಚಿಂತಿಸುತ್ತಿದೆ. ಅಜ್ಮತುಲ್ಲಾ ಓಮರ್ಜಾಯ್ ಅವರಿಗೆ ಅವಕಾಶ ಸಿಗಬಹುದು ಎನ್ನಲಾಗಿದೆ.
ಆರ್‌ಸಿಬಿ ಬ್ಯಾಟಿಂಗ್ ವಿಭಾಗದಲ್ಲಿ ಸಂಘಟಿತ ಶಕ್ತಿಯಿಂದ ಕೂಡಿದೆ. ವಿರಾಟ್ ಕೊಹ್ಲಿ (602 ರನ್), ಫಿಲ್ ಸಾಲ್ಸ್ (331), ರಜತ್ ಪಾಟೀದಾರ್ (271), ಜಿತೇಶ್ ಶರ್ಮಾ (237) ಮತ್ತು ಟಿಮ್ ಡೇವಿಡ್ (187) ಅಮೋಘ ಲಯದಲ್ಲಿದ್ದಾರೆ. ಪಂದ್ಯಗಳ ಗೆಲುವಿಗೆ ಕಾರಣರಾದ ಇಬ್ಬರು ಆಲ್‌ರೌಂಡರ್‌ಗಳು ಕೃಣಾಲ್ ಪಾಂಡ್ಯ (15 ವಿಕೆಟ್) ಮತ್ತು ರೊಮೆರಿಯೊ ಶೆಫರ್ಡ್. ಇವರೂ ಕೂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದಾರೆ.
ಆರ್‌ಸಿಬಿ ತಂಡದಲ್ಲಿ ಜೋಶ್ ಹ್ಯಾಜಲ್‌ವುಡ್ ಪ್ರಮುಖ ಬೌಲರ್. ಪುನರಾರಂಭದ ನಂತರ ಯಾವುದೇ ಲೀಗ್ ಪಂದ್ಯವನ್ನು ಆಡಿಲ್ಲ. ಆದರೆ, ಪಂಜಾಬ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ರಜತ್ ಪಾಟಿದಾರ್ ಕಳೆದ ಎರಡು ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದಾರೆ. ಈ ಪಂದ್ಯದಲ್ಲಿ ಪೂರ್ಣಪ್ರಮಾಣದಲ್ಲಿ ಆಡುವ ನಿರೀಕ್ಷೆಯಿದೆ. ಟಿಮ್ ಡೇವಿಡ್ ಗಾಯಗೊಂಡಿರುವುದು ಆರ್‌ಸಿಬಿ ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ. ಹೀಗಾಗಿ ಟಿಮ್ ಡೇವಿಡ್ ಬದಲಿಗೆ ಯಾರು ಆಡುತ್ತಾರೆ ಎಂಬುದು ಪಂದ್ಯದ ವೇಳೆಗೆ ತಿಳಿಯಲಿದೆ.
ಪಂಜಾಬ್ ಕಿಂಗ್ಸ್ (ಸಂಭಾವ್ಯ ತಂಡ): ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಓಮರ್ಜಾಯ್, ಕೈಲ್ ಜೇಮಿಸನ್, ಹರ್‌ಪ್ರೀತ್ ಬ್ರಾರ್, ಅರ್ಶ್‌ದೀಪ್ ಸಿಂಗ್. ಇಂಪ್ಯಾಕ್ಟ್ ಪ್ಲೇಯರ್: ಯುಜ್ವೇಂದ್ರ ಚಾಹಲ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಂಭಾವ್ಯ ತಂಡ): ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್, ಇಂಪ್ಯಾಕ್ಟ್ ಪ್ಲೇಯರ್: ಸುಯಶ್ ಶರ್ಮಾ.