ಕರ್ನಾಟಕದ ಜೊತೆ ವಾಣಿಜ್ಯ ಬಾಂಧವ್ಯ ಬೆಳೆಸಲು ನೆದರಲ್ಯಾಂಡ್ಸ್‌ನ ವಾಣಿಜ್ಯ ಹಾಗೂ ಕೈಗಾರಿಕಾ ಸಂಘಟನೆಗಳು ತೀವ್ರ ಆಸಕ್ತಿ ವ್ಯಕ್ತಪಡಿಸಿವೆ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಉದ್ಯಮಿಗಳನ್ನು ಆಹ್ವಾನಿಸಲು ಯುರೋಪ್ ಪ್ರವಾಸದಲ್ಲಿ ಇರುವ ಸಚಿವ ಪಾಟೀಲ ಅವರ ನೇತೃತ್ವದಲ್ಲಿನ ಉನ್ನತ ಮಟ್ಟದ ನಿಯೋಗವು ತಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ವಿದೇಶ ಆರ್ಥಿಕ ಸಂಬಂಧಗಳ ಮಹಾನಿರ್ದೇಶಕ ಮೈಕಲ್ ಸ್ವೀರ್ಸ್ ಅವರು ವಾಣಿಜ್ಯ ಸಂಬಂಧ ಬೆಳೆಸಲು ಇಂಗಿತ ವ್ಯಕ್ತಪಡಿಸಿದ್ದಾರೆ.
ʼರಾಜ್ಯ ಸರ್ಕಾರದ ಜೊತೆ ವಾಣಿಜ್ಯ ಸಂಬಂಧ ಬೆಳೆಸಲು ನೆದರ್‌ಲ್ಯಾಂಡ್ಸ್ ತೋರಿಸಿರುವ ಇಂಗಿತವು ಅಲ್ಲಿನ ಉದ್ಯಮಿಗಳು ರಾಜ್ಯದಲ್ಲಿ ಹೊಸ ಬಂಡವಾಳ ಹೂಡಿಕೆ ಮಾಡುವುದರ ಸ್ಪಷ್ಟ ಸಂಕೇತವಾಗಿದೆ. ಪಾಲ್-ವಿ, ಫಿಲಿಪ್ಸ್, ಹೈನೆಕೆನ್, ಇನ್ನಾಟೆರಾ ನ್ಯಾನೊಸಿಸ್ಟಮ್ಸ್ ಮತ್ತು ಪೋರ್ಟ್ ಆಫ್ ರೋಟರ್‌ಡ್ಯಾಮ್ ಮತ್ತಿತರ ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿಸಿವೆʼ ಎಂದು ಪಾಟೀಲ ಅವರು ಹೇಳಿದ್ದಾರೆ.
ಇನ್ವೆಸ್ಟ್ ಕರ್ನಾಟಕದ ಅಂಗವಾಗಿ ಜಾಗತಿಕ ಉದ್ಯಮಿಗಳನ್ನು ಸಂಪರ್ಕಿಸಲು, ಹೂಡಿಕೆದಾರರನ್ನು ಆಹ್ವಾನಿಸಲು ರಾಜ್ಯ ಸರ್ಕಾರವು ನೆದರ್‌ಲ್ಯಾಂಡ್ಸ್‌ನ ಹೇಗ್‌ನಲ್ಲಿ ಯಶಸ್ವಿಯಾಗಿ ರೋಡ್‌ಷೋ ನಡೆಸಿದೆ. ರೋಡ್‌ಷೋದಲ್ಲಿ ರಾಜ್ಯದ ನಿಯೋಗವು ನೆದರ್‌ಲ್ಯಾಂಡ್ಸ್‌ನ ಉದ್ದಿಮೆ ಪ್ರಮುಖರ ಜೊತೆ ಸಮಾಲೋಚನೆ ನಡೆಸಿ, ಮುಂದಿನ ವರ್ಷದ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲು ಆಹ್ವಾನ ನೀಡಿತು.
ನಾವೀನ್ಯತೆ, ಎಲೆಕ್ಟ್ರಾನಿಕ್ಸ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿ ಇರುವುದನ್ನು ರೋಡ್‌ಷೋದಲ್ಲಿ ವಿವರಿಸಲಾಗಿದೆ. ರಾಜ್ಯದಲ್ಲಿನ ಸದೃಢ ಮೂಲಸೌಲಭ್ಯಗಳು, ನಾವೀನ್ಯತೆ ಆಧಾರಿತ ಅರ್ಥವ್ಯವಸ್ಥೆ, ಹೂಡಿಕೆದಾರ ಸ್ನೇಹಿ ಕೈಗಾರಿಕಾ ನೀತಿಗಳು ನೆದರ್‌ಲ್ಯಾಂಡ್ಸ್‌ನ ವಾಣಿಜ್ಯ ಹಾಗೂ ಕೈಗಾರಿಕಾ ಸಂಘಟನೆಗಳ ಗಮನ ಸೆಳೆದಿವೆ.
ನೆದರ್‌ಲ್ಯಾಂಡ್ಸ್‌ನಲ್ಲಿನ ಭಾರತದ ರಾಯಭಾರಿ ಕುಮಾರ್ ತುಹಿನ್ ಅವರು ರೋಡ್‌ಷೋದಲ್ಲಿ ಮಾತನಾಡಿ, ಬಂಡವಾಳ ಹೂಡಿಕೆಯ ಪ್ರಮುಖ ತಾಣವಾಗಿ ಕರ್ನಾಟಕವು ವಿಶ್ವದ ಗಮನ ಸೆಳೆಯುತ್ತಿರುವುದನ್ನು ವಿವರಿಸಿದರು.
ಎಲೆಕ್ಟ್ರಾನಿಕ್ಸ್, ನವೀಕರಿಸಬಹುದಾದ ಇಂಧನ ಮತ್ತು ಸುಧಾರಿತ ತಯಾರಿಕೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ನೆದರ್‌ಲ್ಯಾಂಡ್ಸ್‌ನ ಕಂಪನಿಗಳಿಗೆ ಕರ್ನಾಟಕದಲ್ಲಿ ವಿಪುಲ ಅವಕಾಶಗಳು ಇರುವುದರ ಬಗ್ಗೆ ಮಾಹಿತಿ ನೀಡಲಾಯಿತು. ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ತ್ವರಿತಗೊಳಿಸಲು ವಿನ್ಯಾಸಗೊಳಿಸಲಾಗಿರುವ ಕ್ವಿನ್ ಸಿಟಿ ಯೋಜನೆ ಸೇರಿದಂತೆ ರಾಜ್ಯದ ದೂರದೃಷ್ಟಿಯ ಉಪಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಅವರು ಈ ಸಂದರ್ಭದಲ್ಲಿ ಇದ್ದರು.