ಕೃಷಿ ಇಲಾಖೆಯ ವತಿಯಿಂದ ಜ.23 ರಿಂದ 25ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ -2025ನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ-2025ರ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ಜ.23 ರಂದು ಬೆಳಿಗ್ಗೆ 11 ಗಂಟೆಗೆ ಅರಮನೆ ಮೈದಾನ ತ್ರಿಪುರನಿವಾಸಿನಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಳದ ಉದ್ಘಾಟನೆ ನೆರವೇರಿಸುವರು” ಎಂದರು.
“ಸರ್ಕಾರವು ಸುಮಾರು ಎರಡು ದಶಕಗಳಿಂದ ಸಾವಯವ ಕೃಷಿಯನ್ನು ಉತ್ತಮ ಪರ್ಯಾಯ ಪದ್ಧತಿಯಾಗಿ ಉತ್ತೇಜಿಸಲು ಪ್ರಾರಂಭಿಸಿದೆ. 2017ರಲ್ಲಿ ಆಯೋಜಿಸಿದ ಮೊದಲ ಆವೃತ್ತಿಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳದ ಮೂಲಕ ರಾಜ್ಯವು ಸಾವಯವ ಮತ್ತು ಸಿರಿಧಾನ್ಯಗಳ ಪ್ರಚಾರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ” ಎಂದರು.
“2025ರ ಈ ಮೇಳವು ರೈತರು, ರೈತ ಗುಂಪುಗಳು, ದೇಶಿಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳು ಸಾವಯವ ಮತ್ತು ಸಿರಿಧಾನ್ಯ ವಲಯದ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳನ್ನು ಒಗ್ಗೂಡಿಸುವುದರ ಜೊತೆಗೆ ಹೊಸ ಹೊಸ ಅವಕಾಶಗಳನ್ನು ಅನ್ವೇಷಿಸುವ ಮತ್ತು ಪರಿಣಾಮಕಾರಿಯಾಗಿ ಮಾರುಕಟ್ಟೆ ಸಂಪರ್ಕಗಳನ್ನು ಕಲ್ಪಿಸುವ ವೇದಿಕೆಯಾಗಿದೆ. ಸಾವಯವ ಮತ್ತು ಸಿರಿಧಾನ್ಯಗಳನ್ನು ಭವಿಷ್ಯದ ಪೀಳಿಗೆಯನ್ನು ಪೋಷಿಸುವ ಸಾಂಪ್ರದಾಯಿಕ ಪ್ರಜ್ಞಾವಂತ ಆಹಾರ ಎಂದು ಜನಪ್ರಿಯಗೊಳಿಸುವುದು ಮತ್ತು ಭವಿಷ್ಯಕ್ಕಾಗಿ ಪಾರಂಪರಿಕ ದೇಸಿ ತಳಿಗಳನ್ನು ಬೆಳೆಸಿ ಸಂರಕ್ಷಿಸುವುದು ಸರ್ಕಾರದ ಧ್ಯೇಯವಾಗಿದೆ. ಸಾವಯವ ಮತ್ತು ಸಿರಿಧಾನ್ಯಗಳ ಪ್ರೋತ್ಸಾಹಕ್ಕೆ ಬೆಂಗಳೂರಿನ ಹೆಬ್ಬಾಳದಲ್ಲಿ ” ಸಾವಯ ಮತ್ತು ಸಿರಿಧಾನ್ಯ ಹಬ್” ನ್ನು 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು,ಮುಖ್ಯ ಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸುವರು” ಎಂದು ಹೇಳಿದರು.
ರೈತ ಸಿರಿ
“ರಾಜ್ಯದಲ್ಲಿ ರೈತ ಸಿರಿ ಯೋಜನೆಯಲ್ಲಿ ಒಟ್ಟು ರೂ.106 ಕೋಟಿ ಸಹಾಯಧನ ನೀಡಲಾಗಿದೆ. ಮೂರು ದಿನದ ಅಂತರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ 300ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುವುದು ಹಾಗೂ 30 ಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಖ್ಯಾತ ಉಪನ್ಯಾಸಕರು ಮಾಹಿತಿ ನೀಡಲಿದ್ದಾರೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಜೆ.ರವಿಶಂಕರ್, ಕೃಷಿ ಆಯುಕ್ತ ವೈ.ಎಸ್.ಪಾಟೀಲ, ಕೃಷಿ ನಿರ್ದೇಶಕ ಡಾ.ಜಿ.ಟಿ.ಪುತ್ರ ಉಪಸ್ಥಿತರಿದ್ದರು.