ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ವಿಚಾರವಾಗಿ ರಾಜ್ಯ ಸರ್ಕಾರ ಮಂಗಳವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ 6+6+5 ರೀತಿಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ.
ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿನ ಮೀಸಲಾತಿ ವರ್ಗೀಕರಣದ ಕುರಿತು ಅಪಸ್ವರ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಬಗ್ಗೆ ಕುತೂಹಲ ಉಂಟಾಗಿತ್ತು. ಇದೀಗ ಸರ್ಕಾರ ಮೂರು ಹಂತದ ತೀರ್ಮಾನಕ್ಕೆ ಬಂದಿದೆ.
ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಒಳಮೀಸಲಾತಿ ವಿವಾದಕ್ಕೆ ಪರಿಹಾರ ಘೋಷಿಸಿದೆ. ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ 6% ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಈ ನಿರ್ಧಾರವನ್ನು ವಿಧಾನಸಭೆಯಲ್ಲಿ ಬುಧವಾರ ನಡೆಯುವ ಅರಸು ಜಯಂತಿ ದಿನ ಸರ್ಕಾರ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ. ಈ ತೀರ್ಮಾನ ಅಲೆಮಾರಿಗಳಿಗೆ ಕಂಟಕವಾಗುವ ಸಾಧ್ಯತೆ ಎನ್ನಲಾಗಿದೆ.
ನಿವೃತ್ತ ನ್ಯಾ.ನಾಗಮೋಹನ್ದಾಸ್ ಅವರ ಆಯೋಗವು ತನ್ನ ವರದಿಯಲ್ಲಿ 101 ಪರಿಶಿಷ್ಟ ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಣ ಮಾಡಿ ಶೇ.17 ರಷ್ಟು ಮೀಸಲಾತಿ ಹಂಚಿಕೆ ಮಾಡಿದೆ. ಆದರೆ ಸರ್ಕಾರ ಮೂರು ಗುಂಪುಗಳನ್ನಾಗಿ ಮಾಡಿದೆ. ಎಡಗೈ, ಬಲಗೈ ಹಾಗೂ ಸ್ಪೃಶ್ಯ ದಲಿತರೊಂದಿಗೆ ಅಲೆಮಾರಿಗಳ ಸೇರ್ಪಡೆಯಾಗಿದೆ ಎನ್ನಲಾಗುತ್ತಿದೆ.
ಗುಂಪುಗಳ ರಚನೆ ವೇಳೆ ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಜಾತಿಗಳನ್ನು ಪ್ರತ್ಯೇಕ ಗುಂಪಾಗಿ ಪರಿಗಣಿಸಿ ಶೇ.1 ರಷ್ಟು ಮೀಸಲಾತಿ ನೀಡಿರುವುದಕ್ಕೆ ಬಲಗೈ ಸಮುದಾಯಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ನಿವಾಸದಲ್ಲಿ ಸಭೆ ನಡೆಸಿ ಮೀಸಲಾತಿ ವರ್ಗೀಕರಣ ಕುರಿತು ಪುನರ್ ಪರಿಶೀಲನೆ ಮಾಡಿ ವರದಿ ನೀಡುವಂತೆ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಹಾಗೂ ಪರಿಷತ್ ಸದಸ್ಯ ಸುಧಾಮ್ದಾಸ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಅವರು ನೀಡಿದ ವರದಿ ಆಧಾರದ ಮೇಲೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಗಳು ಆಗಿವೆ ಎನ್ನುವ ಮಾಹಿತಿ ಇದೆ.
ಶೇ.17ರಷ್ಟು ಮೀಸಲಾತಿಯನ್ನು ಐದು ವರ್ಗಗಳಾಗಿ ವಿಂಗಡಿಸಿದ್ದು, ಮತ್ತು ಅತಿ ಸೂಕ್ಷ್ಮ ಜಾತಿಗಳನ್ನು ‘ಎ’ ವರ್ಗವಾಗಿ ವಿಂಗಡಿಸಿ ಶೇ.1, ಮಾದಿಗ ಮತ್ತು ಅದೇ ರೀತಿಯ ಅಸ್ಪೃಷ್ಯತೆ ಅನುಭವಿಸುತ್ತಿರುವ ಅತ್ಯಂತ ಹಿಂದುಳಿರುವ ಜಾತಿಗಳನ್ನು ‘ಬಿ’ ಎಂದು ವರ್ಗೀಕರಣ ಮಾಡಿ ಶೇ.6, ಹೊಲೆಯ ಮತ್ತು ಅದೇ ರೀತಿ ಅಸ್ಪೃಶ್ಯತೆ ಜೊತೆಗೆ ಹಿಂದುಳಿರುವ ಜಾತಿಗಳನ್ನು ‘ಸಿ’ ಎಂದು ಪರಿಗಣಿಸಿ ಶೇ.5, ಅಸ್ಪೃಶ್ಯರಲ್ಲದ ಭೋವಿ, ಲಂಬಾಣಿ, ಕೊರಚ, ಕೊರಮ ಈ ನಾಲ್ಕು ಜಾತಿಗಳನ್ನು ‘ಡಿ’ ಎಂದು ಪರಿಗಣಿಸಿ ಶೇ.4, ಮಾದಿಗ, ಛಲವಾದಿ ಎಂದು ಗುರುತಿಸಿಕೊಳ್ಳದ ಆದಿಕರ್ನಾಟಕ, ಆದಿ ಆಂಧ್ರ, ಆದಿದ್ರಾವಿಡ ಎಂದೇ ಗುರುತಿಸಿಕೊಂಡಿರುವ ಗುಂಪನ್ನು ‘ಇ’ ಎಂದು ಶೇ.1ರಷ್ಟು ಮೀಸಲಾತಿ ನೀಡಿ ವರ್ಗೀಕರಿಸಲಾಗಿತ್ತು.
