ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯ ಏಕಸದಸ್ಯ ವಿಚಾರಣಾ ಆಯೋಗ ತನ್ನ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ನಾಲ್ಕು ಶಿಫಾರಸು ಸೂಚಿಸಿದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿ ಸಂಪುಟದ ನಿರ್ಧಾರಗಳ ಬಗ್ಗೆ ವಿವರಿಸಿದರು.
“ಮಧ್ಯಂತರ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದೆ. ಹೊಸ ದತ್ತಾಂಶ ಸಂಗ್ರಹಿಸಲು ಸಚಿವ ಸಂಪುಟ ನಾಗಮೋಹನದಾಸ್ ಸಮಿತಿ ಅವರನ್ನೇ ಕೇಳಿಕೊಳ್ಳುವ ನಿರ್ಣಯ ಮಾಡಿದೆ. ಈ ಕಾರ್ಯ ಮುಗಿಸಲು 40 ದಿನ ಅವರು ಕೇಳಿದ್ದಾರೆ. ನಾವು 60 ದಿನಗಳ ಕಾಲಾವಕಾಶ ಕೊಟ್ಟು, ಅಂತಿಮ ವರದಿ ಸಲ್ಲಿಸಲು ಸಮಿತಿಯ ಅವಧಿಯನ್ನು ಎರಡು ತಿಂಗಳಿಗೆ ವಿಸ್ತರಿಸಲಾಗಿದೆ” ಎಂದು ತಿಳಿಸಿದರು.
ನಾಲ್ಕು ಶಿಫಾರಸು
1 ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ, ಹೊಸದಾದ ಸಮೀಕ್ಷೆ ಮಾಡಿ ದತ್ತಾಂಶ ಸಂಗ್ರಹಿಸುವುದು.
2 ಆಧುನಿಕ ವಿಜ್ಞಾನ ತಂತ್ರಜ್ಞಾನಗಳ ಸಾಧನ ಬಳಸಿ 30-40 ದಿವಸದೊಳಗೆ ಹೊಸದಾದ ಸಮೀಕ್ಷೆ ನಡೆಸುವುದು.
3 ಹೊಸದಾದ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿ ಸಿದ್ಧಪಡಿಸಬೇಕು, ಯಾವ ಸಂಸ್ಥೆಯಿಂದ ಸಮೀಕ್ಷೆ ನಡೆಸಬೇಕು? ಸಮೀಕ್ಷೆ ಮಾಡುವ ಸಿಬ್ಬಂದಿ ತರಬೇತಿ ಅಗತ್ಯವಿರುವ ಸಂಪನ್ಮೂಲಗಳ ಕ್ರೋಢೀಕರಣ ಇತ್ಯಾದಿಗಳ ಉಸ್ತುವಾರಿ ನೋಡಿಕೊಳ್ಳಲು ಉನ್ನತ ಮಟ್ಟದ ಸಮಿತಿ ರಚಿಸುವುದು.
4 ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಮಧ್ಯಂತರ ವರದಿಯಲ್ಲಿ ತಿಳಿಯಪಡಿಸಿರುವ ಮಾನದಂಡಗಳಂತೆ ಪರಿಶಿಷ್ಟ ಜಾತಿಯ ಉಪಜಾತಿಗಳ ವರ್ಗೀಕರಣ ಮಾಡಿ, ಲಭ್ಯವಿರುವ ಮೀಸಲಾತಿ ಪ್ರಮಾಣವನ್ನು ಆದ್ಯತೆ ಮೇರೆಗೆ ಹಂಚಿಕೆ ಮಾಡಬೇಕು.
ಸಮಿತಿಯ ಶಿಫಾರಸ್ಸುಗಳಲ್ಲಿ ಹೊಸ ವಿಷಯಗಳೇನಿದೆ ಹಾಗೂ ಎರಡು ತಿಂಗಳ ಕಾಲಾವಧಿಯಲ್ಲಿ ಸಮೀಕ್ಷೆ ಕೈಗೊಳ್ಳಲು ಸಾಧ್ಯವೇ ಎಂಬ ಪತ್ರಕರ್ತರ ಪ್ರಶ್ನೆ ಪ್ರತಿಕ್ರಿಯೆ ನೀಡಿದ ಸಚಿವರು, “ರಾಜ್ಯದಲ್ಲಿ ಆರು ಸಾವಿರ ಪಂಚಾಯತಿ ಹಾಗೂ 300 ಕ್ಕೂ ಹೆಚ್ಚು ವಾರ್ಡ್ಗಗಳಿವೆ. ಈ ಕಾರ್ಯವನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗಳ ಉಸ್ತುವಾರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ತೀವ್ರಗತಿಯಲ್ಲಿ ಕೈಗೊಳ್ಳಲು ಸಚಿವಸಂಪುಟ ಸೂಚನೆ ನೀಡಿದೆ. ಆಯೋಗವು ಸಮೀಕ್ಷೆ ಕೈಗೊಳ್ಳಲು ಬೇಕಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಕಾರ್ಯದರ್ಶಿಗಳ ಸಭೆ ನಡೆಸಲಾಗುವುದು. ಕಾಂಗ್ರೆಸ್ ಸರ್ಕಾರವು ಮೀಸಲಾತಿ ಸೌಲಭ್ಯ ನೀಡಲು ಬದ್ಧವಾಗಿದ್ದು, ಭವಿಷ್ಯದಲ್ಲಿ ಯಾವುದೇ ಗೊಂದಲಗಳಾಗದಂತೆ ದತ್ತಾಂಶಗಳು ಕರಾರುವಕ್ಕಾಗಿ ಪಡೆಯಲು ಹಾಗೂ ಹಾಗೂ ಜನರಿಗೆ ಮೀಸಲಾತಿಯ ಅನುಕೂಲ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿರುವುದಾಗಿ” ತಿಳಿಸಿದರು.
“ಈ ಹಿಂದೆ ನಡೆಸಲಾಗಿರುವ ಜನಗಣತಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ , ಆದಿ ಆಂಧ್ರ,ಎಸ್ ಸಿ ವರ್ಗಗಳ ಮಾಹಿತಿಗಳು ವರದಿಯಲ್ಲಿ ಇರುವುದಿಲ್ಲ. ಈ ದತ್ತಾಂಶಗಳಿಲ್ಲದೇ ಹೋದರೆ ಕಾನೂನಿನಡಿ ಮಾನ್ಯವಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಎರಡು ತಿಂಗಳ ಕಾಲಾವಧಿಯಲ್ಲಿ ಹೊಸ ಸಮೀಕ್ಷೆ ಮಾಡಲು ನಿರ್ಧರಿಸಲಾಗಿದೆ” ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪ ವಿವರಿಸಿದರು.