Homeಕರ್ನಾಟಕಕೇಸರಿ ಶಾಲು ಹಾಕುವ ಬದಲು ನೇರವಾಗಿ ಬಿಜೆಪಿ ಸೇರ್ಪಡೆಯಾಗಿ: ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ

ಕೇಸರಿ ಶಾಲು ಹಾಕುವ ಬದಲು ನೇರವಾಗಿ ಬಿಜೆಪಿ ಸೇರ್ಪಡೆಯಾಗಿ: ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯ ಜನರ ನೆಮ್ಮದಿ ಹಾಳು ಮಾಡಲು ಜೆಡಿಎಸ್ ನಾಯಕ ಹೆಚ್ ​ಡಿ ಕುಮಾರಸ್ವಾಮಿ ಮುಂದಾಗಿರುವುದು ನೋವು ತಂದಿದೆ. ನೀವು ಸಿಎಂ ಆಗುವುದಕ್ಕೆ ಮಂಡ್ಯ ಜನರ ಆಶೀರ್ವಾದವೇ ಕಾರಣ ಎಂಬುದನ್ನು ಮರೆಯಬೇಡಿ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ ತಾಲೂಕಿನ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಜಿಲ್ಲೆಯ ಜನರ ಜೀವನ ಹಾಳುಮಾಡಬೇಡಿ. ಜವಾಬ್ದಾರಿಯುತ ಪ್ರತಿಪಕ್ಷದ ನಾಯಕರಾಗಿ ನೀವು ನಮ್ಮನ್ನು (ಸರ್ಕಾರವನ್ನು) ಸರಿಯಾದ ದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳಬೇಕೇ ವಿನಃ ಶಾಂತಿ ಕದಡುವ ಕೆಲಸ ಮಾಡಬಾರದು” ಎಂದರು.

“ಚುನಾವಣೆ ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ಈ ರೀತಿ ಮಾಡುತ್ತಿದ್ದಾರೆ. ಇವರು ಸಿಂಗಾಪುರದಲ್ಲಿ ಕುಳಿತುಕೊಂಡು ಹೇಗೆಲ್ಲಾ ಮಾತನಾಡಿದ್ದರು ಎಂಬುದನ್ನು ಗಮನಿಸಿ. ಕುಮಾರಸ್ವಾಮಿಯವರು ಬಿಜೆಪಿಯನ್ನು ಟೀಕಿಸಿದಷ್ಟು ಬೇರೆ ಯಾರೂ ಟೀಕಿಸಿಲ್ಲ. ಜೆಡಿಎಸ್​ನವರು ಟೀಕೆ‌ಮಾಡಿದಷ್ಟು ಕಾಂಗ್ರೆಸ್ ಕೂಡ ಮಾಡಿಲ್ಲ. ಇದೀಗ ಅವರಿಬ್ಬರೂ (ಜೆಡಿಎಸ್, ಬಿಜೆಪಿ) ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ದೇವೇಗೌಡರೇ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು” ಎಂದರು.

“ಜಿಲ್ಲೆಯ ಜನರೇ ನಿಮಗೆ ಅಧಿಕಾರ ನೀಡಿದ್ದು. ಕಳೆದ ಬಾರಿಯ ಚುನಾವಣೆಯಲ್ಲಿ ನಮ್ಮನ್ನು ಆಶೀರ್ವದಿಸಿದ್ದಾರೆ. ಮುಂದೆ ನಾವು ಸರಿಯಾದ ದಾರಿಯಲ್ಲಿ ಸಾಗದಿದ್ದರೆ ನಮಗೂ ಜನ ಪಾಠ ಕಲಿಸಬಹುದು. ಇದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ. ಅದು ಬಿಟ್ಟು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಿಗೆ ಪ್ರಚೋದನೆ ನೀಡಬೇಡಿ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಮಂಡ್ಯ ಜಿಲ್ಲೆಯ ಜನರು ನಿಮ್ಮ ಗಿಮಿಕ್ ಅನ್ನು ನಂಬುವುದಿಲ್ಲ. ಅದೇ ರೀತಿ ನಿಮ್ಮನ್ನು ಕ್ಷಮಿಸುವುದೂ ಇಲ್ಲ. ಕೇಸರಿ ಶಾಲು ಹಾಕುವ ಬದಲು ನೇರವಾಗಿ ಬಿಜೆಪಿಗೆ ಸೇರ್ಪಡೆಯಾಗಿ. ರೈತರ ಹಸಿರು ಶಾಲು ಬಿಟ್ಟಾಯ್ತು. ಜೆಡಿಎಸ್​ನ ಜಾತ್ಯತೀತತೆಯನ್ನೂ ಬಿಟ್ಟಾಯ್ತು. ಇನ್ನು ಬಿಜೆಪಿಗೆ ಸೇರಿಕೊಳ್ಳಿ. ಎಲ್ಲವನ್ನೂ ಜನ ತೀರ್ಮಾನಿಸಲಿ” ಎಂದು ಕುಮಾರಸ್ವಾಮಿ ವಿರುದ್ಧ ಸಚಿವರು ಕಿಡಿ ಕಾರಿದರು.

“ಕೆರಗೋಡು ಗ್ರಾಮದ ಮಧ್ಯಭಾಗದಲ್ಲಿರುವ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜ ಮಾತ್ರ ಆರೋಹಣ, ಅವರೋಹಣ ಮಾಡುವುದಾಗಿ ಕರಾರು ಪತ್ರ ಬರೆಯಲಾಗಿದೆ. ಇದರಂತೆಯೇ ಅವರು ನಡೆದುಕೊಂಡಿದ್ದರು. ಆದರೆ, ನಂತರ ಅಲ್ಲಿ ಧರ್ಮದ ಧ್ವಜ ಆರೋಹಣ ಮಾಡಲು ಯಾರು ಪ್ರೇರೇಪಣೆ ಕೊಟ್ಟರೋ ತಿಳಿಯದು. ಚುನಾವಣೆ ಸಂದರ್ಭದಲ್ಲಿ ಅದರ ಲಾಭ ಪಡೆಯಲು ಮಾಡಿದ್ದಾರೋ ತಿಳಿಯದು” ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments