ಇತ್ತೀಚಿನ ದಿನಗಳಲ್ಲಿ ಹಲವಾರು ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ದೀಪಗಳನ್ನು ಅಳವಡಿಸುತ್ತಿರುವುದು ಹೆಚ್ಚಾಗಿದೆ. ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಗಿ, ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ದೀಪಗಳನ್ನು ಅಳವಡಿಸುತ್ತಿರುವ ಕ್ರಮದ ವಿರುದ್ಧ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.
ಮುಖ್ಯವಾಗಿ ದೊಡ್ಡ ಗಾತ್ರದ ವಾಹನಗಳಾದ ಲಾರಿ, ಬಸ್, ಕಾರು ಮುಂತಾದವುಗಳು ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ದೀಪಗಳನ್ನು ತಮ್ಮ ವಾಹನಗಳಲ್ಲಿ ಅಳವಡಿಸುತ್ತಿರುವುದರಿಂದ ಇತರ ವಾಹನ ಚಾಲಕರುಗಳಿಗೆ ವಾಹನ ಚಲಾಯಿಸಲು ತೊಂದರೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ.
ಹೀಗಾಗಿ ವಾಹನಗಳಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸುತ್ತಿರುವ ವಾಹನ ಸವಾರರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಆಲೋಕ್ ಕುಮಾರ್ ನೀಡಿದ್ದಾರೆ.
ವಾಹನ ಸವಾರರು ತಮ್ಮ ತಮ್ಮ ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡದಂತೆ ಅಳವಡಿಸಬೇಕಾಗಿರುವ ಹೆಡ್‌ಲೈಟ್‌ಗಳನ್ನೇ ಅಳವಡಿಸಬೇಕಾಗಿರುವುದು ಕಡ್ಡಾಯವಾಗಿದೆ. ಒಂದು ವೇಳೆ ಸಿಎಂವಿ ಕಾಯ್ದೆಯಲ್ಲಿನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ವಾಹನ ಸವಾರರ ವಿರುದ್ಧ ಐಎಂವಿ ಕಾಯ್ದೆಯ ಕಲಂ 177 ರಡಿ ಪ್ರಕರಣಗಳನ್ನು ದಾಖಲಿಸಿ ಎಂದು ಆಲೋಕ್ ಕುಮಾರ್ ಸೂಚಿಸಿದ್ದಾರೆ.