Homeಕರ್ನಾಟಕಅಮೆರಿಕ ಭೇಟಿಯಲ್ಲಿ ಜಾಗತಿಕ ಉದ್ಯಮ ಪ್ರಮುಖರ ಜೊತೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಚರ್ಚೆ

ಅಮೆರಿಕ ಭೇಟಿಯಲ್ಲಿ ಜಾಗತಿಕ ಉದ್ಯಮ ಪ್ರಮುಖರ ಜೊತೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಚರ್ಚೆ

ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ಅಮೆರಿಕೆಗೆ ಅಧಿಕೃತ ಭೇಟಿ ನೀಡಿರುವ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಬಂಡವಾಳ ಹೂಡಿಕೆ ಹಾಗೂ ಉದ್ಯಮ ವಿಸ್ತರಣೆ ಕುರಿತು ಅಪ್ಲೈಡ್‌ ಮಟೇರಿಯಲ್ಸ್‌, ಸ್ಟ್ಯಾನ್‌ಫೋರ್ಡ್‌ ಯುನಿವರ್ಸಿಟಿ, ಫಾರ್ಮ್‌ ಫ್ಯಾಕ್ಟರ್‌ ಮತ್ತು ತ್ಸೆಕೊಂಡ್‌ನ ಪ್ರಮುಖರ ಜತೆ ಮಾತುಕತೆ ನಡೆಸಿದ್ದಾರೆ.

ʼಅಮೆರಿಕದ ಈ ಪ್ರಮುಖ ಉದ್ಯಮಗಳು ಮತ್ತು ಉನ್ನತ ಶೈಕ್ಷಣಿಕ ಸಂಸ್ಥೆ ಜೊತೆಗಿನ ಸಮಾಲೋಚನೆಗಳ ಫಲವಾಗಿ ರಾಜ್ಯದಲ್ಲಿ ಸಂಶೋಧನಾ ಕೇಂದ್ರಗಳ ಸ್ಥಾಪನೆ, ಆರೋಗ್ಯ ಕ್ಷೇತ್ರದಲ್ಲಿ ಪಾಲುದಾರಿಕೆ ಹೆಚ್ಚಳ, ಬಂಡವಾಳ ಹೂಡಿಕೆ ಮತ್ತು ಉದ್ಯಮ ವಿಸ್ತರಣೆಯಾಗಲಿದೆ. ತ್ಸೆಕೊಂಡ್‌ ತಯಾರಿಕಾ ಘಟಕ ಆರಂಭಿಸಲಿದೆ. ರಾಜ್ಯದಲ್ಲಿ ಆವಿಷ್ಕಾರ ಆಧಾರಿತ ಕೈಗಾರಿಕಾ ಬೆಳವಣಿಗೆಗೆ ವೇಗ ದೊರೆಯಲಿದ್ದು, ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳೂ ಹೆಚ್ಚಲಿವೆʼ ಎಂದು ಸಚಿವ ಎಂ ಬಿ ಪಾಟೀಲ ಅವರು ತಿಳಿಸಿದ್ದಾರೆ.

ಅಪ್ಲೈಡ್‌ ಮಟೇರಿಯಲ್ಸ್‌ ಇಂಡಿಯಾದ ಕಂಟ್ರಿ ಪ್ರೆಸಿಡೆಂಟ್‌ ಡಾ. ಸತೀಶ್‌ ಕುಪ್ಪುರಾವ್‌ ಅವರ ಜೊತೆಗಿನ ಭೇಟಿಯಲ್ಲಿ ರಾಜ್ಯದಲ್ಲಿ ಹೊಸ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಸ್ಥಾಪನೆಯ ಸಾಧ್ಯತೆಗಳನ್ನು ಚರ್ಚಿಸಲಾಗಿದೆ. ಸೆಮಿಕಂಡಕ್ಟರ್‌, ನ್ಯಾನೊ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕ ನಾಯಕ ಸ್ಥಾನದಲ್ಲಿ ಇರುವ ಅಪ್ಲೈಡ್‌ ಮಟೇರಿಯಲ್ಸ್‌ನ ಆರ್‌ ಆ್ಯಂಡ್‌ ಡಿ ಕೇಂದ್ರ ಸ್ಥಾಪನೆಯಿಂದ ಈ ಕ್ಷೇತ್ರದಲ್ಲಿನ ರಾಜ್ಯದ ಸಾಮರ್ಥ್ಯವು ಗಮನಾರ್ಹವಾಗಿ ಹೆಚ್ಚಲಿದೆ.

ಸ್ಟ್ಯಾನ್‌ಫೋರ್ಡ್‌ ಯುನಿವರ್ಸಿಟಿಯು ಕರ್ನಾಟಕದ ನಾವೀನ್ಯತೆ ಮತ್ತು ಉದ್ಯಮಶೀಲತಾ ವ್ಯವಸ್ಥೆ ಬಲಪಡಿಸಲು ನೆರವಾಗುವ ಪಾಲುದಾರಿಕೆ ಹೊಂದಲು ಆಸಕ್ತಿ ವ್ಯಕ್ತಪಡಿಸಿದೆ. ಫಾರ್ಮ್‌ ಫ್ಯಾಕ್ಟರ್‌ ಸಿಇಒ ಮೈಕ್‌ ಸ್ಲೆಸರ್‌ ಅವರು, ರಾಜ್ಯದಲ್ಲಿ ಹೂಡಿಕೆ ಹಾಗೂ ವಿಸ್ತರಣೆ ಸಾಧ್ಯತೆಗಳನ್ನು ಪರಿಶೀಲಿಸುವ ಭರವಸೆ ನೀಡಿದ್ದಾರೆ.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ  (ಕೆಐಎಡಿಬಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.  ಮಹೇಶ್‌ ಅವರು ಈ ಸಂದರ್ಭದಲ್ಲಿ ನಿಯೋಗದಲ್ಲಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments