ವೈಯಕ್ತಿಕ ಜೀವನ ಎಂಬುದು ಮನುಷ್ಯನಿಗೆ ಸಹಜವಾಗಿ ಇರುವ ಮೊದಲ ಆದ್ಯತೆ. ಅದರಲ್ಲೂ ಕುಟುಂಬ ಎಂಬ ಸಮಾಜದ ಮೂಲ ಘಟಕವನ್ನು ನಿರ್ವಹಿಸುವಲ್ಲಿ ದೇಶದ ಮಹಿಳೆಯರ ಪಾತ್ರವೂ ದೊಡ್ಡದು ಎಂದು ಸಚಿವ ಡಾ.ಹೆಚ್ ಸಿ ಮಹದೇವಪ್ಪ ಹೇಳಿದರು.
ಬೆಂಗಳೂರಿನ ಸಚಿವಾಲಯ ಕ್ಲಬ್ ನಲ್ಲಿ ಜರುಗಿದ ಮಾತೆ ರಮಾಬಾಯಿ ಅವರ 128 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ದೇಶದ ಎಲ್ಲ ಜನರ ಬದುಕನ್ನು ಹಸನಾಗಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದ ದೇಶದ ಸಂವಿಧಾನ ಮತ್ತು ಇಲ್ಲಿನ ಶೋಷಿತರ ಬದುಕಿನ ಏಳಿಗೆಗಾಗಿ ಬಾಬಾ ಸಾಹೇಬರು ಮಾಡಿದ ಅಧ್ಯಯನ ಮತ್ತು ಪ್ರಯತ್ನಗಳ ಹಿಂದೆ ಇದ್ದವರೇ ಮಾತೆ ರಮಾ ಬಾಯಿ ಅವರು. ಅಪೌಷ್ಟಿಕತೆ, ರಕ್ತ ಹೀನತೆ ಮತ್ತು ಇನ್ನಿತರೆ ಸಮಸ್ಯೆಗಳ ಕಾರಣಕ್ಕೆ ತಮ್ಮ ಮಕ್ಕಳು ತೀರಿ ಹೋದಂತಹ ದುಃಖಕರ ಸಂದರ್ಭವನ್ನೂ ಸಹ ಗಂಡನೊಡನೆ ಹಂಚಿಕೊಳ್ಳದೇ ಎಲ್ಲರ ಬದುಕಿಗಾಗಿ ಪ್ರಯತ್ನಿಸಿ ಎಂಬ ಮಹಾನ್ ತ್ಯಾಗವನ್ನು ಮಾಡಿದವರು ರಮಾಬಾಯಿ ಅವರು” ಎಂದರು.
“ಸಗಣಿ ಬೆರಣಿ ತಟ್ಟಿ ಅದನ್ನೇ ಮಾರಿ ಬದುಕು ಸವೆಸಿದ ರಮಾಬಾಯಿ ಅವರು ಬಾಬಾ ಸಾಹೇಬರ ಸಮಷ್ಠಿಯ ಚಿಂತನೆಯನ್ನು ಸಾಕಾರ ಮಾಡಲೆಂದೇ ಬದುಕಿದಂತಹ ಮೇರು ವ್ಯಕ್ತಿತ್ವದವರು ಎಂದು ಸಚಿವ ಮಹದೇವಪ್ಪನವರು. ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿಗೆ ಅನುಗುಣವಾಗಿ ಮಾತೆ ರಮಾಬಾಯಿ ಅವರು ಬದುಕಿದರು” ಎಂದು ಹೇಳಿದರು.
“ತನ್ನ ಮಕ್ಕಳು ಸತ್ತಾಗ ಆ ದುಃಖವನ್ನು ಒಬ್ಬರೇ ಒಡಲಲ್ಲಿ ಇಟ್ಟುಕೊಂಡು, ಹೆಣದ ಬಟ್ಟೆಗೂ ಹಣವಿಲ್ಲದೇ ತನ್ನ ಸೀರೆಯನ್ನೇ ಹರಿದು, ಹೊದಿಸಿದ ಮಹಾತಾಯಿಯನ್ನು ಈ ದಿನ ಎಲ್ಲರೂ ನೆನೆಯಬೇಕು. ಇನ್ನು ಮಾತೆ ರಮಾಬಾಯಿ ಅವರ ಎದೆಯಾಳದಲ್ಲಿ ದೇಶದ ಪ್ರಜಾಪ್ರಭುತ್ವದ ಶಕ್ತಿ ಅಡಗಿದ್ದು, ಅದು ಈಗಲೂ ದೇಶವನ್ನು ಕಾಪಾಡುವ ಜೀವಂತ ಸೆಲೆ. ಇನ್ನುಮಾತೆ ರಮಾಬಾಯಿ ಅವರ ಕುರಿತಾಗಿ ಹೆಚ್ಚಿನ ಅಧ್ಯಯನಗಳು ಜರುಗಬೇಕು ಮತ್ತು ಅವರ ತ್ಯಾಗಕ್ಕೆ ಸಮನಾದ ಗೌರವವು ಸರ್ವ ವ್ಯಾಪಿಯಾಗಿ ದೊರೆಯಬೇಕು” ಎಂದು ಸಚಿವರು ಹೇಳಿದರು.
ಶ್ರೀಮತಿ ಇಂದಿರಾ ಕೃಷ್ಣಪ್ಪ, ಮಾವಳ್ಳಿ ಶಂಕರ್, ಅಲೆಮಾರಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.


