HomeSportಇಂಡಿಯಾ-ಆಸ್ಟ್ರೇಲಿಯಾ ಟೆಸ್ಟ್‌ | ಟಾಸ್ ಗೆದ್ದು ಭಾರತ ಬ್ಯಾಟಿಂಗ್‌, 32 ರನ್‌ಗೆ ಮೂರು ವಿಕೆಟ್

ಇಂಡಿಯಾ-ಆಸ್ಟ್ರೇಲಿಯಾ ಟೆಸ್ಟ್‌ | ಟಾಸ್ ಗೆದ್ದು ಭಾರತ ಬ್ಯಾಟಿಂಗ್‌, 32 ರನ್‌ಗೆ ಮೂರು ವಿಕೆಟ್

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿರುವ ಭಾರತ ಆರಂಭದಲ್ಲೇ ಎಡವಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದಿನಿಂದ ಆರಂಭವಾಗಿದ್ದು, ಭಾರತ ತಂಡವು 32 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ. ವಿರಾಟ್‌ ಕೊಹ್ಲಿ ವೈಫಲ್ಯ ಕಂಡಿದ್ದು, ಜೈಸ್ವಾಲ್, ಪಡಿಕ್ಕಲ್ ಶೂನ್ಯಕ್ಕೆ ಔಟ್ ಆಗಿದ್ದಾರೆ.

ಅನುಭವಿ ಬ್ಯಾಟ‌ರ್ ವಿರಾಟ್ ಕೊಹ್ಲಿ ಐದು ರನ್ ಗಳಿಸಿ ನಿರ್ಗಮಿಸಿದರು. ಆ ಮೂಲಕ ಕೊಹ್ಲಿ ಅವರ ಕಳಪೆ ಪ್ರದರ್ಶನ ಮುಂದುವರಿಯಿತು. ಭಾರತೀಯ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ರಕ್ಷಣಾತ್ಮಕ ಆಟವು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುತ್ತಿದೆ.

ಬ್ಯಾಟ್ ಮೂಲಕ ಮೊದಲ ರನ್ ಇನಿಂಗ್ಸ್‌ನ 24ನೇ ಎಸೆತದಲ್ಲಿ ದಾಖಲಾಯಿತು. ಈ ಹಿಂದೆ 2001ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ಬ್ಯಾಟ್ ಮೂಲಕ ಮೊದಲ ರನ್ ದಾಖಲಾಗಿತ್ತು.

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾದ ಉಸ್ತುವಾರಿ ನಾಯಕ ಜಸ್‌ಪ್ರೀತ್ ಬೂಮ್ರಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಈ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯರಾಗಿರುವ ಕಾರಣ, ವೇಗಿ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

ಭಾರತ ತಂಡದಲ್ಲಿ ಎರಡು ಹೊಸಮುಖಗಳಿದ್ದು, ಆಲ್​ರೌಂಡರ್​ಗಳಾದ ನಿತೀಶ್ ಕುಮಾರ್ ರೆಡ್ಡಿ ಹಾಗೂ ಹರ್ಷೀತ್ ರಾಣಾ ಪದಾರ್ಪಣೆ ಮಾಡಿದ್ದಾರೆ. ಈ ಪಂದ್ಯ ಇವರಿಬ್ಬರಿಗೂ ಚೊಚ್ಚಲ ಟೆಸ್ಟ್ ಪಂದ್ಯವಾಗಿದೆ. ಗಾಯದ ಹಿನ್ನೆಲೆಯಲ್ಲಿ ಶುಭಮನ್ ಗಿಲ್ ಅವಕಾಶ ವಂಚಿತರಾಗಿದ್ದಾರೆ. ಕನ್ನಡಿಗರಾದ ಕೆ.ಎಲ್. ರಾಹುಲ್ ಹಾಗೂ ದೇವದತ್ತ ಪಡಿಕ್ಕಲ್‌ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಪಿನ್‌ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್ ಕಾಣಿಸಿಕೊಂಡರೆ, ನಾಲ್ವರು ವೇಗದ ಬೌಲರ್‌ಗಳಿಗೆ ತಂಡದಲ್ಲಿ ಅವಕಾಶ ಸಿಕ್ಕಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರಬೇಕಾದರೆ ಟೀಂ ಇಂಡಿಯಾ ಈ ಸರಣಿಯನ್ನು 4-0 ಅಂತರದಿಂದ ಗೆಲ್ಲಬೇಕಿದೆ. ಇದರ ಜೊತೆಗೆ ಸತತ ಎರಡು ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿರುವ ಭಾರತಕ್ಕೆ ಹ್ಯಾಟ್ರಿಕ್ ಸರಣಿ ಗೆಲುವು ಸಾಧಿಸುವ ಅವಕಾಶವಿದೆ.

ಭಾರತ ಕೊನೆಯ ಬಾರಿಗೆ 2022-23ರಲ್ಲಿ ತವರಿನಲ್ಲಿ ಆಸ್ಟ್ರೇಲಿಯಾವನ್ನು 2-1 ಅಂತರದಲ್ಲಿ ಸೋಲಿಸುವ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments