ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಪರಿಷ್ಕರಣೆ ಒಂದು ಪ್ರಕ್ರಿಯೆಯಾಗಿದ್ದು, ಗ್ಯಾರಂಟಿಗಳಿಗೆ ತಳುಕು ಹಾಕುವುದರಲ್ಲಿ ಅರ್ಥವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, “ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕ ಸರ್ಕಾರಕ್ಕೆ ಸಂದಾಯವಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
“ಶುಲ್ಕ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿಲ್ಲ. ಅಷ್ಟಕ್ಕೂ ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನ ಸರ್ಕಾರ ತೆಗೆದುಕೊಳ್ಳುವುದಿಲ್ಲ. ಆಯಾ ಆಸ್ಪತ್ರೆಗಳ ಅಭಿವೃದ್ಧಿಗೆ ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ” ಎಂದು ಹೇಳಿದರು.
“ಮೂರು, ನಾಲ್ಕು ವರ್ಷಗಳಿಗೊಮ್ಮೆ ಶುಲ್ಕ ಪರಿಷ್ಕರಣೆಯಾಗುವುದು ಸಹಜ ಪ್ರಕ್ರಿಯೆಯಾಗಿದೆ. ಇದನ್ನೇ ಮುಂದಿಟ್ಟುಕೊಂಡು ಗ್ಯಾರಂಟಿಗಳಿಗೆ ತಳುಕು ಹಾಕಿ ನೋಡುವುದು ಸರಿಯಲ್ಲ. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕದ ಹಣವನ್ನು ಆಯಾ ಆಸ್ಪತ್ರೆಗಳ ARS ಸಮಿತಿಗಳು ಚರ್ಚೆ ನಡೆಸಿ ಆಸ್ಪತ್ರೆಯ ಅಭಿವೃದ್ಧಿಗೆ ಬಳಕೆ ಮಾಡುತ್ತವೆ. ಆಸ್ಪತ್ರೆಯ ARS fund ಹೆಸರಲ್ಲಿ ಅನುದಾನ ಲಭ್ಯವಿರುತ್ತದೆ. ಆಸ್ಪತ್ರೆಯ ಸ್ವಚ್ಛತೆ, ದುರಸ್ಥಿ ಕಾರ್ಯಗಳು ಸೇರಿದಂತೆ ಆಸ್ಪತ್ರೆಗಳ ಅಭಿವೃದ್ಧಿಗಳಿಗೆ ಬಳಕೆ ಮಾಡಲಾಗುತ್ತದೆ. ಸರ್ಕಾರ ಕೇವಲ ಅನುಮತಿ ನೀಡುತ್ತದೆ ಅಷ್ಟೇ” ಎಂದರು.
ಜನರಿಗೆ ಹೊರೆಯಾಗದಂತೆ ಶುಲ್ಕ ಪರಿಷ್ಕರಣೆಗೆ ಚಿಂತನೆ
“ಆರೋಗ್ಯ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಪರಿಷ್ಕರಣೆ ಇನ್ನೂ ಪ್ರಾಥಮಿಕ ಹಂತದ ಚರ್ಚೆಯಲ್ಲಿದೆ. ಇಲ್ಲಿಯ ವರೆಗೂ ಸಾಮೂಹಿಕವಾಗಿ ಯಾವುದೇ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಳ ಮಾಡಿಲ್ಲ. ಜನರಿಗೆ ಹೊರೆಯಾಗದಂತೆ ಸೇವಾ ಶುಲ್ಕ ಪರಿಷ್ಕರಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಶೇ 15 ರಿಂದ 20 ರಷ್ಟು ಶುಲ್ಕ ಹೆಚ್ಚಳದ ಬಗ್ಗೆ ಚರ್ಚೆಗಳಿವೆ. ಈ ಹಿಂದೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಮಾತ್ರ ಆರೋಗ್ಯ ಇಲಾಖೆಯ ಆಯುಕ್ತರ ಅನುಮತಿ ಪಡೆದು ಶುಲ್ಕ ಪರಿಷ್ಕರಣೆ ಮಾಡಲಾಗಿದೆ. ಉಳಿದ ಯಾವುದೇ ಆಸ್ಪತ್ರೆಗಳಲ್ಲಾಗಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಾಗಲಿ ಇಲ್ಲಿಯ ವರೆಗು ಸೇವಾ ಶುಲ್ಕದಲ್ಲಿ ಹೆಚ್ಚಳವಾಗಿಲ್ಲ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಜನರಿಗೆ ಹೊರೆಯಾಗದಂತೆ ಸೂಕ್ತ ರೀತಿಯಲ್ಲಿ ಶುಲ್ಕ ಪರಿಷ್ಕರಣೆ ಮಾಡಲಾಗುವುದು” ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.