ರಾಜ್ಯದ ಶಿವಮೊಗ್ಗೆಯ ದೇಶದ ಎರನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆಯಾಗಿರುವ ಸಿಗಂದೂರು ಸೇತುವೆ ಲೋಕಾರ್ಪಣೆ ವಿಚಾರ ರಾಜಕೀಯ ವಿವಾದ ಸೃಷ್ಟಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಶಿಷ್ಠಾಚಾರ ಉಲ್ಲಂಘಟನೆಯ ಫೈಟ್ ಜೋರಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾದ ದೇಶದ ಎರಡನೇ ಅತಿದೊಡ್ಡ ಕೇಬಲ್ ಸೇತುವೆಯಾದ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಯ ಲೋಕಾರ್ಪಣೆ ಸೋಮವಾರ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಯಿತು. ರಾಜ್ಯ ಮತ್ತು ಕೇಂದ್ರದ ಸಚಿವರ ನಡುವೆ ಆಹ್ವಾನದ ವಿಚಾರವಾಗಿ ತೀವ್ರ ಆರೋಪ-ಪ್ರತ್ಯಾರೋಪಗಳು ನಡೆದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಕಾರ್ಯಕ್ರಮದಿಂದ ದೂರ ಉಳಿದರು.
ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಉದ್ಘಾಟನೆಗೆ ಕೊನೆಯ ಕ್ಷಣದಲ್ಲಿ ಆಹ್ವಾನ ನೀಡಲಾಗಿದೆ ಎಂದು ಅವರು ದೂರಿದರು.
ಮುಖ್ಯಮಂತ್ರಿಗಳ ಈ ಹೇಳಿಕೆಯ ಬೆನ್ನಲ್ಲೇ, ಖುದ್ದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಬರೆದಿದ್ದ ಪತ್ರವನ್ನು ಬಿಡುಗಡೆಗೊಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕಾರ್ಯಕ್ರಮದ ಬಗ್ಗೆ ನನಗೆ ಮಾಹಿತಿ ನೀಡಿಲ್ಲ. ನಾನೇ ಗಡ್ಕರಿ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ನನ್ನ ಇಂಡಿ ಕ್ಷೇತ್ರದ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಸಿಗಂದೂರು ಸೇತುವೆ ಕಾರ್ಯಕ್ರಮದ ಬಗ್ಗೆ ಸಮರ್ಪಕ ಮಾಹಿತಿ ನೀಡದ ಕಾರಣ ನಾವು ಪ್ರತಿಭಟನಾರ್ಥವಾಗಿ ಭಾಗಿಯಾಗುವುದಿಲ್ಲ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಅಧಿಕೃತ ಆಹ್ವಾನ ಪತ್ರಿಕೆಯನ್ನು ಕಾರ್ಯಕ್ರಮಕ್ಕೆ ಕೇವಲ ಮೂರು ದಿನಗಳ ಮೊದಲು ಅಂದರೆ 2025ರ ಜುಲೈ 11ರಂದು ಸ್ವೀಕರಿಸಿದ್ದೇನೆ. ಅದೇ ದಿನ ನನ್ನ ಕಚೇರಿಯು, ವಿಜಯಪುರದ ಇಂಡಿಯಲ್ಲಿ ನೀರಾವರಿ ಮತ್ತು ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ಪೂರ್ವ ನಿಗದಿಯಾಗಿರುವ ಬಗ್ಗೆ ನಿಮಗೆ ತಿಳಿಸಿತ್ತು. ಕಾರ್ಯಕ್ರಮದ ದಿನಾಂಕವನ್ನು ಮರು ನಿಗದಿಪಡಿಸುವಂತೆ ಮನವಿ ಮಾಡಿತ್ತು ಎಂದಿದ್ದಾರೆ.
ಶಿಷ್ಠಾಚಾರ ಏನು ಹೇಳುತ್ತೆ?
ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಒಳಗೊಂಡಂತೆ ಸರ್ಕಾರದ ಆ ಇಲಾಖೆಯ ಅಧಿಕೃತ ಕಾರ್ಯಕ್ರಮಗಳಿಗೆ, ಸಂಬಂಧಪಟ್ಟ ಇಲಾಖೆಯ ಸಚಿವರ ಸಮಾಲೋಚನೆಯೊಂದಿಗೆ ನಿಗದಿಪಡಿಸಿ ಕಾರ್ಯಕ್ರಮವನ್ನು ಏರ್ಪಡಿಸಬೇಕು. ಸರ್ಕಾರಿ ಕಾರ್ಯಾಕ್ರಮವನ್ನು ನಡೆಸಲು ಕನಿಷ್ಟ ಪಕ್ಷ 7 ದಿವಸಗಳ ಸಮಯಾವಕಾಶವನ್ನು ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೋರಬೇಕು.
ಇಲಾಖೆಯ ಅಧಿಕಾರಿಗಳ ಬದಲಾಗಿ ಜನಪ್ರತಿನಿದಿಗಳು ಹಾಗೂ ಸಾರ್ವಜನಿಕರೇ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಸರ್ಕಾರಿ ಸಮಾರಂಭಗಳನ್ನು ಏರ್ಪಡಿಸಬಾರದು. ಯಾವುದೇ ಸರ್ಕಾರಿ ಸಭೆ ಅಥವಾ ಕಾರ್ಯಕ್ರಮವನ್ನು ಖಾಸಗಿ ನಿವಾಸದಲ್ಲಿ ಏರ್ಪಡಿಸುವಂತಿಲ್ಲ.
ಕಾರ್ಯಕ್ರಮದ ಅಧ್ಯಕ್ಷತೆ ಬಗ್ಗೆ ಏನಿದೆ ಶಿಷ್ಟಾಚಾರ?
ಸರ್ಕಾರದ ಯಾವುದೇ ಕಾರ್ಯಕ್ರಮವಾಗಿದ್ದರೂ ಸಾಮಾನ್ಯವಾಗಿ ಕಾರ್ಯಕ್ರಮ ನಡೆಯುವ ಸ್ಥಳದ ವ್ಯಾಪ್ತಿಗೊಳಪಡುವ ವಿಧಾನ ಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ನಡೆಸಬೇಕು. ಆದರೆ ಕೆಲವೊಂದು ಸಂದರ್ಭದಲ್ಲಿ ಒಂದು ವಿಧಾನಸಭಾ ಕ್ಷೇತ್ರದ ಸ್ಥಳೀಯ, ಕಾರ್ಯಕ್ರಮವನ್ನು ಆಯಾ ವಿಧಾನಸಭಾ ಕ್ಷೇತ್ರದ ಹೋಬಳಿ/ಪ್ರದೇಶವಿರುವ ತಾಲ್ಲೂಕಿನ ಕೇಂದ್ರ ಸ್ಥಾನದಲ್ಲಿ ಆಯೋಜಿಸಿದಾಗ, ಆ ತಾಲ್ಲೂಕು ಕೇಂದ್ರ ಸ್ಥಾನವು ಇನ್ನೊಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೂ ಸಹ ಅಂತಹ ಕಾರ್ಯಕ್ರಮಗಳಲ್ಲಿ, ಕಾರ್ಯಕ್ರಮವು ಯಾವ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಿರುತ್ತದೆಯೋ ಆ ಸಂಬಂಧಪಟ್ಟ ಶಾಸಕರು ಅಧ್ಯಕ್ಷತೆಯನ್ನು ವಹಿಸಬೇಕು.
ಕಾರಣಾಂತರಗಳಿಂದ ವಿಧಾನಸಭಾ ಸದಸ್ಯರ ಸ್ಥಾನವು ತೆರವಾದ ಸಂದರ್ಭದಲ್ಲಿ ಸರ್ಕಾರಿ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು, ಮುಖ್ಯ ಮಂತ್ರಿಯವರು ಉದ್ಘಾಟಿಸಿದಾಗ ಜಿಲ್ಲಾ ಸಚಿವರು ಅಧ್ಯಕ್ಷತೆಯನ್ನು ವಹಿಸುವುದು. ಬಂಧಪಟ್ಟ *ಜಿಲ್ಲಾ ಸಚಿವರು ಉದ್ಘಾಟಿಸಿದಾಗ ಇಲಾಖಾ ಸಚಿವರು ಅಧ್ಯಕ್ಷತೆಯನ್ನು ವಹಿಸಬೇಕು. ಜಿಲ್ಲಾ ಸಚಿವರು ಸರ್ಕಾರಿ, ಕಾರ್ಯಕ್ರಮಗಳನ್ನು ಉದ್ಘಾಟಿಸಿದಾಗ, ಇಲಾಖಾ ಸಚಿವರು ಹಾಜರಾಗದೇ ಇರುವ ಸಂದರ್ಭಗಳಲ್ಲಿ, ಜಿಲ್ಲಾ ಸಚಿವರೇ ಅಧ್ಯಕ್ಷತೆಯನ್ನು ಸಹ ವಹಿಸಬೇಕು.
ಕಾರ್ಯಕ್ರಮಕ್ಕೆ ಯಾರೆನ್ನೆಲ್ಲಾ ಆಹ್ವಾನಿಸಬೇಕು?
ತಾಲ್ಲೂಕು ಮಟ್ಟದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು, ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಇಲಾಖಾ ಸಚಿವರು. ಸಂಬಂಧಪಟ್ಟ ಕ್ಷೇತ್ರದ ವಿಧಾನ ಸಭಾ ಕ್ಷೇತ್ರದ ಶಾಸಕರು (ಅಧ್ಯಕ್ಷತೆ) ತಾಲ್ಲೂಕನ್ನು ಪ್ರತಿನಿಧಿಸುವ ಸಂಸದರು (ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿರುವ ರಾಜ್ಯಸಭಾ ಸದಸ್ಯರು ಸೇರಿದಂತೆ) ಆಹ್ವಾನಿಸಬೇಕು.
ತಾಲ್ಲೂಕನ್ನು ಪ್ರತಿನಿಧಿಸುವ ಪದವೀದರ ಕ್ಷೇತ್ರ, ಶಿಕ್ಷಕರ ಕ್ಷೇತ್ರ ಮತ್ತು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ತಿನ ಎಲ್ಲಾ ಶಾಸಕರುಗಳು ಮತ್ತು ನೋಡಲ್ ತಾಲ್ಲೂಕಾಗಿ ಆಯ್ಕೆ ಮಾಡಿಕೊಂಡಿರುವ ನಾಮ ನಿರ್ದೇಶಿತ ಹಾಗೂ ವಿಧಾನಸಭೆಯಿಂದ ಆಯ್ಕೆಯಾದ ವಿಧಾನ ಪರಿಷತ್ತಿನ ಶಾಸಕರುಗಳಿಗೆ ಆಹ್ವಾನ ನೀಡಬೇಕು.
ಅಲ್ಲದೆ, ನಿಗಮ ಮತ್ತು ಮಂಡಳಿಗಳ ಕಾರ್ಯಕ್ರಮಗಳಿಗೆ ಆಯಾ ನಿಗಮ ಮತ್ತು ಮಂಡಳಿಯ ಅಧ್ಯಕ್ಷರುಗಳನ್ನು ಆಹ್ವಾನಿಸುವುದು. ಜೊತೆಗೆ ಇತರೇ ಕಾರ್ಯಕ್ರಮಗಳಿಗೆ ಆಯಾ ತಾಲ್ಲೂಕುಗಳಿಂದ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರುಗಳಾಗಿರುವವರನ್ನು ಸಹ ಆಹ್ವಾನಿಸುವುದು.
ಜಿಲ್ಲಾ ಪಂಚಾಯತ್ ಅಧ್ಯಕ್ಷರು, ತಾಲ್ಲೂಕು ಪಂಚಾಯತ್ ಅಧ್ಯಕ್ಷರು, ಕಾರ್ಯಕ್ರಮ ನಡೆಯುವ ಸ್ಥಳದ ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು/ ಮಹಾಪೌರರು ಅಥವಾ ಗ್ರಾಮ ಪಂಚಾಯಿತಿಯ ಅಧ್ಯಕ್ಷರಿಗೆ ಆಹ್ವಾನ ನೀಡಬೇಕು.
ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಯಾರಿಗೆಲ್ಲಾ ಆಹ್ವಾನ?
ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಕಾರ್ಯಕ್ರಮ ನಡೆಯುವ ಸ್ಥಳದ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯಕ್ರಮ ನಡೆಯುವ ಸ್ಥಳದ ಜಿಲ್ಲೆಯ ಇತರೆ ಸಚಿವರು ಹಾಗೂ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಇಲಾಖಾ ಸಚಿವರಿಗೆ ಆಹ್ವಾನ ಇರಬೇಕು.
ಅಷ್ಟೇ ಅಲ್ಲದೆ, ವಿರೋಧ ಪಕ್ಷದ ನಾಯಕರು, ಕಾರ್ಯಕ್ರಮ ನಡೆಯುವ ಜಿಲ್ಲೆಯ ಸಂಸದರು (ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಂಡಿರುವ ರಾಜ್ಯ ಸಭಾ ಸದಸ್ಯರು ಸೇರಿದಂತೆ). ಕಾರ್ಯಕ್ರಮ ಜರುಗುವ ಜಿಲ್ಲೆಯಲ್ಲಿನ ಎಲ್ಲಾ ಶಾಸಕರು, ಕಾರ್ಯಕ್ರಮ ನಡೆಯುವ ಸ್ಥಳದ ವ್ಯಾಪ್ತಿಯ ಶಾಸಕರ ಅಧ್ಯಕ್ಷತೆ ವಹಿಸಬೇಕು.
ಕಾರ್ಯಕ್ರಮದ ನಡೆಯುವ ಜಿಲ್ಲೆಯ ಪ್ರತಿನಿಧಿಸುವ ಪದವೀದರ ಕ್ಷೇತ್ರ, ಶಿಕ್ಷಕರ ಕ್ಷೇತ್ರ ಮತ್ತು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಚುನಾಯಿತರಾಗಿರುವ, ವಿಧಾನ ಪರಿಷತ್ತಿನ ಎಲ್ಲಾ ಶಾಸಕರುಗಳು ಮತ್ತು ನೋಡಲ್ ಜಿಲ್ಲೆಯಾಗಿ ಆಯ್ಕೆ ಮಾಡಿಕೊಂಡಿರುವ ನಾಮ ನಿರ್ದೇಶಿತ ಹಾಗೂ ವಿಧಾನಸಭೆಯಿಂದ ಆಯ್ಕೆಯಾದ ವಿಧಾನ ಪರಿಷತ್ತಿನ ಶಾಸಕರುಗಳು, ನಿಗಮ ಮತ್ತು ಮಂಡಳಿಗಳ ಕಾರ್ಯಕ್ರಮಗಳಿಗೆ ಆಯಾ ನಿಗಮ ಮತ್ತು ಮಂಡಳಿಯ ಅಧ್ಯಕ್ಷರುಗಳನ್ನು ಆಹ್ವಾನಿಸುವುದು. ಜೊತೆಗೆ ಜಿಲ್ಲೆಗಳಿಂದ ನಿಗಮ ಮತ್ತು ಮಂಡಳಿಗಳಿಗೆ ಆಹ್ವಾನಿಸಬೇಕು.
ಆದರೆ ಇದಾವುದನ್ನೂ ಮಾಡದೇ ಬಿಜೆಪಿ ಕ್ರೆಡಿಟ್ ರಾಜಕಾರಣದ ಹಪಹಪಿಗೆ ಬಿದ್ದು; ರಾಜ್ಯದ ಮುಖ್ಯಮಂತ್ರಿಯನ್ನೇ ಕಡೆಗಣಿಸಿ ಸ್ವಾರ್ಥ ರಾಜಕಾರಣ ಮಾಡುವ ಮೂಲಕ ಶಿಷ್ಠಾಚಾರ ಉಲ್ಲಂಘಿಸಿರುವುದು ಸತ್ಯ. ಒಂದು ಐತಿಹಾಸಿಕ ಕಾರ್ಯಕ್ರಮ ಸಂಭ್ರಮದ ಕ್ಷಣವಾಗುವ ಬದಲು ರಾಜಕೀಯದಾಟದ ದಾಳವಾಗಿದ್ದು ಮಾತ್ರ ವಿಪರ್ಯಾಸ.