ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಗೆ ನೂತನವಾಗಿ ಆಯ್ಕೆಗೊಂಡ ಐವರು ಕಾರ್ಯಾಧ್ಯಕ್ಷರು ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ , ಡಿಸಿಎಂರಿಂದ ಕಾಂಗ್ರೆಸ್ ಬಾವುಟ ಪಡೆಯುವ ಮೂಲಕ ತನ್ವೀರ್ ಸೇಠ್, ವಿನಯ್ ಕುಲಕರ್ಣಿ, ಜಿ ಸಿ ಚಂದ್ರಶೇಖರ್, ಮಂಜುನಾಥ್ ಭಂಡಾರಿ, ವಸಂತ್ ಕುಮಾರ್ ಅಧಿಕಾರ ಸ್ವೀಕರಿಸಿದರು.
ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್, “ನಿಮಗೆ ಸುತ್ತಾಡಲು ಕಾರು ಕೊಡುವುದಿಲ್ಲ. ಕಚೇರಿಯಲ್ಲಿ ರೂಮ್ ಕೊಡಲ್ಲ. ಆದರೆ, ಕೆಲಸ ಮಾಡಬೇಕು” ಎಂದು ತಾಕೀತು ಮಾಡಿದರು.
“ನಿಮ್ಮದೆ ಕಾರು ಬಳಸಿಕೊಂಡು ರಾಜ್ಯಾಧ್ಯಂತ ಸುತ್ತಾಡಬೇಕು. ಹಿಂದಿನ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಆರ್ ಧ್ರುವನಾರಾಯಣ್ ಅವರನ್ನು ನೆನಸಿಕೊಳ್ಳಬೇಕು. ಅವರದ್ದೇ ಆದ ರೀತಿಯಲ್ಲಿ ಪಕ್ಷಕ್ಕೆ ಕೊಡುಗೆ ಕೊಟ್ಟಿದ್ದಾರೆ” ಎಂದು ನೆನಪಿಸಿದರು.
ಎಂ ಬಿ ಪಾಟೀಲ್ ಅವರು ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ನಾನು ಸಹ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೇನೆ. ಎನ್‌ಎಸ್‌ಯುಐ ಯಿಂದ ಬಂದವರು ನಾವು. ನನಗೆ ಎನ್‌ಎಸ್‌ಯುಐನಲ್ಲಿ ಟಿಕೆಟ್ ಕೊಟ್ಟಿರಲಿಲ್ಲ. ಯಾರು ಅಂತ ಈಗ ಹೇಳುವುದು ಬೇಡ. ನಾವು ಹಾಗೂ ಹೀಗೂ ಮಾಡಿ ಬೆಳೆದಿದ್ದೇವೆ” ಎಂದರು.
ವಿಸಿಟಿಂಗ್ ಕಾರ್ಡ್ ಇಟ್ಟುಕೊಂಡು ಓಡಾಡಿದರೆ ಆಗಲ್ಲ. ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು ಕೆಲಸ ಮಾಡಬೇಕು. ಕೆಲಸ ಮಾಡಿಲ್ಲ ಎಂದರೆ ಚುನಾವಣೆ ನಂತರ ನೀವು ಮಾಜಿಗಳು ಆಗುತ್ತೀರಿ. ನಾನು ಎಷ್ಟು ದಿನ ಇರುತ್ತೇನೊ ಬಿಡುತ್ತೇನೋ ಗೊತ್ತಿಲ್ಲ. ನೀವು ಕೆಲಸ ಮಾಡಬೇಕು” ಎಂದು ಸೂಚಿಸಿದರು.