Homeಕರ್ನಾಟಕಸೆಂಟ್ರಲ್ ಕಮಾಂಡ್ ಸೆಂಟರ್ ಉದ್ಘಾಟನೆ, ಕೈದಿಗಳ‌ ಮನಪರಿವರ್ತಿಸುವ ಕೆಲಸ: ಪರಮೇಶ್ವರ್

ಸೆಂಟ್ರಲ್ ಕಮಾಂಡ್ ಸೆಂಟರ್ ಉದ್ಘಾಟನೆ, ಕೈದಿಗಳ‌ ಮನಪರಿವರ್ತಿಸುವ ಕೆಲಸ: ಪರಮೇಶ್ವರ್

ಸರ್ಕಾರ ಬಹಳ ವಿಶ್ವಾಸದಿಂದ ಕೈದಿಗಳನ್ನು ನಿಮ್ಮ ಕೈಗೆ ಕೊಟ್ಟಿದ್ದು, ಅವರ ಮನಪರಿವರ್ತನೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಸ್ಥಾಪಿಸಲಾದ ಕಾರಾಗೃಹ ‘ಸೆಂಟ್ರಲ್ ಕಮಾಂಡ್ ಸೆಂಟರ್’ನ್ನು ಉದ್ಘಾಟಿಸಿದ ಬಳಿಕ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಿಮ್ಮ ಕರ್ತವ್ಯದಲ್ಲಿ ಲೋಪವಾದರೆ, ಇಡೀ ವ್ಯವಸ್ಥೆಯೇ ಹಾಳಾಗುತ್ತದೆ. ಕರ್ತವ್ಯ ಲೋಪವಾಗದಂತೆ ಜವಾಬ್ಧಾರಿಯುತವಾಗಿ ಕೆಲಸ ಮಾಡಬೇಕು. ಸಿಬ್ಬಂದಿಗಳ ಕರ್ತವ್ಯದ ಮೇಲೆ ಹಿರಿಯ ಅಧಿಕಾರಿಗಳು ನಿಗಾವಹಿಸಬೇಕು. ನಿಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಕೆಲಸ ಮಾಡಿ. ಕರ್ತವ್ಯದಲ್ಲಿ ತಪ್ಪು ಎಸಗಿ ನಾಲ್ಕು ಜನರಿಂದ ತಪ್ಪಿಸಿಕೊಳ್ಳಬಹುದು. ನಮ್ಮ ಆತ್ಮಸಾಕ್ಷಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ನಿಮ್ಮ ಕಣ್ಣುತಪ್ಪಿ, ಯಾವುದೇ ವಸ್ತುಗಳು ಜೈಲಿನ ಒಳಗೆ ಹೋಗಲು ಸಾಧ್ಯವಿಲ್ಲ. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಸಿಬ್ಬಂದಿಯ ನಿರ್ಲಕ್ಷ್ಯದಿಂದ ಇದೆಲ್ಲ ಸಾಧ್ಯವಾಗುತ್ತಿದೆ. ಇದನ್ನು ತಡೆಯಲು ನಿಮ್ಮಿಂದ ಸಾಧ್ಯವಿದೆ ಎಂದು ಹೇಳಿದರು.

ರಾಜ್ಯದ ಎಲ್ಲ ಕಾರಾಗೃಹಗಳಲ್ಲಿನ ಚಟುವಟಿಕೆಗಳ ಮೇಲೆ ನಿಗಾವಹಿಸಲು ಅನುಕೂಲವಾಗುವ ನಿಟ್ಟಿನಲ್ಲಿ ‘ಸೆಂಟ್ರಲ್ ಕಮಾಂಡ್ ಸೆಂಟರ್’ ಸ್ಥಾಪಿಸಲು ತೀರ್ಮಾನಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಆಡಳಿತದ ದೃಷ್ಟಿಯಿಂದ ಕಮಾಂಡ್ ಸೆಂಟರ್ ಸ್ಥಾಪಿಸುವುದು ಉತ್ತಮ ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿದೆ. ಈ ಕ್ರಮದಿಂದ ಬಹಳಷ್ಟು ಸುಧಾರಣೆಯಾಗುತ್ತದೆ. ಜೈಲುಗಳಿಗೆ ಭೇಟಿ ನೀಡುವವರ ವಸ್ತುಗಳನ್ನು ತಪಾಸಣೆ ನಡೆಸುವುದು, ಸಿಬ್ಬಂದಿಗಳ ಕಾರ್ಯಚಟುವಟಿಕೆಯನ್ನು ಕಮಾಂಡ್ ಸೆಂಟರ್‌ನಿಂದ ನಿಗಾವಹಿಸಲು ಸಾಧ್ಯವಾಗುತ್ತದೆ. ಇದೊಂದು ಉತ್ತಮ ಹೆಜ್ಜೆ. ಉತ್ತಮವಾಗಿ ಆಡಳಿತ ನಡೆಸಲು ಬಹಳ ಸಹಾಯವಾಗುತ್ತದೆ ಎಂದು ಹೇಳಿದರು.

ಕಾರಾಗೃಹ ಇಲಾಖೆ ಎನ್ನುವುದಕ್ಕಿಂತ ಸುಧಾರಣೆ ಇಲಾಖೆ ಎನ್ನುವುದು ಮುಖ್ಯ. ಯಾವುದೋ ಕಾರಣಕ್ಕಾಗಿ ವ್ಯಕ್ತಿ ತಪ್ಪು ಮಾಡಬಹುದು. ಆತನನ್ನು ಸರಿಪಡಿಸುವುದು ನಮ್ಮ ಕೆಲಸ ಎಂಬ ನಿಟ್ಟಿನಲ್ಲಿ ಸುಧಾರಣಾ ಇಲಾಖೆ ಎಂದು ಮಾಡಲಾಗಿದೆ. ನಾನು ಮೂರು ಬಾರಿ ಗೃಹಸಚಿವನಾದ ಅವಧಿಯಲ್ಲಿ ಸುಮಾರು 2500 ಕೈದಿಗಳನ್ನು ಸುಧಾರಣೆ ಮಾಡಿ, ಬಿಡುಗಡೆ ಮಾಡಲಾಗಿದೆ. ಮತ್ತೊಮ್ಮೆ ತಪ್ಪು ಮಾಡುವುದಿಲ್ಲ ಎಂದು ಕೈದಿಯ ಮನಸ್ಸನ್ನು ಪರಿಶುದ್ಧ ಮಾಡಿ, ಪರಿವರ್ತನೆ ಮಾಡುವುದು ಮುಖ್ಯ. ಇದು ಉತ್ತಮವಾಗಿ ನಡೆಯಬೇಕು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯು ಬಹಳ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.

ಬಹಳ ವರ್ಷಗಳಿಂದ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಲ್ಲಿ ನೇಮಕಾತಿ ನಡೆದಿಲ್ಲ. ಸಿಬ್ಬಂದಿಗಳ ನೇಮಕಾತಿ ಮಾಡಿಕೊಡಲು ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದ್ದಾರೆ. ಇದಕ್ಕೆ ತಕ್ಷಣದ ಕ್ರಮ ಕೈಗೊಳ್ಳಲಾಗುವುದು. ತಂತ್ರಜ್ಞಾನ ಮತ್ತು ಜನ‌ಸಮುದಾಯವನ್ನು ಉಪಯೋಗಿಸಿಕೊಂಡು ಕೆಲಸ ಮಾಡಬೇಕು. ಡಿಜಿ ಅಲೋಕ್ ಕುಮಾರ್ ಅವರಿಗೆ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳು ಸಹಕರಿಸಬೇಕು. ಇಲಾಖೆಯಲ್ಲಿ ಬದಲಾವಣೆಯನ್ನು ತಂದು ಜನ ಮೆಚ್ಚಿಸುವ ಕೆಲಸ ಮಾಡಬೇಕಿದೆ. ಇದರಿಂದ ಇಡೀ ವ್ಯವಸ್ಥೆಗೆ ಕೀರ್ತಿ ಬರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೃಹ ಇಲಾಖೆಯ ಅಪರ‌ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ರಾಜ್ಯ ಕಾರಾಗೃಹ ಮತ್ರು ಸುಧಾರಣಾ ಸೇವಾ ಇಲಾಖೆಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್, ಪೊಲೀಸ್ ಉಪಮಹಾನಿರೀಕ್ಷರಾದ ಜಿನೇಂದ್ರ ಖಣಗಾವಿ, ಪೊಲೀಸ್ ಅಧೀಕ್ಷಕರಾದ ಅಂಶು ಕುಮಾರ್ ಅವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments