ಲೋಕಸಭೆ ಚುನಾವಣೆ ನಮಗೆಲ್ಲ ಅತಿ ದೊಡ್ಡ ಸವಾಲಾಗಿದ್ದು ದೇಶದ ಹಿತಾಸಕ್ತಿಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ದೇಶದ ಜನತೆಯ ಒಳಿತಿಗಾಗಿ ಶ್ರಮಿಸುವ ಏಕೈಕ ಪಕ್ಷ ಕಾಂಗ್ರೆಸ್” ಎಂದರು.
“ಲೋಕಸಭೆ ಚುನಾವಣೆ ಒಂದು ರೀತಿಯಲ್ಲಿ ಅಗ್ನಿ ಪರೀಕ್ಷೆ ಆಗಿದ್ದು ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರ ಹಿಡಿಯುವುದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಹೊಣೆಗಾರಿಕೆ ಮಾತ್ರವಲ್ಲ ನಮ್ಮೆಲ್ಲರ ಜವಾಬ್ದಾರಿ” ಎಂದು ತಿಳಿಸಿದರು.
“ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲ ಸಮುದಾಯದ ಜತೆ ಅಲ್ಪಸಂಖ್ಯಾತ ಸಮುದಾಯ ಒಟ್ಟಾಗಿ ಕಾಂಗ್ರೆಸ್ ಬೆಂಬಲಿಸಿತು. ಅಲ್ಲಿ ಅಧಿಕಾರಕ್ಕೆ ಬಂದ ನಂತರ ತೆಲಂಗಾಣದಲ್ಲೂ ಬದಲಾವಣೆ ಗಾಳಿ ಬೀಸಿತು. ಇದೀಗ ಇಡೀ ರಾಷ್ಟ್ರ ದಲ್ಲಿ ಬದಲಾವಣೆ ತರಬೇಕಿದೆ” ಎಂದು ಹೇಳಿದರು.
“ನಾನು ಮೂಲತಃ ನಾನು ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷ ಕ್ಕೆ ಬಂದೆ. ಇಲ್ಲಿಗೆ ಬಂದ ನಂತರ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಸಮುದಾಯಕ್ಕೆ ಎಷ್ಟು ದೊಡ್ಡ ಗೌರವ ಹಾಗೂ ಸ್ಥಾನಮಾನ ಕೊಟ್ಟಿದೆ ಎಂಬುದು ಅರ್ಥವಾಯಿತು. ಸಮುದಾಯವು ಅಷ್ಟೇ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಜತೆ ನಿಂತಿದೆ. ಈ ಬಾರಿಯ ಲೋಕಸಭೆ ಚುನಾವಣೆ ಯಲ್ಲಿ ನಾವೆಲ್ಲ ಒಟ್ಟಾಗಿ ಹೋರಾಟ ಮಾಡೋಣ” ಎಂದು ತಿಳಿಸಿದರು.
ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಡಿ, ಮಹಿಳಾ ವಿಭಾಗದ ಅಧ್ಯಕ್ಷೆ ಅಲ್ಕಾ ಲಂಬಾ, ಎಲ್ಲ ರಾಜ್ಯಗಳ ರಾಜ್ಯಾಧ್ಯಕ್ಷರು ಉಪಸ್ಥಿತರಿದ್ದರು.