ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 3,364 ಬಾಣಂತಿಯರು ಸಾವಿಗೀಡಾಗಿರುವುದು ಮುಖ್ಯಮಂತ್ರಿಗಳ ಕಚೇರಿ ನೀಡಿರುವ ಅಂಕಿ ಅಂಶದಿಂದ ಬೆಳಕಿಗೆ ಬಂದಿದೆ.
ಕಳೆದ 2019-20ರಿಂದ 2024-25 ನವೆಂಬರ್ವರೆಗೆ ರಾಜ್ಯದಲ್ಲಿ ಒಟ್ಟು 3,364 ಬಾಣಂತಿಯರು ಮೃತಪಟ್ಟಿರುವುದು ವರದಿಯಾಗಿದೆ ಎಂದು ತಿಳಿಸಿದೆ.
ಬಳ್ಳಾರಿಯಲ್ಲಿನ ಬಾಣಂತಿಯರ ಸಾವು ದೊಡ್ಡ ಸದ್ದು ಮಾಡಿದೆ. ಇತ್ತ ವಿಪಕ್ಷಗಳು ಸರ್ಕಾರದ ನಿರ್ಲಕ್ಷ್ಯ ಆರೋಪಿಸಿ ಸದನದ ಒಳಗೆ ಹೊರಗೆ ಹೋರಾಟ ನಡೆಸುತ್ತಿವೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ರಾಜೀನಾಮೆಗೂ ಆಗ್ರಹಿಸುತ್ತಿದ್ದಾರೆ. ಇದರ ಜೊತೆಗೆ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಬಾಣಂತಿಯರು ಸಾವಿಗೀಡಾಗಿರುವುದಾಗಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಬಿಮ್ಸ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹೀಗಾಗಿ ಬಾಣಂತಿಯರ ಸಾವು ಪ್ರಕರಣ ರಾಜಕೀಯ ಸ್ವರೂಪ ಪಡೆದಿದೆ.
ಸದನದಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಲು ಪ್ರತಿಪಕ್ಷಗಳು ಮುಂದಾಗಿವೆ. ಈ ಮಧ್ಯೆ ಮುಖ್ಯಮಂತ್ರಿ ಕಚೇರಿ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿನ ಬಾಣಂತಿಯರ ಸಾವುಗಳ ಅಂಕಿಅಂಶ ನೀಡಿದೆ. ಆ ಮೂಲಕ ಬಿಜೆಪಿ ಅವಧಿಯಲ್ಲೂ ಬಾಣಂತಿಯರ ಸಾವು ಹೆಚ್ಚಿರುವ ಬಗ್ಗೆ ಅಂಕಿ ಅಂಶ ಬಹಿರಂಗ ಪಡಿಸಿದೆ.
ಅದರಂತೆ 2019-20ರಲ್ಲಿ ರಾಜ್ಯದಲ್ಲಿ ಒಟ್ಟು 662 ಬಾಣಂತಿಯರು ಸಾವಿಗೀಡಾಗಿದ್ದರು. 2020-21ರಲ್ಲಿ ಒಟ್ಟು 714 ಬಾಣಂತಿಯರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. 2021-22ರಲ್ಲಿ 595 ಬಾಣಂತಿಯರು, 2022-23ರಲ್ಲಿ 527, 2023-24ರಲ್ಲಿ 518 ಹಾಗೂ 2024-25 ಸಾಲಿನ ನವೆಂವರ್ ವರೆಗೆ 348 ಬಾಣಂತಿಯರು ಸಾವಿಗೀಡಾಗಿದ್ದಾರೆ.