ದೆಹಲಿಗೆ ತೆರಳಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರ ಜೊತೆಗೆ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳನ್ನು ತುಂಬುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಅವರೊಂದಿಗೆ ಈ ವಿಚಾರವಾಗಿ ಚರ್ಚೆ ನಡೆದಿದ್ದು, ಕೆಲವು ನಾಯಕರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.
ಸಮುದಾಯವಾರು ನಾಯಕರುಗಳಿಗೆ ವಿಧಾನ ಪರಿಷತ್ ಸ್ಥಾನ ಕೊಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಬಳಿ ಸಿಎಂ ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ನಾಮನಿರ್ದೇಶನ ಪ್ರಕ್ರಿಯೆ ಅಂತಿಮಗೊಳಿಸುವ ಬಗ್ಗೆಯೂ ಚರ್ಚೆ ನಡೆಸಿದ್ದು, ಈ ಸ್ಥಾನಕ್ಕೆ ಸಂಭಾವ್ಯರ ಪಟ್ಟಿಯನ್ನು ಕೂಡ ಖರ್ಗೆ ಅವರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದ್ಯ 33 ಸ್ಥಾನಗಳನ್ನು ಹೊಂದಿದೆ. ಈಗ ಈ ನಾಲ್ಕು ಸದಸ್ಯರ ನಾಮನಿರ್ದೇಶನದ ಬಳಿಕ ಕಾಂಗ್ರೆಸ್‌ನ ಬಲವು 37ಕ್ಕೆ ಹೆಚ್ಚಾಗಲಿದೆ. ಹಾಗಾಗಿ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಒಮ್ಮತದಿಂದ ಸಂಭಾವ್ಯರ ಅಂತಿಮ ಪಟ್ಟಿಯನ್ನು ಹೈಕಮಾಂಡ್‌ಗೆ ಕಳಿಸಕೊಡುವಂತೆ ಖರ್ಗೆ ಸೂಚನೆ ನೀಡಿದ್ದಾರಂತೆ.
ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವಾಗ ಮುಖ್ಯವಾಗಿ ಒಕ್ಕಲಿಗ, ಇತರ ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯಕ್ಕೆ ಒತ್ತು ಕೊಡಬೇಕು ಎಂದು ಸಿಎಂ ಬೇಡಿಕೆ. ಪಕ್ಷಕ್ಕಾಗಿ ದುಡಿಯುತ್ತಿರುವ ಸಣ್ಣ ಸಮುದಾಯಗಳ ನಾಯಕರಿಗೆ ಅವಕಾಶ ಕೊಡಬೇಕು. ಈ ಬಗ್ಗೆ ಪರಿಶೀಲನೆ ನಡೆಸಿ ಎಂದೂ ಖರ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಒಕ್ಕಲಿಗ ಸಮುದಾಯದಿಂದ ಬಿ.ಎಲ್.ಶಂಕರ್, ರಘುನಂದನ್ ರಾಮಣ್ಣ, ವಿನಯ್ ಕಾರ್ತಿಕ್ ಅವರ ಹೆಸರುಗಳು ಮುನ್ನೆಲೆಗೆ ಬಂದಿವೆ. ಬಿ.ಎಲ್.ಶಂಕರ್ ಅವರನ್ನು ಪರಿಷತ್‌ಗೆ ನಾಮನಿರ್ದೇಶನ ಮಾಡಿ, ಸಭಾಪತಿ ಸ್ಥಾನ ಕೊಡಬೇಕು ಎಂಬ ಚಿಂತನೆಯಲ್ಲಿ ಸಿದ್ದರಾಮಯ್ಯ ಅವರು ಇದ್ದಾರಂತೆ. ಈ ವಿಚಾರದಲ್ಲಿ ಒಕ್ಕಲಿಗ ಸಮುದಾಯದ ಕೋಟಾ ಬಿಟ್ಟುಕೊಡಲು ಡಿ.ಕೆ.ಶಿವಕುಮಾರ್ ಅವರೂ ರೆಡಿ ಇಲ್ಲ ಎಂದು ತಿಳಿದುಬಂದಿದೆ.
ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ರಘುನಂದನ್ ರಾಮಣ್ಣ ಅವರನ್ನ ಪರಿಷತ್ ಸದಸ್ಯರನ್ನಾಗಿ ಮಾಡುವುದಾಗಿ ಡಿಕೆಶಿ ಭರವಸೆ ನೀಡಿದ್ದರು. ಹಾಗಾಗಿ ಪರಿಷತ್‌ಗೆ ನಾಮನಿರ್ದೇಶನ ಮಾಡಲು ರಘುನಂದನ್ ಕೂಡ ರೇಸ್‌ನಲ್ಲಿದ್ದಾರೆ.
ಇನ್ನು, ಒಬಿಸಿ ಸಮುದಾಯದಿಂದ ರಮೇಶ್ ಬಾಬು ಅವರಿಗೆ ಅವಕಾಶ ಕೊಡುವ ಚಿಂತನೆ ಇದೆ. ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅವರ ಹೆಸರೂ ಸಹ ಈ ಸ್ಥಾನಕ್ಕೆ ಪ್ರಸ್ತಾಪವಾಗಿದೆ. ದಲಿತ ಸಮುದಾಯದಿಂದ ಡಿ.ಜಿ.ಸಾಗರ್ ಅಥವಾ ಪತ್ರಕರ್ತ ಶಿವಕುಮಾರ್ ಅವರನ್ನು ಪರಿಗಣಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಖಚಿತ ಪಡಿಸಿವೆ.