ಒಳ ಮೀಸಲಾತಿ ಜಾರಿಗೆ ನಮ್ಮ ಸಿದ್ದರಾಮಯ್ಯ ಸರ್ಕಾರವು ಬದ್ಧವಾಗಿದ್ದು ಈಗಾಗಲೇ ಅದನ್ನು ಸ್ಪಷ್ಟವಾಗಿ ಘೋಷಿಸಿದೆ. ಆದರೆ, ಬಿಜೆಪಿ ಪಕ್ಷದ ನಾಯಕರು ಇದನ್ನು ರಾಜಕೀಯಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದು ಇದರಿಂದ ಪರಿಶಿಷ್ಟ ಸಮುದಾಯಗಳಿಗೆ ಯಾವುದೇ ಪ್ರಯೋಜನ ಇಲ್ಲ ಎಂದು ಸಚಿವ ಡಾ. ಹೆಚ್ ಸಿ ಮಹದೇವಪ್ಪ ಹೇಳಿದರು.
ಬೆಳಗಾವಿಯ ಸುವರ್ಣ ಸೌಧದ ಬಳಿ ಮಾದಿಗ ದಂಡೋರ ಸಮಿತಿಯಿಂದ ಜರುಗುತ್ತಿರುವ ಒಳ ಮೀಸಲಾತಿ ಜಾರಿ ಹೋರಾಟದ ಸಮಾವೇಶದಲ್ಲಿ ಪಾಲ್ಗೊಂಡು ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿ, ಇದೇ ವೇಳೆ ‘ಪರಿಶಿಷ್ಟ ಸಮುದಾಯಗಳು ತಮ್ಮನ್ನು ಮಾದಿಗ ಮತ್ತು ಹೊಲೆಯ’ ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಲು ವಿನಂತಿಸಿದರು.
“ಜನರನ್ನು ಮೆಚ್ಚಿಸಲು ಹಳೆಯ ವರದಿ ಮತ್ತು 2011 ರ ಜನಗಣತಿಯ ದತ್ತಾಂಶ ತೆಗೆದುಕೊಂಡು ಮೀಸಲಾತಿ ಕೊಡಿ ಎಂದು ಸಲಹೆ ಕೊಡುತ್ತಿರುವ ಬಿಜೆಪಿಗರಿಗೆ 2011 ರಿಂದ 2024 ರ ಅವಧಿಯ ಒಳಗೆ ಪರಿಶಿಷ್ಟ ಸಮುದಾಯಗಳ ಜನಸಂಖ್ಯೆಯಲ್ಲಿ ಏರಿಕೆಯಾಗಿದ್ದರ ಕುರಿತು ಅರಿವಿಲ್ಲ. ಸರಿ ಸುಮಾರು ಒಂದೂವರೆ ದಶಕದ ಅವಧಿಯಲ್ಲಿ ಆಗಿರುವ ಮಾರ್ಪಾಡುಗಳನ್ನು ಸೇರಿಸಿಕೊಳ್ಳದೇ ಮೀಸಲಾತಿಯನ್ನು ಜಾರಿ ಮಾಡಿದರೆ ಮುಂದೊಮ್ಮೆ ಯಾರಾದರೂ ಪ್ರಶ್ನೆ ಮಾಡಿದರೆ ಆಗ ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದಲೇ ನಾಗಮೋಹನ್ ದಾಸ್ ಸಮಿತಿ ರಚಿಸಲಾಗಿದೆ” ಎಂದರು.
“ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ರಾಜಕೀಯ ಅಧಿಕಾರವೇ ಶೋಷಿತರ ಅಭಿವೃದ್ಧಿಯ ಕೀಲಿಕೈ ಎಂದು ಹೇಳಿದ್ದು ಅದನ್ನು ಎಲ್ಲರೂ ಗಮನದಲ್ಲಿಟ್ಟುಕೊಂಡು ವರ್ತಿಸಬೇಕು. ದೇಶಾದ್ಯಂತ ಅತಿ ಶೋಷಿತ ಸಮುದಾಯಗಳನ್ನು ಗುರುತಿಸಿ ಅವುಗಳಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಆಲೋಚಿಸಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ಪಕ್ಷವು ವಿವರವಾಗಿ ಚರ್ಚಿಸಲಿದೆ. ಒಳ ಮೀಸಲಾತಿಯನ್ನು ಸೂಕ್ತ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಲಿದ್ದು ಚುನಾವಣಾ ಪ್ರಣಾಳಿಕೆಯಲ್ಲಿ ತಾನು ನುಡಿದಂತೆ ನಡೆಯಲಿದೆ” ಎಂದು ಹೇಳಿದರು.