ಅಕ್ರಮ ಆಸ್ತಿಗಳಿಸಿರುವ ಆರೋಪದ ಮೇಲೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಲೋಕಾಯುಕ್ತ ಪೊಲೀಸರು ನಾಲ್ಕು ದಿನಗಳ ಹಿಂದೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
2013ರ ಏಪ್ರಿಲ್ 1ರಿಂದ 2018ರ ಏಪ್ರಿಲ್ 30ರ ಅವಧಿಯಲ್ಲಿ ಅಕ್ರಮವಾಗಿ ₹74.93 ಕೋಟಿ ಮೌಲ್ಯದ ಆಸ್ತಿಗಳಿಸಿರುವ ಆರೋಪ ಡಿ ಕೆ ಶಿವಕುಮಾರ್ ಮೇಲೆ ಕೇಳಿಬಂದಿದೆ.
2020ರ ಅಕ್ಟೋಬರ್ 3ರಂದು ಇದೇ ಆರೋಪದಡಿ ಡಿ ಕೆ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಸಿಬಿಐ, ತನಿಖೆ ನಡೆಸುತ್ತಿತ್ತು. ಆದರೆ, ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದು, ಶಿವಕುಮಾರ್ ವಿರುದ್ಧದ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವಹಿಸುವ ತೀರ್ಮಾನವನ್ನು 2023ರ ನವೆಂಬರ್ 23ರಂದು ಕೈಗೊಂಡಿತ್ತು.
“ಸಿಬಿಐ ಅಧಿಕಾರಿಗಳು 2020ರ ಅ. 3ರಂದು ಶಿವಕುಮಾರ್ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ನಲ್ಲಿದ್ದ ಅಂಶಗಳನ್ನೇ ನಾವು ದಾಖಲಿಸಿರುವ ಎಫ್‌ಐಆರ್‌ನಲ್ಲೂ ಉಲ್ಲೇಖಿಸಿದ್ದೇವೆ. ರಾಜ್ಯ ಸರ್ಕಾರದ ಆದೇಶದಂತೆ ಲೋಕಾಯುಕ್ತ ಪೊಲೀಸ್ ವಿಭಾಗವು ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಪ್ರಕರಣದ ತನಿಖೆಯನ್ನು ಪ್ರತ್ಯೇಕ ತಂಡಕ್ಕೆ ವಹಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
2013ರ ಮಾರ್ಚ್ 31ರ ವೇಳೆಗೆ ಶಿವಕುಮಾರ್ ಕುಟುಂಬ ₹33.92 ಕೋಟಿ ಮೌಲ್ಯದ ಆಸ್ತಿ ಹೊಂದಿತ್ತು. ಐದು ವರ್ಷಗಳ ಅವಧಿಯಲ್ಲಿ ಅವರ ಕುಟುಂಬ ₹166.79 ಕೋಟಿಯನ್ನು ವರಮಾನ ಮತ್ತು ಇತರ ರೂಪದಲ್ಲಿ ಪಡೆದಿದೆ. ಇದೇ ಅವಧಿಯಲ್ಲಿ ₹ 113.12 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಅಂಶ ಸಿಬಿಐ ಎಫ್‌ಐಆರ್‌ನಲ್ಲಿದೆ.
“2018ರ ಏ.30ರ ವೇಳೆಗೆ ಆರೋಪಿತರ ಕುಟುಂಬ ₹ 128.60 ಕೋಟಿ ಆಸ್ತಿ ಹೊಂದಿತ್ತು. ವರಮಾನ, ಸ್ವೀಕೃತಿ ಮತ್ತು ವೆಚ್ಚಕ್ಕೆ ಹೋಲಿಸಿದರೆ ಶೇಕಡ 44.93ರಷ್ಟು ಹೆಚ್ಚುವರಿ ಆಸ್ತಿ ಇರುವುದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ” ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.