ನಮ್ಮ ಮಕ್ಕಳ ದಾರಿ ತಪ್ಪಿಸುವವರ ವಿರುದ್ಧ ನಮ್ಮ ಕಡೆ ಹೀಗೆ ಮಾತನಾಡುವುದು ಸಾಮಾನ್ಯ. ಚಿಕ್ಕಪ್ಪ, ಅಣ್ಣ, ಹಿತಚಿಂತಕನಾಗಿ ಉತ್ತರ ಕರ್ನಾಟಕ ಭಾಷೆಯಲ್ಲಿ ಮೋದಿ.. ಮೋದಿ.. ಎನ್ನುವ ಯುವಕರ, ವಿದ್ಯಾರ್ಥಿಗಳ ಮುಖಕ್ಕೆ ಹೊಡೆಯಿರಿ ಎಂದು ಹೇಳಿರುವುದು ಮೋದಿಯ ಮೋಸದಿಂದ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಮಾತನ್ನು ಸಮರ್ಥಿಸಿಕೊಂಡರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಿ ಟಿ ರವಿ ಅವರು ಅಪ್ಪನಿಗೆ ಹುಟ್ಟಿದ್ದರೇ ಎನ್ನುವ ಮಾತನ್ನು ಆಡಿದ್ದಾರೆ. ನಾನು ಸಹ ಯಾರಿಗೆ ಹುಟ್ಟಿದ್ದೀರಿ ಎಂದು ಕೇಳಬಹುದಿತ್ತು. ಆದರೆ ಅವರಷ್ಟು ಕೆಳಮಟ್ಟಕ್ಕೆ ನಾನು ಇಳಿಯಲು ಇಷ್ಟಪಡುವುದಿಲ್ಲ” ಎಂದರು.
“ನಾವು ಯಾರಿಗೆ ಹುಟ್ಟಿದ್ದೇವೆ ಎಂದು ನಮ್ಮ ತಾಯಂದಿರಿಗೆ ಗೊತ್ತಿರುತ್ತದೆ. ನೀವು ಸವಾಲಿಗೆ ಸಿದ್ದರಿದ್ದರೆ ನನ್ನ ತಾಯಿಯನ್ನು ಬಿಜೆಪಿ ಕಚೇರಿಗೆ ಕರೆದುಕೊಂಡು ಬರುತ್ತೇನೆ, ತಯಾರಿದ್ದೀರಾ? 2 ಕೋಟಿ ಉದ್ಯೋಗ, ನರೇಗಾ ಅನ್ಯಾಯದ ಬಗ್ಗೆ ಉತ್ತರ ಕೊಡಲು ಸಿದ್ದರಿದ್ದೀರಾ?” ಎಂದು ಸವಾಲು ಹಾಕಿದರು.
“ಬಿಜೆಪಿಯವರು ಸುಳ್ಳು, ಕಪಟ, ಮೋಸ ಮಾಡುವುದರ ಜೊತೆಗೆ ನಮ್ಮ ಯುವಕರ, ಮಕ್ಕಳ ಹಾದಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ನಾನು ಕಾರಟಗಿಯಲ್ಲಿ ಹೇಳಿದ ಹೇಳಿಕೆಗೆ ಬದ್ದನಾಗಿದ್ದೇನೆ. ಮಾಧ್ಯಮದವರು ನನ್ನ ಭಾಷಣದ ಪೂರ್ಣಪಾಠವನ್ನು ಹಾಕಿ, ಕೇವಲ ತುಣುಕನ್ನು ಮಾತ್ರ ಏಕೆ ಹಾಕಿದ್ದೀರಿ” ಎಂದು ಪ್ರಶ್ನಿಸಿದರು.
“ಬಿಜೆಪಿಯವರು 2014 ರ ಲೋಕಾಸಭಾ ಚುನಾವಣೆ ವೇಳೆ ಮಾಡಿದ ಭಾಷಣಗಳನ್ನು ಅವರೇ ಕೇಳಲಿ. ಅವರ ಭಾಷಣ ಕೇಳಿ ಅವರೇ ಬಿಜೆಪಿಗೆ ಮತ ನೀಡುವುದಿಲ್ಲ. 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು, ಎರಡು ಕೋಟಿ ಉದ್ಯೋಗ ನೀಡಲಾಗಿದೆಯೇ? 10 ವರ್ಷದಲ್ಲಿ ಒಂದೇ ಒಂದು ಉದ್ಯೋಗ ನೀಡಿಲ್ಲ. ಸ್ಮಾರ್ಟ್ ಸಿಟಿ ಎಷ್ಟು ಅಭಿವೃದ್ದಿ ಮಾಡಿದ್ದಾರೆ ಉತ್ತರಿಸಲಿ” ಎಂದರು.
“ನಮ್ಮ ಪಾಲಿನ ಹಣ ಕೇಳಿದರೆ ಆರೋಪ ಮಾಡುತ್ತಾರೆ. ಬರ ಪರಿಹಾರ ನೀಡುತ್ತಿಲ್ಲ. ಬರ ಅಧ್ಯಯನ ತಂಡಗಳು ಬಂದು ಹೋದರು ಹಣ ನೀಡುತ್ತಿಲ್ಲ. ಸಿದ್ದರಾಮಯ್ಯ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಬಿಜೆಪಿಯವರು ನೂರಾರು ಬಾರಿ ಕೆಟ್ಟದಾಗಿ ಮಾತನಾಡಿದ್ದಾರೆ” ಎಂದು ಹರಿಹಾಯ್ದರು.
“ಬಿಜೆಪಿ ಪಕ್ಷದ ಅನುರಾಗ್ ಠಾಕೂರ್ ಹೇಳುತ್ತಾರೆ ʼಮೋದಿ ವಿರುದ್ದ ಮಾತನಾಡಿದವರಿಗೆ ಗುಂಡಿಕ್ಕಿ ಕೊಲ್ಲಿʼ ಎಂದು ಜವಾಬ್ದಾರಿಯುತ ಸಚಿವರ ಮಾತೇ ಅದು. ಅವರನ್ನು ವಜಾ ಮಾಡುವ ಶಕ್ತಿ ನಿಮ್ಮ ಬಳಿ ಇಲ್ಲವೇ? ಪ್ರಜ್ಞಾಸಿಂಗ್ ಠಾಕೂರ್ ಶಿವಮೊಗ್ಗಕ್ಕೆ ಬಂದಾಗ “ನಿಮ್ಮ ಮನೆಯ ಚಾಕೂ ಚೂರಿ, ಬಂದೂಕು ತಯಾರು ಮಾಡಿಟ್ಟುಕೊಳ್ಳಿʼ ಎಂದಿದ್ದರು. ನಿಮ್ಮದು ಸಂಸ್ಕೃತಿಯ ಮಾತೆ?” ಎಂದು ಕುಟುಕಿದರು.
“ನನಗೆ ಬಿಜೆಪಿಯ ಭಾಷೆಯಲ್ಲೂ ಮಾತನಾಡಲು ಬರುತ್ತದೆ. ಕನ್ನಡ ಸಂಸ್ಕೃತಿ ಸಚಿವನಾದ ನನಗೆ ನನ್ನ ತಂದೆ- ತಾಯಿ ಒಳ್ಳೆಯ ಸಂಸ್ಕಾರ ಕಲಿಸಿದ್ದಾರೆ ಲೂಟಿ ರವಿ ಅವರೆ. ಸಿದ್ದರಾಮಯ್ಯ ಅವರು, ಶಿವಕುಮಾರ್ ಅವರು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ನನಗೆ ಸಂಸ್ಕೃತಿ ಕಲಿಸಿದ್ದಾರೆ” ಎಂದರು.
ಕಾಳಜಿ ಇಟ್ಟುಕೊಂಡು ಮಾತನಾಡಿದ್ದೇನೆ
“ಬಿಜೆಪಿಯವರು ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಾ ಇದ್ದಾರೆ ಎಂದು ಯುವಕರ ಪರವಾದ ಕಾಳಜಿ ಇಟ್ಟುಕೊಂಡು ಮಾತನಾಡಿದ್ದೇನೆ. ತ್ರಿಶೂಲ, ಕತ್ತಿ, ಚಾಕು, ಚೂರಿ ಇಟ್ಟುಕೊಂಡು ಎಷ್ಟೋ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಿದ್ದೀರಿ. ನಾವು ಸತ್ಯವನ್ನು ಹೇಳಿದರೆ ನಿಮಗೆ ಉರಿ ಬೀಳುತ್ತದೆ. ಮೆಣಸಿನಕಾಯಿ ಇಟ್ಟುಕೊಂಡಂತೆ ಆಗುತ್ತದೆ” ಎಂದರು ಕುಟುಕಿದರು.
ದಲಿತರ ಮೇಲೆ ವಾಗ್ದಾಳಿ ನಡೆಸುವುದು ಬಿಜೆಪಿಯ ತಂತ್ರ: ರಮೇಶ್ ಬಾಬು
“ಶಿವರಾಜ ತಂಗಡಗಿ ಅವರು ದಲಿತ ಸಮುದಾಯದ ವ್ಯಕ್ತಿ. ಉದ್ದೇಶಪೂರ್ವಕವಾಗಿ ದಲಿತರ ಮೇಲೆ ವಾಗ್ದಾಳಿ ನಡೆಸುವುದು ಬಿಜೆಪಿಯ ತಂತ್ರ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಅವಹೇಳನ ಮಾಡಿದ್ದರು. ಇದು ಅವರ ಸಂಸ್ಕೃತಿ” ಎಂದು ರಮೇಶ್ ಬಾಬು ಟೀಕಿಸಿದರು.
“ಚುನಾವಣೆ ವೇಳೆಯಲ್ಲಿ ಬಿಜೆಪಿಯವರು ಸಂಸ್ಕೃತಿಯನ್ನು ತೋರಿಸಿದ್ದಾರೆ. ಅಸಂವಿಧಾನಿಕ ಪದ ಬಳಸಿರುವ ಸಿ.ಟಿ.ರವಿ ಅವರ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದೇವೆ. ಸಿ.ಟಿ.ರವಿ ಅವರು ಬಳಸಿರುವ ಪದ ಸಂಘ- ಪರಿವಾರದಿಂದ ಬಂದಿರುವ ಬಳುವಳಿ” ಎಂದರು.