ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಪ್ರಯತ್ನವನ್ನು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರೋಧಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರ ಜೊತೆ ಈ ಬಗ್ಗೆ ಮಾತನಾಡಿ, “ಇವರು ಈಗ ಜಿಲ್ಲೆಯ ಹೆಸರು ಬದಲಾವಣೆ ಮಾಡಬಹುದು. ಮತ್ತೆ ನಾನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇನೆ. ಆಗ ಇವರು ಇಟ್ಟಿರುವ ಹೆಸರನ್ನು ಕಿತ್ತೆಸೆಯುತ್ತೇನೆ” ಎಂದು ಗುಡುಗಿದರು.
“ಕಾಂಗ್ರೆಸ್ ಸರಕಾರ ಬಂದ ಮೇಲೆ ರಾಮನಗರ ಹೆಸರು ಬದಲಾವಣೆ ಮಾಡಲು ಹೊರಟಿದ್ದಾರೆ. ಇದನ್ನು ಯಾಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಬೆಂಗಳೂರಿಗೆ ಸೇರ್ಪಡೆಯಾದರೆ ಮೂಟೆಗಟ್ಟಲೇ ಹಣವನ್ನು ತುಂಬಿಸಿಕೊಳ್ಳಬಹುದು ಎಂಬ ಉದ್ದೇಶ ಇರಬಹುದು” ಎಂದು ಆರೋಪಿಸಿದರು.
“ನಾನು ರಾಮನಗರದ ನಾಲ್ಕೂ ತಾಲೂಕುಗಳನ್ನು ಬೆಂಗಳೂರಿಗೆ ಸೇರಿಸುತ್ತೇನೆ. ಭೂಮಿ ಮಾರಾಟ ಮಾಡಬೇಡಿ ಎಂದು ಹೇಳಿದ್ದರು” ಎಂದು ಕುಮಾರಸ್ವಾಮಿ ಅವರು ಹೆಸರು ಹೇಳದೆಯೇ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ರಾಮದೇವರಿಗೆ ಅಪಚಾರ
“ರಾಮನಗರ ಜಿಲ್ಲೆ ಮಾಡಿದ್ದ ಉದ್ದೇಶ ಆ ವ್ಯಕ್ತಿಗೆ ಏನು ಗೊತ್ತಿದೆ? ರಾಮನ ಹೆಸರು ಇರುವುದು ಒಂದು ಒಂದು ಭಾಗ. ಈ ಜಿಲ್ಲೆಗೆ ತನ್ನದೇ ಆದ ಒಂದು ಇತಿಹಾಸ ಇದೆ. ಪುರಾಣ ಐತಿಹ್ಯವಿದೆ. ಈ ಹೆಸರಲ್ಲಿ ರಾಮನ ಹೆಸರು ಇದೆ. ರಾಮದೇವರಿಗೆ ಇವರು ಅಪಚಾರ ಮಾಡಲು ಹೊರಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅಲ್ಲಿ ಇವರು ಯಾವ್ಯಾವ ಬೆಲೆ ಏರಿಕೆ ಮಾಡಿದ್ದಾರೆ ನೋಡಿದ್ದೇವೆ. ಭೂಮಿ ಲಪಾಟಿಸಿ ಯಾವುದರ ಬೆಲೆ ಏರಿಕೆ ಮಾಡಿದ್ದಾರೆ ಎನ್ನುವುದು ಕೂಡ ಗೊತ್ತಿದೆ. ಇದೆಲ್ಲ ಬಿಟ್ಟು ಅಭಿವೃದ್ಧಿ ಮಾಡುವುದನ್ನು ಅವರು ಕಲಿಯಲಿ. ನಾನು ಅಧಿಕಾರದಲ್ಲಿದ್ದಾಗ ರಾಮನಗರ ಜಿಲ್ಲೆ ಮಾಡಿದ್ದೆ. ಅದನ್ನು ತೆಗೆಯಬೇಕು ಎನ್ನುವುದು ಅವರ ಉದ್ದೇಶ. ದೇವೇಗೌಡರು, ನಾನು ಏನು ಅಭಿವೃದ್ಧಿ ಮಾಡಿದ್ದೇವೆ ಜನರಿಗೆ ಗೊತ್ತಿದೆ. ಅದಕ್ಕೆ ಇವರ ಸರ್ಟಿಫಿಕೇಟ್ ಬೇಕಿಲ್ಲ. ಹಿಂದೆ ಕನಕಪುರ, ಸಾತನೂರು ಹೇಗಿದ್ದವು, ಆಗ ಇವರು ಯಾರದೋ ಸೇವೆ ಮಾಡಿಕೊಂಡಿದ್ದರು” ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.
“ಈಗ ರಾಮನಗರ ಹೆಸರು ಬದಲಾಯಿಸಿದರೂ ಮುಂದೆ ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇನೆ. ಆ ವಿಶ್ವಾಸ ನನಗೆ ಇದೆ. ನಾಲ್ಕು ತಾಲೂಕು ಸೇರಿ ಬೆಂಗಳೂರು ದಕ್ಷಿಣ ಎಂದು ಮಾಡಲು ಹೊರಟಿದ್ದಾರೆ. ಈಗಾಗಲೇ ಬೆಂಗಳೂರು ದಕ್ಷಿಣ ಕ್ಷೇತ್ರ ಎಂದು ಇದೆ. ಹೆಸರು ಬದಲಾವಣೆ ಮಾಡಿದರೆ ಏನು ಸಿಗುತ್ತದೆ ಎಂಬುದನ್ನು ಅವರು ಜನರಿಗೆ ಹೇಳಬೇಕು. ಹೆಸರು ಬದಲಾವಣೆ ಮಾಡಿದರೆ ಎಲ್ಲ ಸರ್ಕಾರಿ ದಾಖಲೆಗಳಿಗೆ ತೊಂದರಯಾಗಲಿದೆ. ಜನರು ಕಚೇರಿಗಳಿಗೆ ಅಲೆಯಬೇಕಾಗುತ್ತದೆ” ಎಂದರು.
ರಾಮನಗರ-ಚನ್ನಪಟ್ಟಣ ಅವಳಿ ನಗರ
“ಜಿಲ್ಲೆಗೆ ಹೆಸರು ಬದಲಾಯಿಸುವುದು ಅನಗತ್ಯ ಎಂದು ಒತ್ತಿ ಹೇಳಿದ ಅವರು; ರಾಮನಗರ-ಚನ್ನಪಟ್ಟಣ ಅವಳಿ ನಗರ ಮಾಡಿದ್ದರೆ ಒಂದು ಹೆಸರು ಅವರಿಗೆ ಬಂದಿರುತ್ತಿತ್ತು. ಅದರ ಬದಲು ಜಿಲ್ಲೆಯ ಹೆಸರನ್ನೇ ಅರಳಸಿ ಹಾಕಲು ಹುನ್ನಾರ ನಡೆಸಿದ್ದಾರೆ” ಎಂದು ದೂರಿದರು.