ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ನಿರ್ಧರಿಸಿದ ಎಸ್ಸಿ, ಎಸ್ಪಿ ಮತ್ತು ಟಿಎಸ್ಪಿ ಮೀಸಲು ಹಣವನ್ನು ಸರ್ಕಾರ ಹಿಂಪಡೆಯಬೇಕು ಮತ್ತು ದಲಿತ ಸಮುದಾಯದ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಮುಖಂಡರು ಆಗ್ರಹಿಸಿದರು.
ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ಮುಖಂಡರು, “ದಲಿತರಿಗೆ ಮೀಸಲಿಟ್ಟ ಎಸ್ಸಿ, ಎಸ್ಪಿ ಮತ್ತು ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡರೆ ನಾವು ಸುಮ್ಮನಿರುವುದಿಲ್ಲ, ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಹಿರಿಯ ಪತ್ರಕರ್ತ ಮತ್ತು ದಲಿತ ಸಮುದಾಯದ ಮುಖಂಡ ಇಂದೂದರ ಹೊನ್ನಾಪುರ ಮಾತನಾಡಿ, “2023ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್, ದಲಿತರ ಕೆಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ಹೆಜ್ಜೆ ಇಟ್ಟಿತಾದರೂ, ಕೆಲವೇ ದಿನಗಳಲ್ಲಿ ಭ್ರಮನಿರಸನ ಉಂಟು ಮಾಡಿದೆ. ಗ್ಯಾರಂಟಿ ಕಾರ್ಯಕ್ರಮಗಳಿಗೆ ದಲಿತರಿಗೆ ಮೀಸಲಿಟ್ಟ ಹಣವನ್ನು ಬಳಸಿಕೊಂಡು ದಲಿತರ ಬೆನ್ನಿಗೆ ಚೂರಿ ಹಾಕಿದೆ” ಎಂದು ಆರೋಪಿಸಿದರು.
“ರಾಜ್ಯ, ರಾಷ್ಟ್ರದಲ್ಲಿ ಕೋಮುವಾದಿ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲು ದಲಿತರು ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷದೊಂದಿಗೆ ನಿಂತಿದ್ದಾರೆ. ಬಹಿರಂಗವಾಗಿಯೇ ದಲಿತ ಸಂಘಟನೆಗಳು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷ ಗೆದ್ದು ಸರ್ಕಾರ ರಚಿಸಿದೆ. ಕಾಂಗ್ರೆಸ್ ದಲಿತರಿಗೆ ಮೋಸ ಮಾಡಬಾರದು” ಎಂದರು.
ಡಿಎಸ್ಎಸ್ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, “ಬ್ಯಾಕ್ಲಾಗ್ ನೇಮಕಾತಿಯಿಂದ ಹಿಡಿದು, ಇತ್ತೀಚಿನ ಎಸ್ಸಿ, ಎಸ್ಪಿ ಮತ್ತು ಟಿಎಸ್ಪಿ ಅನುದಾವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವವರೆಗೂ ಸರ್ಕಾರ ವಂಚನೆ ಮುಂದುವರೆಸಿದೆ. ಬ್ಯಾಕ್ಲಾಗ್ ಹುದ್ದೆ ತುಂಬುತ್ತಿಲ್ಲ, ದಲಿತರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಅಡಚಣೆ ಮಾಡುತ್ತಿದೆ. ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ತರುತ್ತಿಲ್ಲ” ಎಂದು ದೂರಿದರು.
“ಸರ್ಕಾರದ ನಡೆ ಬಗ್ಗೆ ದಲಿತ ಜನಸಮೂಹದಲ್ಲಿ ತೀವ್ರ ಅಸಮಾಧಾನ ಮೂಡಿದ್ದು, ಕಾಂಗ್ರೆಸ್ ವಿರುದ್ದ ತಿರುಗಿ ಬೀಳುವ ಹಂತಕ್ಕೆ ಬಂದು ಮುಟ್ಟಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಡೆಯನ್ನು ನಾವು ಸಹಿಸುವುದಿಲ್ಲ. ದಲಿತರಿಗೆ ಮಾಡಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಬೃಹತ್ ಹೋರಾಟ ಆರಂಭಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಮಂಡಿಸಿದ ಹಕ್ಕೋತ್ತಾಯಗಳು
1 ಎಸ್ಸಿ, ಎಸ್ಟಿ ಬ್ಯಾಕ್ಲಾಗ್ ಉದ್ಯೋಗಗಳನ್ನು ಕೂಡಲೇ ಭರ್ತಿ ಮಾಡಬೇಕು.
- ಎಸ್ಸಿ, ಎಸ್ಪಿ ಮತ್ತು ಟಿಎಸ್ಪಿ ಮೀಸಲು ಹಣವನ್ನು ಯಾವುದೇ ಕಾರಣಕ್ಕೂ ಇತರೆ ಯೋಜನೆಗಳಿಗೆ ಬಳಸಬಾರದು. ಈಗಾಗಲೇ ಗ್ಯಾರಂಟಿ ಯೋಜನೆಗೆ ಬಳಸಿರುವ ಎಸ್ಸಿ, ಎಸ್ಪಿ ಮತ್ತು ಟಿಎಸ್ಪಿ ಮೀಸಲು ಹಣವನ್ನು ಹಿಂಪಡೆಯಬೇಕು. ಕಳೆದ ಸಾಲಿನ 11 ಸಾವಿರ ಕೋಟಿ ರೂ. ಮತ್ತು ಈ ಸಾಲಿನ 14 ಸಾವಿರ ಕೋಟಿ ರೂ. ಹಣವನ್ನು ಈ ಕೂಡಲೇ ಹಿಂಪಡೆಯಬೇಕು.
- ಎಸ್ಸಿ, ಎಸ್ಪಿ ಮತ್ತು ಟಿಎಸ್ಪಿ ಕಾಯ್ದೆಯ ಯೋಜನೆಗಳ ಜಾರಿಗೆ ಕೂಡಲೇ ಏಕಗವಾಕ್ಷಿ ಪದ್ದತಿಯನ್ನು ಜಾರಿಗೊಳಿಸಬೇಕು.
- ಹೊರಗುತ್ತಿಗೆ ನೇಮಕಾತಿಯಲ್ಲಿ ಕಡ್ಡಾಯವಾಗಿ ರೋಸ್ಟರ್ ಪದ್ದತಿಗನುಗುಣವಾಗಿ ಮೀಸಲಾತಿ ನೀಡಬೇಕು
- ಪರಿಶಿಷ್ಟ ಜಾತಿ ಮತ್ತು ಪಂಗಡದ ಮೆರಿಟ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನಕ್ಕೆ ವಿಧಿಸಿರುವ ಆದಾಯ ಹಾಗೂ ಅಂಕಗಳ ಮಿತಿಯನ್ನು ರದ್ದುಗೊಳಿಸಿ, ಈ ಹಿಂದೆ ನಿಗದಿಪಡಿಸಿದಂತೆ ಮರು ಜಾರಿಗೊಳಿಸಬೇಕು.
- ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡುತ್ತಿರುವ ಎಲ್ಲಾ ಅನುದಾನಗಳ ನಿರ್ವಹಣೆ ಮತ್ತು ಪರಿವೀಕ್ಷಣೆ ಮಾಡಲು ಸ್ವತಂತ್ರ ಕಾವಲು ಸಮಿತಿ ನೇಮಿಸಬೇಕು ಹಾಗೂ ಅದಕ್ಕೆ ನ್ಯಾಯಾಂಗ ಅಧಿಕಾರ ನೀಡಬೇಕು.
- ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಚಿಸುವ ದಲಿತ ವಿದ್ಯಾರ್ಥಿಗಳಿಗೆ ‘ಪ್ರಬುದ್ದ ಯೋಜನೆ’ ಮೂಲಕ ನೀಡುತ್ತಿರುವ ನಿರ್ವಹಣ ವೆಚ್ಚದ ಮಿತಿಯನ್ನು ಸಡಿಲಗೊಳಿಸಿ, ವಾಸ್ತವ ವೆಚ್ಚವನ್ನು ನೀಡಬೇಕು. ಈ ಹಿಂದಿನಂತೆ ಎರಡು ಕೋಟಿಗಳವರೆಗೆ ನೀಡುತ್ತಿರುವ ಅನುದಾನವನ್ನು ಮುಂದುವರೆಸಬೇಕು.
- ವಿದೇಶದಲ್ಲಿ ಪಿಹೆಚ್ಡಿ ಪದವಿ ಪಡೆಯಲು ನೀಡುತ್ತಿದ್ದ ಧನ ಸಹಾಯ ರದ್ದುಗೊಳಿಸಿರುವುದನ್ನು ಕೂಡಲೇ ಹಿಂಪಡೆದು, ಹಿಂದಿ ಪದ್ದತಿಯನ್ನು ಮುಂದುವರೆಸಬೇಕು.
- ವಸತಿ ಶಾಲೆಗಳ ಪ್ರವೇಶಕ್ಕೆ ನಿಗದಿಪಡಿಸಿರುವ ಪ್ರವೇಶ ಪರೀಕ್ಷೆಗಳನ್ನು ರದ್ದುಪಡಿಸಿ ಸಾಮಾಜಿಕ ಹಾಗೂ ಅರ್ಥಿಕ ಮಾನದಂಡದ ಮೇಲೆ ಪ್ರವೇಶಾತಿ ನೀಡಬೇಕು.