ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ನಮ್ಮದೊಂದು ಕೋರ್ ಕಮಿಟಿ ನಿರ್ಣಯಿಸಿದರೆ ಸ್ಪರ್ಧೆ ಮಾಡುತ್ತೇವೆ. ಅಲ್ಲಿ ನನ್ನ ಹೆಸರೇ ಅಂತಿಮವಾದರೆ ನಾನೇ ಸ್ಪರ್ಧಿಸುತ್ತೇನೆ. ನನ್ನ ಹೆಸರು ಅಂತಿಮವಾದರೆ, ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ”ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
“ಉಸ್ತುವಾರಿ ಸಭೆಗೆ ನಾನು ಹೋಗಿಲ್ಲ. ಅಲ್ಲಿ 600 ಶಾಸಕರ ಬೆಂಬಲವಿದೆ. ಅಲ್ಲಿ ನಮಗೇನು ಕೆಲಸ. ವಿಜಯೇಂದ್ರ ಅವರಿಗೆ 600 ಶಾಸಕರು, 1500 ಸಂಸದರು, 2000 ಎಂಎಲ್‌ಸಿಗಳ ಬೆಂಬಲವಿದೆ. ಯತ್ನಾಳ್ , ಜಾರಕಿಹೊಳಿ ಹಿಂದೆ ಯಾರಿದ್ದಾರೆ? ಅದಕ್ಕೆ ನಾವು ಹೋಗಿಲ್ಲ” ಲೇವಡಿ ಮಾಡಿದರು.
“ರಾತ್ರಿ ಡಿ ಕೆ ಶಿವಕುಮಾರ್ ಮನೆ, ಬೆಳಿಗ್ಗೆ ಸಿದ್ದರಾಮಯ್ಯ ಮನೆ, 11ಕ್ಕೆ ಬೋಲೋ ಭಾರತ್ ಮಾತಾ ಕೀ ಜೈ. ಹೀಗಾದರೆ ಹೇಗೆ?” ಎಂದು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಕುಟುಕಿದರು.
ರೆಡ್ಡಿ-ರಾಮುಲು ಒಂದಾಗಬೇಕು
“ರೆಡ್ಡಿ-ರಾಮುಲು ಜಗಳವಾಡಬಾರದು. ಇಬ್ಬರು ಒಂದಾಗಿರಬೇಕು. ರೆಡ್ಡಿ-ಶ್ರೀರಾಮುಲು ಮಧ್ಯೆ ಕೆಲವರು ಹುಳಿ ಹಿಂಡಿದ್ದಾರೆ. ಇಲ್ಲ-ಸಲ್ಲದ್ದನ್ನೆಲ್ಲ ಹೇಳಿ ಇಬ್ಬರ ನಡುವೆ ಬೆಂಕಿ ಹಚ್ಚಿದ್ದಾರೆ. ಅವರಿಬ್ಬರೂ ಒಂದಾಗಿರಬೇಕು. ಕಷ್ಟದಿಂದ ಬಂದಿರುವ ಅವರಿಬ್ಬರೂ ಒಂದಾಗಿರಬೇಕು” ಎಂದರು.
ಬಿ ವೈ ವಿಜಯೇಂದ್ರ ಅವರ ಬದಲಾವಣೆಗೆ ಬಿಜೆಪಿಯ ಒಂದು ಬಣ ತೀವ್ರ ಆಗ್ರಹಪಡಿಸುತ್ತಿದೆ. ಪ್ರತಿದಿನ ವಿಜಯೇಂದ್ರ ವಿರುದ್ಧ ಶಾಸಕ ಯತ್ನಾಳ್ ಬಹಿರಂಗ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಮುಜುಗರ ಸೃಷ್ಟಿಸುತ್ತಿದ್ದಾರೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಂಬಂಧಿಸಿದಂತೆ ತಾವೂ ಆಕಾಂಕ್ಷಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿರುವುದು ಕುತೂಹಲ ಸೃಷ್ಟಿಸಿದೆ.