ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದ ಸಭಾಪತಿ ಬಸವರಾಜ ಹೊರಟ್ಟಿ ಸದ್ಯ ಯೂಟರ್ನ್ ಹೊಡೆದಿದ್ದಾರೆ. ರಾಜೀನಾಮೆ ಬಗ್ಗೆ ಹುಬ್ಬಳ್ಳಿಯಲ್ಲಿ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ರಾಜೀನಾಮೆ ಪತ್ರ ವೈರಲ್ ಆಗುತ್ತಿರುವ ವಿಚಾರ ಕುರಿತು ಮಾತನಾಡಿದ ಅವರು,
“ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ನಿರ್ಧರಿಸಿದ್ದು ನಿಜ. ಆದರೆ ಇದೀಗ ಬಹಳ ಜನ ನನಗೆ ಕಾಲ್ ಮಾಡಿ ಬೇಡ ಅನ್ನುತ್ತಿದ್ದಾರೆ, ಸಹಿ ಮಾಡಿದ ಪತ್ರ ಇನ್ನೂ ಲಾಕರ್‌ನಲ್ಲಿದೆ” ಎಂದರು.
“ವೈರಲ್ ಆಗಿರುವುದು ಸಹಿ ಮಾಡದ ಪತ್ರ. ನನ್ನ ಪಿಎ ಆ ಪತ್ರವನ್ನು ವೈರಲ್ ಮಾಡಿದ್ದಾರೆ. ದಿನಾಂಕ 21 ಎಂದು ಹಾಕಿದ್ದೆ. ಈ ಪತ್ರ ಬಹಳ ಜನರ ಹತ್ತಿರ ಹೋಗಿದೆ. ಸಚಿವರು, ಪರಿಷತ್ ಸದಸ್ಯರು ಕಾಲ್ ಮಾಡುತ್ತಿದ್ದಾರೆ. ದುಡುಕಿನ ನಿರ್ಧಾರ ಬೇಡ ಎನ್ನುತ್ತಿದ್ದಾರೆ. ಕೆಲವು ಸಲ ಹಿತೈಷಿಗಳ ಮಾತು ಕೇಳಬೇಕಾಗುತ್ತದೆ” ಎಂದು ತಿಳಿಸಿದರು.
“ರಾಜೀನಾಮೆ ಕುರಿತು ವಿಚಾರ ಮಾಡುತ್ತೇನೆ. ಮಾನಸಿಕವಾಗಿ ಬೇಸರವಾಗಿದ್ದು ನಿಜ. ಹೀಗಾಗಿ ನಾನು ರಾಜೀನಾಮೆ ಕೊಡುವ ನಿರ್ಧಾರ ಮಾಡಿದ್ದೆ. ಕೆಲವರ ನಡುವಳಿಕೆ ನನ್ನ ಮನಸಿಗೆ ಸಮಾಧಾನವಾಗಿಲ್ಲ. ಕಳೆದ ಮೂರು ವರ್ಷಗಳಿಂದ ಅಸಮಾಧಾನವಾಗಿದೆ. ಜನರಿಗೆ ಮೋಸ ಮಾಡೋ ಟ್ರೆಂಡ್ ಬಂದಿದೆ. ಇದೀಗ ವಿಧಾನ ಮಂಡಲಕ್ಕೆ ಬಂದಿದೆ. ರಾಜಕಾರಣ ಬಹಳ ಕಲುಷಿತ ಆಗಿದೆ. ಕಾಲ ಕೆಟ್ಟಿದೆ, ಸದನದ ಗೌರವ ಹೋಗಿ ಬಹಳ ದಿನ ಆಗಿದೆ” ಎಂದು ಆರೋಪಿಸಿ ರಾಜೀನಾಮೆ ಮಾತುಗಳನ್ನು ಹೊರಟ್ಟಿ ಹೊರಹಾಕಿದ್ದರು.