ಚನ್ನಪಟ್ಟಣ ಟಿಕೆಟ್ ವಿಷಯಕ್ಕೆ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ. ನನ್ನ ತಾಳ್ಮೆ, ಸಹನೆಗೂ ಮಿತಿ ಇದೆ. ಅಭ್ಯರ್ಥಿ ವಿಷಯದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಮಾತುಗಳಲ್ಲಿ ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರು ಮುಖಂಡರ ಸಭೆಯಲ್ಲಿ ಮಾತನಾಡಿ, “ಈ ರಾಜ್ಯದಲ್ಲಿ ನನ್ನಷ್ಟು ಉಪ ಚುನಾವಣೆಗಳನ್ನು ಎದುರಿಸಿದ, ಯಶಸ್ವಿಯಾಗಿ ನಿಭಾಯಿಸಿದ ವ್ಯಕ್ತಿ ಇನ್ನೊಬ್ಬರಿಲ್ಲ, ಎಂತೆಂತಹ ಚುನಾವಣೆಗಳನ್ನು, ಅಗ್ನಿಪರೀಕ್ಷೆಗಳನ್ನು ಎದುರಿಸಿದ್ದೇನೆ. ಚನ್ನಪಟ್ಟಣ ಚುನಾವಣೆ ಎದುರಿಸುವುದಕ್ಕೆ ನನಗೆ ಭಯವೇ? ಸಾಧ್ಯವೇ ಇಲ್ಲ” ಎಂದು ಗುಡುಗಿದರು.
ಮೋದಿ, ಶಾ ಸಂಬಂಧ ಹಾಳು ಮಾಡಿಕೊಳ್ಳಲಾರೆ
“ನಾನು ಬಗ್ಗಿರುವುದು ಅಧಿಕಾರಕ್ಕಾಗಿ ಅಲ್ಲಾ. ವೈಯಕ್ತಿಕವಾಗಿ ನಾನು ಮಾಡದಿರುವ ತಪ್ಪಿಗೆ ತಲೆಕೊಟ್ಟಿದ್ದೇನೆ. ಈ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮೂಲೋತ್ಪಾಟನೆ ಮಾಡಬೇಕು ಎನ್ನುವ ಪ್ರಧಾನಿ ಮೋದಿ ಸಂಕಲ್ಪಕ್ಕೆ ಹೆಗಲಾಗಿ ನಿಂತಿದ್ದೇನೆ” ಎಂದು ಹೇಳಿದರು.
“ನಾಲ್ಕು ತಿಂಗಳಾಯಿತು ನಾನು ಮಂತ್ರಿಯಾಗಿ. ಆರೋಗ್ಯ ಹಾಳು ಮಾಡಿಕೊಂಡು ಏತಕ್ಕಾಗಿ ಇಷ್ಟೆಲ್ಲಾ ಮಾಡಬೇಕು. ನನ್ನಿಂದ ಜನರಿಗೆ ಅಲ್ಪಸ್ವಲ್ಪವಾದರೂ ಸಹಾಯ ಆಗುತ್ತದೆಯೇ ಎಂದು ಒಡ್ಡಾಡುತ್ತಿದ್ದೇನೆ. ಎನ್ ಡಿಎ ಮೈತ್ರಿ ಭದ್ರವಾಗಿದೆ. ಪ್ರಧಾನಿ ಮೋದಿ ಅವರು ದೇವೇಗೌಡರಿಗೆ ಕೊಡುವ ಗೌರವವನ್ನು ಯಾರಿಗೂ ಕೊಡಲ್ಲ. ಅವರಿಬ್ಬರ ನಡುವಿನ ಗೌರವಭಾವ ಎಂತದ್ದು ಎನ್ನುವುದನ್ನು ನಾನು ನೋಡಿದ್ದೇನೆ. ಆ ಸಂಬಂಧಕ್ಕೆ ಚ್ಯುತಿ ಬರಬಾರದು. ಅದಕ್ಕಾಗಿ ಬಗ್ಗಿದ್ದೇನೆ, ಇನ್ನೂ ಬಗ್ಗಿ ಎಂದರೆ ನನ್ನಿಂದ ಸಾಧ್ಯವಿಲ್ಲ” ಎಂದರು.
ಜೆಡಿಎಸ್ ನಿಂದಲೇ ಟಿಕೆಟ್ ಕೊಡಿ ಎಂದಿದ್ದರು ನಡ್ಡಾ
“ನವದೆಹಲಿಯಲ್ಲಿ ಭೇಟಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಅವರಿಗೆ (ಯೋಗೇಶ್ವರ್) ರಾಜೀನಾಮೆ ಕೊಟ್ಟು ಜೆಡಿಎಸ್ ನಿಂದ ಚುನಾವಣೆಗೆ ನಿಲ್ಲುವುದಕ್ಕೆ ಹೇಳುತ್ತೇವೆ ಎಂದು ಹೇಳಿದ್ದರು. ನಾನು ಈ ಸಂಬಂಧ ಉಳಿಯಬೇಕು, ಒಂದು ಸ್ಥಾನ ಮುಖ್ಯವಲ್ಲ, ಎನ್ ಡಿಎ ಮೈತ್ರಿ ಗೆಲ್ಲಬೇಕು ಎಂದು ಹೇಳುತ್ತಲೇ ಇದ್ದೇನೆ. ಮೋದಿ, ಅಮಿತ್ ಶಾ, ನಡ್ಡಾ ಅವರಂತಹ ನಾಯಕರ ಜತೆ ಸಂಬಂಧ ಮಾಡಿಕೊಳ್ಳಬೇಕಾ” ಎಂದು ಕಿಡಿಕಾರಿದರು.
ಮಾಜಿ ಪ್ರಧಾನಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು, ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ.ಸುರೇಶ್ ಬಾಬು, ಮಾಜಿ ಸಚಿವರಾದ ಸಾ ರಾ ಮಹೇಶ್, ವೆಂಕಟರಾವ್ ನಾಡಗೌಡ, ಶಾಸಕ ಶರಣು ಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಜಯಮುತ್ತು, ಹಾಪಕಾಮ್ಸ್ ದೇವರಾಜು, ಹಿರಿಯ ಮುಖಂಡ ಪ್ರಸನ್ನ, ಜಯರಾಂ ಮುಂತಾದವರು ವೇದಿಕೆಯ ಮೇಲಿದ್ದರು.