ಮಾಧ್ಯಮಗಳಿಗೆ ಎಲ್ಲವೂ ತಪ್ಪು ಎನಿಸಬಹುದು. ಸಾಹಿತಿಗಳು ಕೂಡ ಒಂದು ರೀತಿಯಲ್ಲಿ ರಾಜಕಾರಣಿಗಳೇ, ಅವರೂ ರಾಜಕಾರಣಕ್ಕೆ ಬರಬಹುದು. ಕಾಂಗ್ರೆಸ್ ಪಕ್ಷದ ಕಚೇರಿಗೆ ಸಾಹಿತಿಗಳನ್ನು ಕರೆದು ಚರ್ಚಿಸಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸಾಹಿತ್ಯ, ಸಂಸ್ಕೃತಿ ಹಾಗೂ ಇತರ ಅಕಾಡೆಮಿಗಳ ಅಧ್ಯಕ್ಷರ ಮತ್ತು ಪದಾಧಿಕಾರಿಗಳನ್ನು ಕರೆಸಿಕೊಂಡಿದ್ದರ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ತಮ್ಮ ನಡೆಯನ್ನು ಹೀಗೆ ಸಮರ್ಥಿಸಿಕೊಂಡರು.
ಅಕಾಡೆಮಿ ಅಧ್ಯಕ್ಷರು, ಪದಾಧಿಕಾರಿಗಳನ್ನು ಕರೆಸಿಕೊಂಡ ಬಗ್ಗೆ ಅಕ್ಷೇಪ ವ್ಯಕ್ತವಾಗುತ್ತಿದೆಯಲ್ಲ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, “ಅಕಾಡೆಮಿ ಅಧ್ಯಕ್ಷರ ಸಭೆ ನಾನೇ ಕರೆದಿದ್ದು. ಅದರಲ್ಲೇನಿದೆ. ಪಕ್ಷದ ಕಚೇರಿಯಲ್ಲಿ ಕರೆದಿದ್ದು ಸರಿಯಲ್ಲ ಅಂತ ನಿಮಗೆ ಅನ್ನಿಸಿರಬಹುದು. ಇದು ಸರ್ಕಾರದ ನೇಮಕ. ಹೀಗಾಗಿ ಎಲ್ಲಿ ಬೇಕಾದರೂ ಕರೆಸಿಕೊಳ್ಳಬಹುದು. ಎಲ್ಲಿ ಬೇಕಾದರೂ ಸಭೆ ಮಾಡಬಹುದು” ಎಂದರು.
ಸಾಹಿತ್ಯ ಮತ್ತು ಸಂಸ್ಕೃತಿಗೆ ಸೇರಿದ ಅಕಾಡೆಮಿಗಳು ಸ್ವತಂತ್ರ ಸಂಸ್ಥೆಗಳಲ್ಲವೇ, ಅವುಗಳ ಅಧ್ಯಕ್ಷರನ್ನು ಕರೆಸೋದು ಎಷ್ಟು ಸರಿ ಎಂದು ಪ್ರಶ್ನಿಸಿದಾಗ, “ಅವೆಲ್ಲಾ ಇಂಡಿಪೆಂಡೆಂಡ್ ಬಾಡಿ ಅಲ್ಲ, ಆಲ್ ಆರ್ ಪೊಲಿಟೀಷಿಯನ್ಸ್, ಅವರದ್ದೇ ಆದ ಸಿದ್ಧಾಂತಗಳನ್ನು ಇಟ್ಟುಕೊಂಡು ಅವರೂ ರಾಜಕೀಯ ಮಾಡುತ್ತಾರೆ. ಆದರೆ, ಅದನ್ನು ಅವರು ಹೇಳಿಕೊಳ್ಳದೇ ಇರಬಹುದು. ಅವರಿಗೆ ಅವರದ್ದೇ ಆದ ಹಕ್ಕುಗಳಿವೆ. ನಾನು ಕರೆದಾಗ, ಇಷ್ಟ ಇದ್ದೋರು ಬಂದಿದ್ದಾರೆ. ಕೆಲವರು ಬಂದಿಲ್ಲ” ಎಂದು ಹೇಳಿದರು.
“ನಾವು ಪಕ್ಷದ ಪದಾಧಿಕಾರಿಗಳನ್ನು, ರಾಜಕಾರಣಿಗಳನ್ನು ಬೇರೆ ಬೇರೆ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸುವುದಿಲ್ಲವೇ. ನೇಮಕ ಮಾಡೋದು ಸರ್ಕಾರ ಇಚ್ಛೆ. ಈಗ ನಿಮ್ಮನ್ನೂ ಪ್ರೆಸ್ ಸೆಕ್ರೆಟರಿ ಮಾಡೋದಿಲ್ವೆ, ನೀವು ಬೆಳಗಿಂದ ಸಾಯಂಕಾಲದ ತನಕ ನಮ್ಮ ಹಿಂದೆ ಓಡಾಡುವುದಿಲ್ಲವೇ? ನಮಗೋಸ್ಕರ ಬಡಿದಾಡೋದಿಲ್ವೆ. ಇದು ಕೂಡ ಅಷ್ಟೇ” ಎಂದು ಶಿವಕುಮಾರ್ ಸಮರ್ಥಿಸಿಕೊಂಡರು.